ಸೋಮವಾರಪೇಟೆ, ಮೇ ೧೬: ಕಳೆದ ತಾ.೯ರಂದು ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಅತ್ಯಂತ ಅಮಾನುಷ, ಬರ್ಬರವಾಗಿ ಹತ್ಯೆಯಾದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿ ಪುತ್ರಿ, ಎಸ್ಎಸ್ಎಲ್ಸಿ ತೇರ್ಗಡೆಯಾಗಿದ್ದ ಉದಿಯಂಡ ಎಸ್.ಮೀನಾ (೧೬) ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರದಿಂದ ವಿಶೇಷ ಅಭಿಯೋಜಕರನ್ನು ನೇಮಕ ಮಾಡಲಾಗುವುದು. ಇದರೊಂದಿಗೆ ವಿಶೇಷ ನ್ಯಾಯಾಲಯದ ಮೂಲಕ ಆರೋಪಿಗೆ ಶೀಘ್ರ ಶಿಕ್ಷೆಯಾಗುವಂತೆ ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ
ಡಾ. ಮಂಥರ್ ಗೌಡ ಅವರ ಮನವಿಯ ಮೇರೆಗೆ ಕುಂಬಾರಗಡಿಗೆ ಗ್ರಾಮದ ಮೀನಾಳ ಮನೆಗೆ ತೆರಳಿ, ಪೋಷಕರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಕೃತ್ಯವನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಆಕೆಯನ್ನು ವಾಪಸ್ ಕರೆತರಲೂ ಸಾಧ್ಯವಿಲ್ಲ. ಆದರೆ ಸರ್ಕಾರದಿಂದ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಿಕೊಡುವ ಕೆಲಸ ಆಗಲಿದೆ. ಸರ್ಕಾರ ಈ ಬಗ್ಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದರು.
ಈ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ಅಭಿಯೋಜಕರನ್ನು ಸರ್ಕಾರವೇ ನೇಮಿಸಲಿದೆ. ವಿಶೇಷ ನ್ಯಾಯಾಲಯಗಳ ಮೂಲಕ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈಗಾಗಲೇ ಕ್ರಮಕೈಗೊಂಡಿದ್ದು, ಮೀನಾಳ ಪ್ರಕರಣದಲ್ಲೂ ಇಂತಹದೇ ಕ್ರಮ ಜರುಗಲಿದೆ. ಆರೋಪಿಗೆ ಕಾನೂನು ಪ್ರಕಾರ ಉಗ್ರ ಹಾಗೂ ಶೀಘ್ರ ಶಿಕ್ಷೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಸಹಕಾರದ ಭರವಸೆ
ಪೋಷಕರೊಂದಿಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಗೃಹ ಸಚಿವರು, ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಮದುವೆ ವಿಚಾರಕ್ಕೆ ಸಂಬAಧಿಸಿದAತೆ ಮೊಣ್ಣಂಡ ಪ್ರಕಾಶ್ ಎಂಬವನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದನ್ನು ನಾವ್ಯಾರೂ ಸಹಿಸಲು ಸಾಧ್ಯವಿಲ್ಲ ಎಂದ ಸಚಿವರು, ಪ್ರತಿದಿನ ಮೂರೂವರೆ ಕಿ.ಮೀ. ಕಾಲ್ನಡಿಗೆಯಲ್ಲಿ
(ಮೊದಲ ಪುಟದಿಂದ) ಶಾಲೆಗೆ ತೆರಳಿ ಎಸ್ಎಸ್ಎಲ್ಸಿ ತೇರ್ಗಡೆಯಾಗಿದ್ದ ಮೀನಾಳ ಫಲಿತಾಂಶ ಬಂದ ದಿನವೇ ಹತ್ಯೆ ನಡೆದಿದೆ. ಮದುವೆ ವಿಚಾರದಲ್ಲಿ ಘಟನೆ ನಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಮಾಧ್ಯಮಗಳೆದುರು ವಿವರಿಸಿದರು.
