ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮೇ ೧೬: ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರು ಹೊಂದಿರುವ ಆಯುಧಗಳನ್ನು ಮುಖ್ಯವಾಗಿ ಕೋವಿಯನ್ನು ಪೊಲೀಸ್ ಇಲಾಖೆಯ ವಶಕ್ಕೆ ನೀಡುವುದು ನಂತರ ಅದನ್ನು ಹಿಂಪಡೆದುಕೊಳ್ಳುವುದು ಕೃಷಿಕರಿಗೆ ತಲೆಬಿಸಿಯ ಕೆಲಸ ಆಗಿತ್ತು. ಏಕೆಂದರೆ ಗ್ರಾಮೀಣ ಭಾಗದಲ್ಲಿ ಇರುವ ಕೃಷಿಕರು ಕಾಡಾನೆ ಕಾಟದಿಂದಾಗಿ ಜೀವಭಯದಿಂದಲೇ ಬದುಕುವ ಪರಿಸ್ಥಿತಿ ಬಂದಿತ್ತು. ಈ ಬಾರಿ ಚುನಾವಣಾ ಅಧಿಕಾರಿಗಳು ಪೊಲೀಸ್ ಇಲಾಖೆಯ ಶಿಫಾರಸಿನ ಮೇರೆಗೆ ಅವಶ್ಯಕತೆ ಉಳ್ಳವರಿಗೆ ಕೋವಿ ಠೇವಣಿಯಿಂದ ವಿನಾಯ್ತಿ ನೀಡಿದರೂ ಅದಕ್ಕೂ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕೊಂಚ ಕಷ್ಟಕರ ಪ್ರಕ್ರಿಯೆಯೇ ಆಗಿತ್ತು.

ಚುನಾವಣಾ ಅಧಿಕಾರಿಗಳ ಈ ಆದೇಶದ ವಿರುದ್ದ ಕಾನೂನು ಹೋರಾಟ ಆರಂಭಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಕೊನೆಗೂ ಜಯ ಗಳಿಸಿದ್ದಾರೆ. ಪುತ್ತೂರಿನ ಕೃಷಿಕರಾದ ಜಯಪ್ರಸಾದ್ ಜೋಶಿ ಬೆಳ್ಳಾರೆ, ಪುರುಷೋತ್ತಮ ಗೌಡ ಮಲ್ಕಜೆ, ಸುದರ್ಶನ ಕುಮಾರ್, ಎಂ. ಗೋವಿಂದ ಭಟ್ ಮಾಣಿಮೂಲೆ ಹಾಗೂ ಗಿರಿಜಾ ಶಂಕರ್ ಅವರುಗಳು ಹೈಕೋರ್ಟಿಗೆ ರಿಟ್ ಅರ್ಜಿಯನ್ನು ಸಲ್ಲಿಸಿ ಚುನಾವಣಾ ಆಯೋಗದ ಕೋವಿ ಠೇವಣಿಯನ್ನು ರದ್ದು ಪಡಿಸುವಂತೆ ಕೋರಿದ್ದರು.

ಇದೀಗ ಬುಧವಾರ ರಾಜ್ಯ ಹೈ ಕೋರ್ಟ್ ಅರ್ಜಿದಾರರ ಮನವಿ ಯನ್ನು ಎತ್ತಿ ಹಿಡಿದಿದ್ದು ಕೋವಿಯ ಕಡ್ಡಾಯ ಠೇವಣಿಯ ಆದೇಶವನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ. ಸಲ್ಲಿಕೆಯಾಗಿದ್ದ ಒಟ್ಟು ೫ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಮ್ ಅವರ ಏಕ ಸದಸ್ಯ ಪೀಠವು ಚುನಾವಣಾ ಅಧಿಕಾರಿಗಳ ಆದೇಶ ಅಸಂವಿಧಾನಾತ್ಮಕ ಎಂದು ಅಭಿಪ್ರಾಯಪಟ್ಟಿದೆ. ವಿಚಾರಣೆಯ ಸಂದರ್ಭ ದಲ್ಲಿಯೇ ಸರ್ಕಾರಿ ವಕೀಲರು ಅರ್ಜಿದಾರರಿಗೆ ಕೋವಿ ಗಳನ್ನು ಹಿಂತಿರುಗಿ ಕೊಡುವುದಾಗಿ ಹೇಳಿಕೆ ನೀಡಿ ವಿಚಾರಣೆ ಮುಕ್ತಾಯಗೊಳಿಸುವಂತೆ ಕೋರಿದ್ದರು. ಆದರೆ ಅರ್ಜಿದಾರರ ವಕೀಲರು ಇದಕ್ಕೆ ಒಪ್ಪದೆ ಹಲವಾರು ಕಾನೂನಿನ ಅಂಶಗಳನ್ನು ಉಲ್ಲೇಖಿಸಿ ವಿನಾಯಿತಿ ನೀಡಿದ ಮಾತ್ರಕ್ಕೆ ಪ್ರಕರಣವನ್ನು ಅಂತಿಮಗೊಳಿಸಬಾರದು ಎಂದು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.

ಕೋರ್ಟು ನೀಡಿರುವ ತೀರ್ಪಿನ ಪ್ರಕಾರ ಸರ್ಕಾರವು ಆಯುಧ ಪರವಾನಿಗೆ ನೀಡುವಾಗಲೇ ಸೂಕ್ತ ಪರಿಶೀಲನೆ, ತನಿಖೆ ನಡೆಸಿ ಯೋಗ್ಯರಿಗೆ ಮಾತ್ರ ನೀಡುವುದಾಗಿದೆ.

(ಮೊದಲ ಪುಟದಿಂದ) ಪರವಾನಿಗೆ ನೀಡುವಾಗಲೇ ಅರ್ಹತೆ ಮತ್ತು ಅವಶ್ಯಕತೆ ಪರಿಗಣಿಸಲ್ಪಡುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಎಲ್ಲರೂ ಕೋವಿ ಠೇವಣಿ ಇಡಬೇಕೆಂದು ಮಾಡಿದ ಆದೇಶ ತಪ್ಪು, ಅಂತಹ ಆದೇಶ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೂ ಪರವಾನಿಗೆ ನೀಡುವ ಉದ್ದೇಶಗಳಿಗೂ ವ್ಯತಿರಿಕ್ತವಾಗಿದೆ. ಚುನಾವಣಾ ಆಯೋಗ ಮಾರ್ಗಸೂಚಿಗಳ ಪ್ರಕಾರ ಕ್ರಿಮಿನಲ್ ಹಿನ್ನಲೆಯವರನ್ನು ಗುರುತಿಸಿ ಅವರಿಗೆ ಮಾತ್ರ ಕೋವಿ ಠೇವಣಿ ಇಡುವ ಆದೇಶ ಮಾಡುವುದು ಬಿಟ್ಟು ಸಾರ್ವತ್ರಿಕವಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಆದೇಶ ಹೊರಡಿಸಲಾಗುತ್ತಿದೆ. . ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಸರಿಯಾದ ಕ್ರಮಗಳನ್ನು ಕೈ ಬಿಟ್ಟು ಸುಲಭ ದಾರಿಯನ್ನು ಅನುಸರಿಸಿದ್ದಾರೆ. ಇದರಿಂದ ಕಾನೂನುಬದ್ದವಾಗಿ ಕೋವಿ ಹೊಂದಿದ್ದು ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲದವರಿಗೆ ತೀವ್ರ ಅನಾನುಕೂಲ ಆಗುತ್ತಿದೆ ಎಂದು ಹೇಳಿದೆ. ಹೀಗಾಗಿ ಇನ್ನು ಮುಂದಕ್ಕೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ನಿರ್ದೇಶನ ನೀಡಿದೆ.

ಈ ನಿರ್ದೇಶನಗಳ ಪ್ರಕಾರ ಇನ್ನು ಮುಂದೆ ಚುನಾವಣಾ ಅಧಿಕಾರಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮಾತ್ರ ಪ್ರತ್ಯೇಕವಾಗಿ ನೋಟೀಸ್ ನೀಡುವ ಮೂಲಕ ಕೋವಿ ಠೇವಣಿ ಮಾಡಿಸಿಕೊಳ್ಳಬೇಕಿದೆ.