ಮಡಿಕೇರಿ, ಮೇ ೧೪: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ ೨೬ ಮತ್ತು ಎರಡನೇ ಹಂತದ ಚುನಾವಣೆ ಮೇ ೭ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಅಭ್ಯರ್ಥಿಗಳು, ಪಕ್ಷದ ಮುಖಂಡರುಗಳು ಇನ್ನೇನಿದ್ದರೂ ಜೂನ್ ೪ ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಎಷ್ಟು ಲೋಕಸಭಾ ಸ್ಥಾನಗಳನ್ನು ಗೆಲ್ಲಲ್ಲಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಕಳೆದ ಎರಡು ದಶಕಗಳ ಕರ್ನಾಟಕದ ಚುನಾವಣಾ ರಾಜಕೀಯ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ, ೨೦೦೪ ರಿಂದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಕ್ರಮೇಣವಾಗಿ ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಕಳೆದುಕೊಳ್ಳುತ್ತಾ ಬಂದಿದೆ.

೨೦೦೪ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ಹೊರತುಪಡಿಸಿ ಉಳಿದ ಎಲ್ಲಾ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳು ಒಂದು ವರ್ಷದ ಅವಧಿಯಲ್ಲಿ ನಡೆದಿವೆ.

೧೯೯೦ರ ದಶಕದಲ್ಲಿ ರಾಜ್ಯದಲ್ಲಿ ಬಲಿಷ್ಠವಾಗಿದ್ದ ಜನತಾದಳ (ಎಸ್) ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಬಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿಯುವ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತಿರುವ ವಿಭಿನ್ನ ರಾಜಕೀಯ ಚಿತ್ರಣ ರಾಜ್ಯದಲ್ಲಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ರಾಜ್ಯವೇ ಆಸರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಏಕೈಕ ರಾಜ್ಯ ಕರ್ನಾಟಕ. ಉಳಿದ ರಾಜ್ಯಗಳಲ್ಲಿ ಇಂದಿಗೂ ಕೂಡ ಬಿಜೆಪಿಗೆ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.

೧೯೭೭ರಿಂದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜನತಾ ಪಕ್ಷದ ನಡುವೆ ಪೈಪೋಟಿ ನಡೆಯುತ್ತಿತ್ತು. ೧೯೭೭ ರಿಂದ ೧೯೯೧ರವರೆಗಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತೀ ಬಾರಿ ೨೦ ಸ್ಥಾನಗಳಿಗಿಂತ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುತ್ತಿತ್ತು.

ಈ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜನತಾದಳ ಪೈಪೋಟಿ ನೀಡುತ್ತಿತ್ತು.

೧೯೭೦ ರಿಂದ ೧೯೯೬ವರೆಗೆ ರಾಜ್ಯದಲ್ಲಿ ಬಿಜೆಪಿ ಆಟಕ್ಕೂ ಲೆಕ್ಕಕ್ಕೂ ಇಲ್ಲದಂತಾಗಿತ್ತು. ಜನಸಂಘವೂ ನಂತರ ಬಿಜೆಪಿಯಾಗಿ ಪರಿವರ್ತನೆಗೊಂಡಿತ್ತು. ಜನತಾಪಾರ್ಟಿ ಇಬ್ಭಾಗವಾಗಿ ಜನತಾದಳ (ಎಸ್) ಆಗಿ ರೂಪುಗೊಂಡಿತ್ತು. ವಿಶೇಷವೇನೆಂದರೆ ರಾಜ್ಯದಲ್ಲಿ ೧೯೭೭ ರಿಂದ ೧೯೯೬ರವರೆಗೆ ಲೋಕಸಭಾ ಚುನಾವಣೆಯಲ್ಲಿ ೨೮ ಸ್ಥಾನಗಳಲ್ಲಿ ೨೬ರ ಆಸುಪಾಸಿನಲ್ಲಿ ಸ್ಥಾನಗಳನ್ನು ಪಡೆಯುತ್ತಿದ್ದ ಕಾಂಗ್ರೆಸ್ ಈ ಅವಧಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು.

೧೯೭೭ ರಿಂದ ೧೯೯೬ರವರೆಗೆ ರಾಜ್ಯದಲ್ಲಿ ಜನತಾಪಕ್ಷ, ಜನತಾದಳ, ಸಂಯುಕ್ತ ಜನತಾದಳ ಮತ್ತು ತೃತೀಯ ರಂಗ ಅಧಿಕಾರದಲ್ಲಿತ್ತು.

೧೯೯೬ ರಿಂದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಚಿತ್ರಣ ಬದಲಾಗತೊಡಗಿತ್ತು.

೧೯೯೬ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ ೧೬ ಸ್ಥಾನಗಳನ್ನು ಪಡೆದಿತ್ತು.

ಬಿಜೆಪಿ ಮೊದಲ ಬಾರಿಗೆ ಆರು ಸ್ಥಾನಗಳನ್ನು ಪಡೆದಿತ್ತು. ೨೩ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಸಂಖ್ಯೆ ಐದಕ್ಕೆ ಕುಸಿದಿತ್ತು.

