ಪೊನ್ನಂಪೇಟೆ, ಮೇ ೧೫: ಎಮ್ಮೆಮಾಡಿನ ಸೂಫಿ ಶಹೀದ್ ವಲಿಯುಲ್ಲಾರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕುತ್ತುನಾಡ್ ಉರೂಸ್ ನೇರ್ಚೆ ತಾ.೨೦ರಂದು ಜರುಗಲಿದೆ.
ಕುತ್ತುನಾಡ್ ಉರೂಸ್ ನೇರ್ಚೆ ಬಿ ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿರುವ ಸೂಫಿ ಶಹೀದ್ ಅವರ ನೇರ್ಚೆ ಬಿಡಾರದ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೮:೩೦ ಗಂಟೆಗೆ ಕೊಂಗಣ ಗ್ರಾಮದ ಕರ್ತೂರ ಕುಟುಂಬದ ತಕ್ಕ ಮುಖ್ಯಸ್ಥ ಕೆ.ಕೆ. ದೇವಯ್ಯ ಮತ್ತು ಬೇಗೂರು-ಮಾಪಿಳ್ಳೆತೋಡು ಗ್ರಾಮದ ತಕ್ಕ ಮುಖ್ಯಸ್ಥ ಆಲೀರ ಎ. ಕುಟ್ಟಿಯಾಲಿ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಬೇಗೂರು-ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬ ಅಬ್ದುಲ್ ರಜಾಕ್ ಸಖಾಫಿ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ ೯ಕ್ಕೆ ಭಂಡಾರ ಜಮಾಯಿಸುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದಾದ ನಂತರ ಬೆಳಿಗ್ಗೆ ೧೦ ಗಂಟೆಗೆ ಹಾಲು-ಅನ್ನ ಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ ೧೨ ಗಂಟೆಗೆ ಮೌಲೂದ್ ಪಾರಾಯಣ, ಇದಾದ ನಂತರ ಹರಕೆ ರೂಪದಲಿs್ಲ ಬಂದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.