ಮಡಿಕೇರಿ, ಮೇ ೧೬: ಪುಟಾಣಿ ಮಕ್ಕಳಿಗೆ ಪೌಷ್ಟಿಕ ಆಹಾರ, ಸುಂದರ ವಾತಾವರಣದೊಂದಿಗೆ ಆರೋಗ್ಯ ವೃದ್ಧಿಗೆ ಕಾರ್ಯನಿರ್ವಹಿಸಬೇಕಿದ್ದ ಶಿಶಿಪಾಲನಾ ಕೇಂದ್ರವು ಇಕ್ಕಟ್ಟಿನ ಗೂಡಾಗಿದ್ದು, ಇಲ್ಲಿ ಪುಟಾಣಿಗಳಿಗೆ ಶುದ್ಧ ಗಾಳಿಯೇ ಸಿಗುತ್ತಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿಯೇ ಈ ರೀತಿಯ ಅವ್ಯವಸ್ಥೆ ಎದುರಾಗಿದ್ದು ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಉದ್ಯೋಗಸ್ಥ ತಾಯಂದಿರು ತಾವುಗಳು ಕೆಲಸಕ್ಕೆ ತೆರಳುವ ವೇಳೆ ತಮ್ಮ ಮಕ್ಕಳನ್ನು, ಆರೈಕೆ-ಆಸರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯಲ್ಲಿ ಪ್ರಾರಂಭವಾದ ಶಿಶು ಪಾಲನಾ ಕೇಂದ್ರಗಳಲ್ಲಿ ಬಿಟ್ಟು ಹೋಗುವ ಸೌಲಭ್ಯವಿದೆ. ಈ ಸೌಲಭ್ಯದಡಿ ೨೦೨೨ರ ನಬೆಂಬರ್‌ನಲ್ಲಿ ಮಡಿಕೇರಿ ಜಿಲ್ಲಾಡಳಿತ ಭವನದ ಕೆಳ ಅಂತಸ್ತಿನ ಕೊಠಡಿಯಲ್ಲಿ ಪ್ರಾರಂಭವಾದ ವಾತ್ಸಲ್ಯ ಶಿಶುಪಾಲನಾ ಕೇಂದ್ರವು ಮಕ್ಕಳಿಗೆ ವಿಶ್ರಾಂತಿ ಕೇಂದ್ರದ ಬದಲು ಜೈಲಿನಂತಾಗಿದೆ. ಕೆಳ ಅಂತಸ್ತಿನಲ್ಲಿರುವ ಈ ಸಣ್ಣ ಕೊಠಡಿಯಲ್ಲಿ ೧೬ ಮಕ್ಕಳು ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಇಕ್ಕಟ್ಟಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇಬ್ಬರು ಸಹಾಯಕರು, ಓರ್ವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಫ್ಯಾನ್ ಕೂಡ ಇಲ್ಲದ ಈ ಕೊಠಡಿಯಲ್ಲಿ ಗಾಳಿಯ ಹೊರ ಚಲನೆಗೆ ಯಾವುದೇ ರೀತಿಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೆ ಪುಟಾಣಿ ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ

(ಮೊದಲ ಪುಟದಿಂದ) ಅತ್ಯಗತ್ಯವಿರುವ ಶುದ್ಧ ಗಾಳಿ ಸಿಗದಂತಾಗಿದೆ. ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯು ಈ ಕೇಂದ್ರದ ಉಸ್ತುವಾರಿಯನ್ನು ಸ್ತಿçà ಶಕ್ತಿ ಒಕ್ಕೂಟಕ್ಕೆ ವಹಿಸಿದ್ದು, ಅನುದಾನದ ಕೊರತೆ ಇದಕ್ಕೆ ಕಾರಣ ಎಂದು ಒಕ್ಕೂಟದ ಪ್ರಮಖರು ‘ಶಕ್ತಿ’ಗೆ ಮಾಹಿತಿ ಇತ್ತಿದ್ದಾರೆ. ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಶಿಶುಪಾಲನ ಕೇಂದ್ರ ಎಂದು ಗುರುತಿಸಲಾದ ಜಿಲ್ಲಾಡಳಿತ ಭವನದ ಕೆಳ ಅಂತಸ್ತಿನ ಒಂದು ಮೂಲೆಯನ್ನು ಮಾರ್ಪಡಿಸಿ ಅದಕ್ಕೆ ಕೊಠಡಿ ರೂಪ ನೀಡಿರುವುದಾಗಿ ಹೇಳಿದ್ದಾರೆ. ೧೬ ಮಂದಿ ಪುಟಾಣಿಗಳು ವಿಶ್ರಾಂತಿ ಪಡೆಯಲು ಇರುವುದೊಂದೇ ಹಾಸಿಗೆ. ಶೌಚಾಲಯ ವ್ಯವಸ್ಥೆಯು ಇಲ್ಲಿ ಇಲ್ಲವಾಗಿದ್ದು, ಜಿಲ್ಲಾಡಳಿತ ಭವನದ ಪಾರ್ಕಿಂಗ್ ಸ್ಥಳದಲ್ಲಿನ ಶೌಚಾಲಯವನ್ನು ಮಕ್ಕಳು ಬಳಸಬೇಕಾಗಿದೆ. ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುವವರ ಮಕ್ಕಳೆ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೂ ಈ ಅವ್ಯವಸ್ಥೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೆ ಇರುವುದು ಆಶ್ಚರ್ಯ ಮೂಡಿಸಿದೆ.

ತಕ್ಷಣವೇ ಸಂಬAಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಬೆಳೆಯುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ‘ಶಕ್ತಿ'ಯ ಮೂಲಕ ಆಗ್ರಹಿಸಿದ್ದಾರೆ. -ಪಿಜಿಆರ್