ಶ್ರೀಮಂಗಲ, ಮೇ ೧೫: ಈಗಾಗಲೇ ಕೊಡಗಿನಲ್ಲಿ ಭೂಮಾಫಿಯಾಗಳು, ಪ್ರಭಾವಿಗಳು ಕೊಡಗಿನಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದು ಜಾಗ ಖರೀದಿಸಿ ಕೃಷಿಯೇತರ ಮತ್ತು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಯಲ್ಲಿ ತೊಡಗಿದ್ದು, ಇದರಿಂದ ಕೊಡಗಿನ ಭೂಸ್ವರೂಪಕ್ಕೆ ದೊಡ್ಡ ಅಪಾಯ ಉಂಟಾಗಲಿದೆ, ಕೂಡಲೇ ಇಂತಹ ಭೂಪರಿವರ್ತನೆಗಳನ್ನು ನಿಲ್ಲಿಸಿ, ಕಳೆದ ೧೦ ವರ್ಷಗಳಿಂದ ಆಗಿರುವ ವಾಣಿಜ್ಯ ಭೂಪರಿವರ್ತನೆಗಳನ್ನು ರದ್ದು ಗೊಳಿಸಬೇಕೆಂದು ಕೊಡಗು ಮಾರಕ ಯೋಜನೆಗಳ ವಿರೋಧಿ ಹೋರಾಟ ವೇದಿಕೆಯ ಪ್ರಮುಖರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಭೆ ನಡೆಸಿ, ಮಾಧ್ಯಮದೊಂದಿಗೆ ವಿವರಿಸಿದ ವೇದಿಕೆಯ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರು ಕೊಡಗಿನ ಭೂಸ್ವರೂಪ ರಕ್ಷಣೆಗೆ ಕೊಡಗು ಬಚಾವೊ ಆಂದೋಲನವನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು.

ಕೊಡಗಿನಲ್ಲಿ ಅವ್ಯಹತವಾಗಿ ಭೂ ಪರಿವರ್ತನೆಯಿಂದ ಪರಿಸರ ನಾಶವಾಗಿ ಕೊಡಗಿನ ಮೂಲ ಭೂ ಸ್ವರೂಪ ಬದಲಾವಣೆ ಆಗುತ್ತಿದ್ದು, ಕೊಡಗಿನಲ್ಲಿ ಸಕಾಲದಲ್ಲಿ ಮಳೆ ಸುರಿಯದೆ ವಾಣಿಜ್ಯ ಭೂ ಪರಿವರ್ತನೆಯಿಂದ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಅಕಾಲಿಕ ಮಳೆ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದೆ, ಅತಿಯಾದ ತಾಪಮಾನ ಸಹ ಕಂಡು ಬಂದಿದ್ದು, ಇದರಿಂದ ಕೊಡಗಿನ ಜಲಮೂಲಗಳಿಗೆ ನದಿಗಳ ಅಸ್ತಿತ್ವಕ್ಕೆ ಜೀವಸಂಕುಲಕ್ಕೆ ದೊಡ್ಡ ದುಷ್ಪರಿಣಾಮ ಬೀರುತ್ತಿದೆ, ನದಿಗಳು ಸಹ ಕಲುಷಿತಗೊಳ್ಳುತ್ತಿದೆ. ಈಗಲೇ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೊಡಗು ತನ್ನ ಭೂ ಸ್ವರೂಪವನ್ನು ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ವೇದಿಕೆಯು ೧೦ ವರ್ಷಗಳಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಸರಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದು ಈ ಬಗ್ಗೆ ಯಾವುದೇ ಪರಿಹಾರ ಕಂಡುಬAದಿಲ್ಲ. ಯಾವುದೇ ಸರ್ಕಾರಗಳಿಂದಲೂ ಸೂಕ್ತ ಸ್ಪಂದನೆ ದೊರೆತಿಲ್ಲ ಕೊಡಗಿನ ಪರಿಸರದ ಹಸಿರು ಹೊದಿಕೆಯಾದ ಕಾಫಿ ತೋಟ ಹಾಗೂ ಜಲ ಸಂರಕ್ಷಣೆಯನ್ನು ಮಾಡಿ ಅಂತರ್ಜಲವನ್ನು ವೃದ್ಧಿಸುವ ಭತ್ತದ ಗದ್ದೆಗಳು ನಿರಂತರವಾಗಿ ವಾಣಿಜ್ಯ ಭೂಪರಿವರ್ತನೆಗೆ ಬಳಸಲಾಗುತ್ತಿದ್ದು, ಇದರಿಂದ ನೀರಿನ ಮೂಲಗಳಿಗೆ ದೊಡ್ಡ ಹೊಡೆತ ಬೀಳಲಿದೆ. ನಿರಂತರವಾಗಿ ನೂರಾರು ಎಕರೆ ಭೂ ಪರಿವರ್ತನೆಯಿಂದ ತೋಟಗಳಲ್ಲಿರುವ ಸಾವಿರಾರು ಮರಗಳು ಹನನವಾಗುತ್ತವೆ. ಗದ್ದೆಗಳು ಸಹ ಕೃಷಿಯಿಂದ ವಿಮುಖವಾಗಿ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗುತ್ತದೆ. ಇದರಿಂದ ಜಿಲ್ಲೆಯ ನದಿಗಳು ಮುಂದಿನ ದಿನಗಳಲ್ಲಿ ಬರಡಾಗುವ ಅಪಾಯವಿದೆ. ಈ ನದಿಗಳನ್ನು ಕೊಡಗು ಮಾತ್ರವಲ್ಲದೆ ದಕ್ಷಿಣ ಭಾರತ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳು ಸಹ ಅವಲಂಬಿಸಿದ್ದು ಜಲಮೂಲಗಳು ಕಲುಷಿತವಾಗಿ ನೀರಿನ ಅಭಾವಗಳು ಸಹ ಒಂದೆಡೆ ಉಂಟಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಭೂ ಮಾಫಿಯಾಗಳಿಂದ ಹಾಗೂ ಪ್ರಭಾವಿಗಳಿಂದ ಸಾವಿರಾರು ಎಕರೆ ಜಾಗ ಕೈವಶದಲ್ಲಿದ್ದು, ಈಗಲೂ ಸಹ ಸಾಮಾನ್ಯ ಜನರಿಂದ ದುಬಾರಿ ದರಕ್ಕೆ ಖರೀದಿ ಮುಂದುವರೆದಿದೆ. ಇದನ್ನು ಮುಂದಿನ ದಿನಗಳಲ್ಲಿ ವಾಣಿಜ್ಯ ಭೂಪರಿವರ್ತನೆ ಮಾಡುವ ಉದ್ದೇಶದಿಂದಲೇ ಹಾಗೂ ಕೃಷಿ ಜಾಗ ಖರೀದಿಸಿ ಆದಾಯ ತೆರಿಗೆ ವಂಚಿಸುವ ದುರುದ್ದೇಶದಿಂದ ಜಾಗ ಖರೀದಿ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಿರಂತರವಾಗಿ ಇದೇ ರೀತಿ ಭೂ ಪರಿವರ್ತನೆ ಆದರೆ ಸ್ಥಳೀಯರು ಸ್ಥಳೀಯರ ಮೇಲೆ ದಬ್ಬಾಳಿಕೆ ಹೆಚ್ಚಾಗಲಿದ್ದು ಶಾಂತಿ ಕದಡುವ ಆತಂಕವಿದೆ. ಹೊರಗಿನಿಂದ ಬರುವ ಕಾನೂನು ಬಾಹಿರ ಚಟುವಟಿಕೆ ನಡೆಸುವವರು ಇಲ್ಲಿ ಆಶ್ರಯ ಪಡೆಯುವ ಅಪಾಯವಿದೆ.ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವುದನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘ ಜಿಲ್ಲಾಧ್ಯಕ್ಷ ಮುಕ್ಕಾಟೀರ ಪ್ರವೀಣ್ ಭೀಮಯ್ಯ ಅವರು ಮಾತನಾಡಿ, ಕೊಡಗಿನಲ್ಲಿ ಕಾಫಿ ತೋಟ ಹಾಗೂ ಕೃಷಿ ಉದ್ದೇಶದಿಂದ ಜಾಗ ಖರೀದಿಸಿ ಇದೀಗ ವಾಣಿಜ್ಯ ಉದ್ದೇಶದಿಂದ ಭೂಪರಿವರ್ತನೆ ಮಾಡುತ್ತಿರುವ ಕಂಪನಿಗಳು ತಮ್ಮ ಭೂ ಪರಿವರ್ತನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಇವೆಲ್ಲ ಕಂಪನಿಗಳನ್ನು ಕೊಡಗು ಬಿಟ್ಟು ತೊಲಗಿ ಎಂಬ ಆಂದೋಲನದ ಮೂಲಕ ತೀವ್ರ ತರದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಕೊಡಗು ಹಿಂದೂ ಬಿಸಿನೆಸ್ ಫೋರಂ ಕಾರ್ಯದರ್ಶಿ ಮಚ್ಚಮಾಡ ಅನೀಶ್ ಮಾದಪ್ಪ, ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಾಮಾಜಿಕ ಕಾರ್ಯಕರ್ತ ಉಳುವಂಗಡ ಲೋಹಿತ್ ಭೀಮಯ್ಯ ಹಾಜರಿದ್ದರು.