ಆಕೆಗೆ ಇನ್ನೂ ೧೬ ವರ್ಷ. ಆತನಿಗೆ ೩೪ ವರ್ಷ. ಮೀನಾಳ ತಂದೆ ತಾಯಿಯನ್ನು ಒತ್ತಾಯ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇಲಾಖೆಯವರಿಗೆ ತಿಳಿದ ನಂತರ ಸ್ಥಳಕ್ಕೆ ಬಂದು ಈಗಲೇ ಮದುವೆ ಮಾಡಿಕೊಳ್ಳಬಾರದು. ೧೮ ವರ್ಷ ಆದ ನಂತರ ಮದುವೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಮನೆಗೆ ಬಂದು ತಂದೆ-ತಾಯಿ ಜೊತೆ ಗಲಾಟೆ ಮಾಡಿ, ಅವರು ಒಪ್ಪದಿದ್ದಾಗ ತಾಯಿಯ ಕೈಗೆ ಹಲ್ಲೆ ಮಾಡಿದ್ದಾನೆ. ನಂತರ ಬಾಲಕಿಯನ್ನು ಎಳೆದುಕೊಂಡು ಹೋಗಿ ತಲೆ ಕತ್ತರಿಸಿ ಹತ್ಯೆ ಮಾಡಿದ್ದಾನೆ. ರುಂಡವನ್ನು ಕಾಡಿನಲ್ಲಿ ಇಟ್ಟಿದ್ದಾನೆ ಎಂದು ವಿವರಿಸಿದ ಗೃಹಸಚಿವರು, ಇದು ಮನುಷ್ಯರಾದವರು ಯಾರೂ ಕೂಡ ಒಪ್ಪಿಕೊಳ್ಳುವ ಕೃತ್ಯವಲ್ಲ ಎಂದರು.
ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ಎಲ್ಲಾ ರೀತಿಯಲ್ಲೂ ತನಿಖೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಲಿದೆ. ಆಕೆಯನ್ನು ವಾಪಸ್ ಕರೆತರಲು ಸಾಧ್ಯವಿಲ್ಲ. ಆದರೆ ಕುಟುಂಬಕ್ಕೆ ಸರ್ಕಾರ ಶೀಘ್ರ ನ್ಯಾಯ ಒದಗಿಸಿ ಕೊಡಲಿದೆ ಎಂದು ಭರವಸೆ ನೀಡಿದರು.
ಬಡ ಕೃಷಿಕರಾಗಿರುವ ಸುಬ್ರಮಣಿ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಕುಟುಂಬದ ಬಡತನವನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಕುಟುಂಬಕ್ಕೆ ಈ ರೀತಿಯ ಆಘಾತವಾಗಿರುವುದು ದುರದೃಷ್ಟಕರ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪರಿಹಾರ ವಿಚಾರದಲ್ಲಿ ಈಗಲೇ ಏನೂ ಹೇಳಲು ಆಗುವುದಿಲ್ಲ. ನೀತಿ ಸಂಹಿತೆ ತೆರವು ಆಗಿ ಫಲಿತಾಂಶ ಬಂದ ನಂತರ ಕುಟುಂಬಕ್ಕೆ ಹೆಚ್ಚಿನ ಸಹಕಾರ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಪರಿಹಾರದ ಬಗ್ಗೆಯೂ ಗಮನ ಹರಿಸಲಿದೆ ಎಂದು ತಿಳಿಸಿದರು.
ಅಧಿಕಾರಿಗಳ ಬಗ್ಗೆಯೂ ತನಿಖೆ
ಅಪ್ರಾಪ್ತೆಯೊಂದಿಗೆ ನಿಶ್ಚಿತಾರ್ಥ ಕ್ಕೂ ಮುನ್ನವೇ ಆರೋಪಿ ಪ್ರಕಾಶ್ ಮದುವೆಗೆ ಒತ್ತಾಯ ಮಾಡಿದ್ದ ಎಂಬ ಮಾಹಿತಿ ಬಂದಿತ್ತು. ಆಗಲೇ ಅಧಿಕಾರಿಗಳು ಬಂದು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಕೇವಲ ಮುಚ್ಚಳಿಕೆ ಮಾತ್ರ ಬರೆಸಿಕೊಂಡಿದ್ದಾರೆ. ಒಂದು ಕಡೆ ಅಧಿಕಾರಿಗಳೂ ಈ ಘಟನೆಗೆ ಕಾರಣರಾದರಾ? ಎಂಬ ಪ್ರಶ್ನೆಗೆ, ಅದೆಲ್ಲವೂ ತನಿಖೆ ನಂತರ ತಿಳಿಯಲಿದೆ. ಅಧಿಕಾರಿಗಳು ಏನು ಹೇಳಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಲಿದೆ ಎಂದರು.
