ಸೋಮವಾರಪೇಟೆ, ಮೇ ೧೪: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡೆಮ್ಮೆ ಧಾಳಿ ನಡೆಸಿದ ಪರಿಣಾಮ ಕೃಷಿಕ ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ.

ತಾಕೇರಿ ಗ್ರಾಮದ ನಾಡ್ನಳ್ಳಿ ಮನೆ ನಿವಾಸಿ ಜೋಯಪ್ಪ ಅವರ ಪತ್ನಿ ಎನ್.ಜೆ. ಮನು ಎಂಬವರೇ ಗಾಯಗೊಂಡವರು. ಇಂದು ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದಿಢೀರನೇ ಕಾಡೆಮ್ಮೆ ಎದುರಾಗಿದ್ದು, ಓಡುವ ಭರದಲ್ಲಿ ಮನು ಅವರ ಮೇಲೆ ಧಾಳಿ ನಡೆಸಿದೆ.

ಘಟನೆಯಿಂದ ಮಹಿಳೆಯ ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಡ ಕೃಷಿಕರಾಗಿರುವ ಮನು ಅವರ ಚಿಕಿತ್ಸೆಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕು. ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡೆಮ್ಮೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಜಿ. ಪೊನ್ನಪ್ಪ ಒತ್ತಾಯಿಸಿದ್ದಾರೆ.