ಕುಶಾಲನಗರ, ಮೇ ೧೭: ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ತಾ. ೯ ರಂದು ಪ್ರಕಟವಾಗಿದ್ದು, ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳಿಸಿ ಸಾಧನೆ ಗೈದಿದ್ದಾರೆ. ಜಿಲ್ಲೆಗೆ ಪ್ರಥಮ ೩ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಶಕ್ತಿಯೊಂದಿಗೆ ವ್ಯಕ್ತಪಡಿಸಿದ್ದಾರೆ.
ಅವಳಿ ಸಹೋದರಿಯರ ಸಾಧನೆ
ಕುಶಾಲನಗರದ ನಾಗೇಗೌಡ ಬಡಾವಣೆಯ ಮಲ್ಲೇಶ್ ಮತ್ತು ಶಾಂಭವಾನಿ ದಂಪತಿಯ ಪುತ್ರಿ ಕುಶಾಲನಗರ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿರಿ.ಎಂ ೬೨೨ ಅಂಕಗಳನ್ನು ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದೀಗ ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಿದ್ದು, ಮುಂದೆ ತಾನು ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಹೋದರಿ ಸಿಂಧು ೬೧೮ ಅಂಕಗಳನ್ನು ಪಡೆದು ಜಿಲ್ಲೆಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸಿರಿ ಮತ್ತು ಸಿಂಧು ಅವಳಿ ಸಹೋದರಿಯರಾಗಿದ್ದು, ಸಮಾಜ ಪಠ್ಯ ಪರೀಕ್ಷೆಯಲ್ಲಿ ಇಬ್ಬರೂ ೯೫ ಅಂಕಗಳನ್ನು ಪಡೆದಿದ್ದಾರೆ. ಸಿಂಧು ಕೂಡ ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪಿಯುಸಿ ವ್ಯಾಸಂಗ ಮಾಡಲಿದ್ದು ಮುಂದೆ ಐಎಎಸ್ ಅಧಿಕಾರಿ ಆಗುವ ಗುರಿ ಹೊಂದಿದ್ದಾರೆ.
ನಿರಂತರ ಓದು ತಮ್ಮ ಈ ಸಾಧನೆಗೆ ಅವಕಾಶ ನೀಡಿದೆ ಎಂದು ಇಬ್ಬರು ಸಹೋದರಿಯರು ಶಕ್ತಿಯೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ಪೋಷಕ ವೃಂದದ ಮಾರ್ಗದರ್ಶನ ತಮ್ಮ ಸಾಧನೆಗೆ ಕಾರಣ ಎಂದು ತಿಳಿಸಿದ್ದಾರೆ.
‘ಶಿಕ್ಷಕ-ಪೋಷಕರ ಮಾರ್ಗದರ್ಶನ ಅಮೂಲ್ಯ’
ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಕುಶಾಲನಗರದ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ಸಿ. ತೇಜಸ್ವಿನಿ ೬೨೦ ಅಂಕಗಳನ್ನು ಗಳಿಸಿದ್ದಾಳೆ. ತಾನು ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ನಂತರ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುವುದಾಗಿ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕೆನರಾ ವಿಲಾಸ್ ಪಿ.ಯು ಕಾಲೇಜಿಗೆ ಈಗಾಗಲೇ ಅರ್ಜಿ ಸಲ್ಲಿಸಿದ ತೇಜಸ್ವಿನಿ ನಿರಂತರ ಓದಿನ ಮೂಲಕ ಈ ಸಾಧನೆ ತಮ್ಮದಾಗಿದೆ ಎಂದು ಹೇಳಿದ್ದಾಳೆ. ಶಿಕ್ಷಕ-ಪೋಷಕರಿಂದ ಉತ್ತಮ ಮಾರ್ಗದರ್ಶನ ತಮ್ಮ ಸಾಧನೆಗೆ ಕಾರಣ ಎಂದಿದ್ದಾರೆ. ತಾಯಿ ಸಜನಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಂದೆ ಚಂದ್ರಶೇಖರ್ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ’
ಗೋಣಿಕೊಪ್ಪ: ಜಿಲ್ಲೆಗೆ ೩ನೇ ಸ್ಥಾನವನ್ನು ಗೋಣಿಕೊಪ್ಪ ಲಯನ್ಸ್ ಪೌಢಶಾಲೆಯ ವಿದ್ಯಾರ್ಥಿನಿ ಭಾಷಿತ ಕೆ.ಡಿ ಅವರು ಪಡೆದುಕೊಂಡಿದ್ದು, ಯಾವುದೇ ರೀತಿಯ ಟ್ಯೂಷನ್ ಪಡೆಯದೆ ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದದ್ದಾಗಿ ತಮ್ಮ ಅಭಿಪ್ರಾಯವನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡಿದ್ದಾರೆ. ೬೨೫ಕ್ಕೆ ೬೧೯ ಅಂಕಗಳನ್ನು ಇವರು ಗಳಿಸಿದ್ದಾರೆ.
ಪಿಯುಸಿಯಲ್ಲಿ ಪಿಸಿಎಂಬಿ ವಿಷಯವನ್ನು ಆಯ್ಕೆ ಮಾಡಲಿದ್ದು, ಇದರಲ್ಲಿ ಉತ್ತಮ ಸಾಧನೆ ಗೈದು ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲಿಯ ತನಕ ಉತ್ತಮ ಅಂಕಗಳಿಸುವುದೆ ತನ್ನ ಮುಂದಿರುವ ಗುರಿ. ವಿದ್ಯಾರ್ಥಿಗಳು ಶಿಕ್ಷಕರಿಗೆ ಹೆಚ್ಚಿನ ಗೌರವ ನೀಡುವಂತಾಗಬೇಕು, ಇದರಿಂದ ಗುರುಗಳ ಆರ್ಶೀವಾದ ನಮ್ಮ ಮೇಲೆ ಸದಾ ಇರಲಿದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಭಾಷಿತ ಅವರು ಕೋತೂರು ಗ್ರಾಮದ ಕಾಟಿಮಾಡ ಎ ದೇವಯ್ಯ- ಕಾವೇರಮ್ಮ ದಂಪತಿಯ ಪುತ್ರಿ.