೧೯೯೬ರಿಂದ ಜನತಾದಳವೂ ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ರಾಜ್ಯದಲ್ಲಿ ಪಡೆದ ನಂತರ ಬಿಜೆಪಿ ತನ್ನ ಪಾರುಪತ್ಯವನ್ನು ಮುಂದುವರಿಸುತ್ತಾ ಬಂದಿದೆ. ೨೦೦೪ ರಿಂದ ೨೦೧೯ವರೆಗಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ದಾಟಿಲ್ಲ.

೨೦೦೪ ಮತ್ತು ೨೦೦೯ ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದರು ಕೂಡ ೨೦೦೪ರಲ್ಲಿ ೦೮, ೨೦೦೯ ರಲ್ಲಿ ೦೬ ಸ್ಥಾನಗಳನ್ನು ಮಾತ್ರ ಪಡೆದಿತ್ತು.

ರಾಜ್ಯದಲ್ಲಿ ಪ್ರಬಲವಾಗಿದ್ದ ಜನತಾದಳವು ೧೬ ಸ್ಥಾನಗಳಿಂದ ಪ್ರತೀ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಕಳೆದುಕೊಳ್ಳುತ್ತಾ ಬಂದಿದೆ.

ರಾಜ್ಯದಲ್ಲಿ ಜನತಾದಳದ ಮುಖಂಡರು ಪಕ್ಷವನ್ನು ತೊರೆದ ಲಾಭವನ್ನು ರಾಜ್ಯದಲ್ಲಿ ಬಿಜೆಪಿ ಪಡೆದುಕೊಂಡು, ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನಗಳನ್ನು ಕಿತ್ತುಕೊಳ್ಳಲು ಯಶಸ್ವಿಯಾಗಿದೆ.

೧೯೯೬ರಲ್ಲಿ ರಾಜ್ಯದಲ್ಲಿ ೧೬ ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಪಕ್ಷವು ಇದೀಗ ಕೇವಲ ಒಂದು ಸ್ಥಾನಕ್ಕೆ ಸೀಮಿತಗೊಂಡಿದೆ.

ರಾಜ್ಯದೆಲ್ಲೆಡೆ ತನ್ನ ಪ್ರಭಾವನ್ನು ಬೆಳೆಸಿಕೊಂಡಿದ್ದ ಜೆಡಿಎಸ್ ಪಕ್ಷದ ನಾಯಕರ ಪಕ್ಷಾಂತರ ಪರ್ವದಿಂದ ಬರೀ ಹಳೆ ಮೈಸೂರು ಭಾಗಕ್ಕೆ ಸೀಮಿತಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಕೂಟ ಸೇರಿ ಹಳೆ ಮೈಸೂರು ಭಾಗದ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಆದರೆ ರಾಜ್ಯದಲ್ಲಿ ಪ್ರತೀ ಚುನಾವಣೆಯಲ್ಲಿ ತನ್ನ ಬಲವನ್ನು ಹೆಚ್ಚಿಸುತ್ತಾ ಬಂದಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾ ಬಂದಿರುವುದು ರಾಜ್ಯ ರಾಜಕೀಯದ ಮತ್ತೊಂದು ವಿಶೇಷ.

ರಾಜ್ಯದ ಜನತೆ ಇದುವರೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣಪ್ರಮಾಣದ ಬಹುಮತ ನೀಡಿಲ್ಲ.

೨೦೦೮ ರಲ್ಲಿ ಗಳಿಸಿದ್ದ ೧೧೦ ಸ್ಥಾನಗಳು ಬಿಜೆಪಿಯ ವಿಧಾನಸಭೆಯಲ್ಲಿ ಗಳಿಸಿರುವ ಅತೀ ಹೆಚ್ಚು ಸ್ಥಾನಗಳು.

ಆದರೆ ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣಪ್ರಮಾಣದಲ್ಲಿ ಬಹುಮತ ನೀಡಿದೆ.

೧೯೯೯, ೨೦೧೩, ೨೦೨೩ ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದಿಂದ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ.

೨೦೦೮ರಿಂದ ೨೦೧೩ರ ಬಿಜೆಪಿ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳು ಅಧಿಕಾರ ವಹಿಸಿದ್ದರು.

ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ಆಪರೇಷನ್ ಲೋಟಸ್ ಮೂಲಕ ಕೆಳಗಿಳಿಸಿತ್ತು. ಆದರೆ ೨೦೧೯ರಿಂದ ೨೦೨೩ರವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಈ ಅವಧಿಯಲ್ಲಿ ಎರಡು ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದರು.

೨೦೧೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೂಡ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕೇವಲ ೯ ಸ್ಥಾನಗಳಿಗಷ್ಟೇ ಸೀಮಿತಗೊಂಡಿತ್ತು.

೨೦೧೯ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಿದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ರಾಜ್ಯದ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦೧೯ ರಲ್ಲಿ ಅತೀ ಕಡಿಮೆ ಸ್ಥಾನಗಳನ್ನು ಗಳಿಸಿತ್ತು. ಕಳೆದ ಎರಡು ದಶಕಗಳ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ವಿಭಿನ್ನ ತೀರ್ಪು ನೀಡಿದ ಕರುನಾಡಿನ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರು ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬುದೇ ಕುತೂಹಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಎರಡು ಪಕ್ಷಗಳು ಕೂಡ ೨೦ರ ಗಡಿದಾಟುವ ವಿಶ್ವಾಸದಲ್ಲಿವೆ. - ಕೆ.ಎಂ ಇಸ್ಮಾಯಿಲ್ ಕಂಡಕರೆ