ರಾಜ್ಯದಲ್ಲಿ ಈ ರೀತಿಯ ಅಮಾನುಷ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದ ಸಂದರ್ಭ, ಜನ ಕಾನೂನನ್ನು ಕೈಗೆತ್ತಿಕೊಂಡಾಗ ಈ ರೀತಿಯ ಕೃತ್ಯ ನಡೆಯುತ್ತದೆ. ಈ ಪ್ರಕರಣದಲ್ಲಿ ಪೂರ್ವನಿಯೋಜಿತ ಅಲ್ಲ ಎಂಬುದು ತಿಳಿದು ಬರುತ್ತಿದೆ. ಮೇಲ್ನೋಟಕ್ಕೆ ಮದುವೆ ವಿಚಾರದಲ್ಲಿ ನಡೆದ ಹತ್ಯೆ ಎಂಬುದು ಗೊತ್ತಾಗಿದೆ. ವಿಚಾರಣೆ ನಂತರ ಎಲ್ಲಾ ವಿಷಯಗಳು ಹೊರಬರುತ್ತದೆ. ತನಿಖೆ ಆಗುವವರೆಗೂ ಹೆಚ್ಚಿನ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಜನತೆಯ ಸರ್ಟಿಫಿಕೇಟ್
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳ ಮೇಲೆ ಗೃಹ ಸಚಿವರು-ಮುಖ್ಯ ಮಂತ್ರಿಗಳಿಗೆ ಹಿಡಿತವಿಲ್ಲ’ ಎಂದು ಬಿಜೆಪಿಯ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆ ಪ್ರಸ್ತಾಪಿಸಿದ ಸಂದರ್ಭ, ಇದಕ್ಕೆ ತಿರುಗೇಟು ನೀಡಿದ ಪರಮೇಶ್ವರ್, ಅವರೂ ಸಹ ಮುಖ್ಯಮಂತ್ರಿಯಾಗಿದ್ದವರು. ಅವರ ಅಧಿಕಾರಾವಧಿಯಲ್ಲಿ ಎಷ್ಟು ಕೊಲೆಗಳು, ಎಷ್ಟು ರೇಪ್ಗಳಾಗಿವೆ. ಕ್ರಿಮಿನಲ್ ಚಟುವಟಿಕೆ ಎಷ್ಟಿತ್ತು? ಎಂಬುದನ್ನು ತೆಗೆದರೆ ಎಲ್ಲವೂ ಗೊತ್ತಾಗುತ್ತದೆ. ಅವರ ಕಾಲದ ಅಂಕಿ ಅಂಶ ತೆರೆದಿಟ್ಟರೆ ತಿಳಿಯುತ್ತೆ. ಅಂತವರಿAದ ನಮಗೆ, ನಮ್ಮ ಸರ್ಕಾರಕ್ಕೆ ಸರ್ಟಿಫಿಕೇಟ್ ಬೇಡ. ಜನರೇ ನಮ್ಮ ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದರು.
ಮೇ ೪-೫ರಂದು ಸೋಮವಾರ ಪೇಟೆಯಲ್ಲಿ ವರದಕ್ಷಿಣೆ ಹಾಗೂ ಸಿಹಿ ನೀಡಿಲ್ಲ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಯುವತಿಯ ಮದುವೆ ಮುರಿದು ಬಿದ್ದ ಪ್ರಕರಣದಲ್ಲಿ ವರನ ಕಡೆಯವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಆದರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದ ಸಂದರ್ಭ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲೂ ನೊಂದವರಿಗೆ ನ್ಯಾಯ ಲಭಿಸಲಿದೆ ಎಂದು ಭರವಸೆ ನೀಡಿದರು.
ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬAಧಿಸಿದAತೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ಗೃಹ ಸಚಿವ ಜಿ. ಪರಮೇಶ್ವರ್ ನಿರಾಕರಿಸಿದರು. ಇದಕ್ಕೂ ಮುನ್ನ ಬಾಲಕಿಯ ಹತ್ಯೆ ನಡೆದ ಸ್ಥಳ ಹಾಗೂ ಬಾಲಕಿಯ ರುಂಡವನ್ನು ಇಟ್ಟಿದ್ದ ಸ್ಥಳವನ್ನು ಗೃಹ ಸಚಿವರು ವೀಕ್ಷಿಸಿದರು. ಸ್ಥಳದಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿಗಳು, ಇತರ ಪೊಲೀಸರಿಂದ ಅಂದಿನ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ನಂತರ ಮೀನಾಳ ಮನೆಗೆ ತೆರಳಿ ತಂದೆ ಸುಬ್ರಮಣಿ, ತಾಯಿ ಜಾನಕಿ, ಸಹೋದರರಾದ ಮೊಣ್ಣಪ್ಪ, ದಿಲೀಪ್, ಸಹೋದರಿಯರಾದ ಸವಿತ, ಪುಷ್ಪ, ದೀನಾ ಅವರುಗಳಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ವೈಯುಕ್ತಿಕವಾಗಿ ನೆರವಿನ ಹಸ್ತ ಚಾಚಿದ ಜಿ.ಪರಮೇಶ್ವರ್, ಕುಟುಂಬದ ನೆರವಿಗೆ ಸರ್ಕಾರ ನಿಲ್ಲಲಿದೆ. ಸ್ಥಳೀಯ ಶಾಸಕ ಡಾ. ಮಂತರ್ ಗೌಡ ಅವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಧೈರ್ಯ ತುಂಬಿದರು.
ಸುಬ್ರಮಣಿ ಅವರ ಮನೆಯ ಪರಿಸ್ಥಿತಿ, ಬಡತನವನ್ನು ಖುದ್ದಾಗಿ ವೀಕ್ಷಿಸಿದ ಸಚಿವರು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ಸುಬ್ರಮಣಿ ಅವರಿಗೆ ಜಂಬೂರು ಪುನರ್ವಸತಿ ಕೇಂದ್ರದಲ್ಲಿ ಸುಸಜ್ಜಿತ ಮನೆ ಒದಗಿಸುವಂತೆ ಸ್ಥಳೀಯರು ಗಮನ ಸೆಳೆದರು. ಈ ಬಗ್ಗೆ ಶಾಸಕ ಮಂಥರ್ ಗೌಡ ಅವರೊಂದಿಗೆ ಚರ್ಚಿಸಿದ ಸಚಿವರು, ನಿಯಮಾನು ಸಾರ ಗಮನ ಹರಿಸುವಂತೆ ತಿಳಿಸಿದರು.
ಗೃಹ ಸಚಿವರ ಭೇಟಿ ಸಂದರ್ಭ ಶಾಸಕ ಡಾ. ಮಂಥರ್ ಗೌಡ, ಡಿಐಜಿ ಅಮಿತ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಅಡಿಷನಲ್ ಎಸ್.ಪಿ. ಸುಂದರ್ ರಾಜ್, ಡಿವೈಎಸ್ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಕುಮಾರ್, ಠಾಣಾಧಿಕಾರಿ ರಮೇಶ್ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್, ವಿ.ಪಿ. ಶಶಿಧರ್, ಕೆ.ಎ. ಯಾಕೂಬ್, ಶೀಲಾ ಡಿಸೋಜ, ಕೆ.ಎ.ಆದಂ, ಬಗ್ಗನ ಅನಿಲ್, ಚೇತನ್, ನಟೇಶ್ ಗೌಡ, ಸುರಯ್ಯಾ ಅಬ್ರಾರ್ ಸೇರಿದಂತೆ ಇತರರು ಇದ್ದರು.