ಸೋಮವಾರಪೇಟೆ, ಮೇ ೧೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿ, ತಾಲೂಕಿನ ಹಂಡ್ಲಿ ಹಾಗೂ ಹುಲುಸೆ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಹುಲುಸೆ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಕಾಮಗಾರಿಗೆ ಚಾಲನೆ ನೀಡಿದ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಇಂದು ಹನಿ ನೀರಿಗೂ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜೀವಜಲದ ರಕ್ಷಣೆ ಆಗಬೇಕು. ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆ ಇದೆ. ಕೆರೆಗಳ ಪುನಶ್ಚೇತನದೊಂದಿಗೆ ನೀರನ್ನು ಉಳಿಸಬೇಕಾದದು ನಮ್ಮ ಕರ್ತವ್ಯ ವಾಗಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಭಗವಾನ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್, ಹಂಡ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಪ್ರಗತಿಬಂಧು ಮತ್ತು ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.