ಶನಿವಾರಸಂತೆ, ಮೇ ೧೪: ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡುತ್ತಿದ್ದು, ಒಳ್ಳೆಯ ಕಾರ್ಯಗಳು ಜನಮನ್ನಣೆಗಳಿಸಿ ಜನೋಪಯೋಗಿಯಾಗುತ್ತವೆ ಎಂದು ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಕೇಶವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯ ಹೇಮಾವತಿ ರೋಟರಿ ಸಂಸ್ಥೆಗೆ ಭೇಟಿ ನೀಡಿದ ಅವರು, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರಿಗೆ ಜಾಕೆಟ್, ಗ್ಲೌಸ್ ಇತರ ಪರಿಕರಗಳನ್ನು ವಿತರಿಸಿ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್ ವೃತ್ತದಲ್ಲಿ ರಸ್ತೆ ಮಾರ್ಗಸೂಚಿ ಫಲಕ ಅನಾವರಣಗೊಳಿಸಿ ನಂತರ ಖಾಸಗಿ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಗೆ ಹೊಸ ಸದಸ್ಯರ ನೋಂದಣಿಯಾದರೆ ಸದಸ್ಯತ್ವದಿಂದ ಸ್ನೇಹತ್ವ ಬೆಳೆಯುತ್ತದೆ ಎಂದರು. ಜಿಲ್ಲಾ ಉಪ ರಾಜ್ಯಪಾಲ ಎಂ.ಡಿ. ಲಿಖಿತ್ ಮಾತನಾಡಿ, ಪ್ರಸ್ತುತ ಹೇಮಾವತಿ ರೋಟರಿ ಸಂಸ್ಥೆಯಿAದ ಹಲವು ಸಮಾಜಮುಖಿ ಕಾರ್ಯಕ್ರಮಗಳು ಆಗಿದ್ದು, ಮುಂದೆಯೂ ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುವಂತೆ ಸೂಚಿಸಿದರು.

ರೋಟರಿ ವಲಯ ಸೇನಾನಿ ಹೆಚ್.ಎಂ. ದಿವಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೇಮಾವತಿ ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಎ. ಅಮೃತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಭಾನುಪ್ರಕಾಶ್, ಪ್ರಮುಖರಾದ ಮಾದವ್ ಲಾಲ್, ಸಾಗರ್, ಡಾ. ಉದಯಕುಮಾರ್, ಪ್ರವೀಣ್, ದಿನೇಶ್ ಇತರರು ಹಾಜರಿದ್ದರು.