ಸಿದ್ದಾಪುರ, ಮೇ ೧೮: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಚಲನವಲನವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಮಾಲ್ದಾರೆ - ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಮರಿಯಾನೆಗಳು ಸೇರಿದಂತೆ ಎರಡು ಗುಂಪುಗಳಲ್ಲಿ ೩೫ಕ್ಕೂ ಅಧಿಕ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡುತ್ತಿವೆ.
ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿರುವ ಕಾಡಾನೆಗಳ ಪೈಕಿ ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿಗಳಿಗೆ ಜನ್ಮ ನೀಡಿದ್ದು, ಕಾಫಿ ತೋಟಗಳಲ್ಲಿ ಹಲಸಿನ ಕಾಯಿಗಳು, ಕೆರೆಗಳಲ್ಲಿ ನೀರು ಸಕಾಲಕ್ಕೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲೇ ಕಾಡಾನೆಗಳು ಬೀಡುಬಿಟ್ಟಿವೆ. ಮರಿಯಾನೆಗಳು ಕಾಡಾನೆಗಳೊಂದಿಗೆ ಸುತ್ತಾಡುತ್ತಿದ್ದು, ದಿನದಿಂದ ದಿನಕ್ಕೆ ಕಾಡಾನೆಗಳ ಸಂಖ್ಯೆ ಮಿತಿಮೀರಿದೆ.
ಕಾಡಾನೆಗಳ ಹಿಂಡಿನಲ್ಲಿರುವ ಎರಡು ಹೆಣ್ಣಾನೆಗಳನ್ನು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗುವುದೆಂದು ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಮಾಲ್ದಾರೆ, ಬಾಡಗ - ಬಾಣಂಗಾಲ
(ಮೊದಲ ಪುಟದಿಂದ) ಗ್ರಾಮದಲ್ಲಿ ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ಗಳನ್ನು ಅಳವಡಿಸಿ ಕಾಡಾನೆಗಳ ಗುಂಪಿಗೆ ಸೇರಿಸಲಾಗಿತ್ತು. ರೇಡಿಯೋ ಕಾಲರ್ ಅಳವಡಿಸಿದ್ದ ಎರಡು ಕಾಡಾನೆಗಳು ಕಾಡಾನೆಗಳ ಪ್ರತ್ಯೇಕ ಗುಂಪುಗಳಲ್ಲಿ ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದವು.
ಆದರೆ ಈ ಎರಡು ಕಾಡಾನೆಗಳ ರೇಡಿಯೋ ಕಾಲರ್ ಆಕಸ್ಮಿಕವಾಗಿ ಕಳಚಿ ಹೋಗಿರುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಎರಡು ಕಾಡಾನೆಗಳನ್ನು ಸೆರೆ ಹಿಡಿದು ಹೊಸ ರೇಡಿಯೋ ಕಾಲರ್ ಅಳವಡಿಸಿ ಬಿಡಲು ಅರಣ್ಯ ಇಲಾಖೆ ಕ್ರಮಕೈಗೊಂಡಿದೆ.
ರೇಡಿಯೋ ಕಾಲರ್ಗೆ ದುಬಾರಿ ಬೆಲೆ
ಕಾಡಾನೆಗಳ ಚಲನವಲನ ಕಂಡು ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸುವುದಕ್ಕೆ ಹೆಚ್ಚಿನ ಖರ್ಚು ಅರಣ್ಯ ಇಲಾಖೆಗೆ ತಗಲುತ್ತದೆ. ಒಂದು ರೇಡಿಯೋ ಕಾಲರನ್ನು ಖರೀದಿಸಲು ರೂ. ೧.೭೫ ಲಕ್ಷ ಖರ್ಚಾಗಲಿದ್ದು, ರೇಡಿಯೋ ಕಾಲರನ್ನು ದಕ್ಷಿಣ ಆಫ್ರಿಕಾ ದೇಶದಿಂದ ದೆಹಲಿಯ ಉದ್ಯಮಿಗಳು ಖರೀದಿಸಿ ತರುತ್ತಾರೆ. ಇದನ್ನು ರಾಜ್ಯ ಸರ್ಕಾರಗಳು ದೆಹಲಿಯಿಂದ ಇಲಾಖೆಗಳ ಮುಖಾಂತರ ಖರೀದಿಸುತ್ತವೆ ಎಂದು ತಿಳಿದು ಬಂದಿದೆ.
ಇದರಿAದ ಕಾಡಾನೆಗಳು ಸುತ್ತಾಡುವ ಸ್ಥಳಗಳ ಬಗ್ಗೆ ಮಾಹಿತಿಯು ಅರಣ್ಯ ಇಲಾಖಾಧಿಕಾರಿಗಳಿಗೆ ಲಭಿಸುತ್ತದೆ. ರೇಡಿಯೋ ಕಾಲರ್ ಅಂದಾಜು ೩೦ ಕೆ.ಜಿ. ಯಷ್ಟು ತೂಕ ವಿರುತ್ತದೆ. ಇದನ್ನು ಕಾಡಾನೆಗಳ ಕುತ್ತಿಗೆಗೆ ಅಳವಡಿಸಲಾಗುತ್ತದೆ. ರೇಡಿಯೋ ಕಾಲರ್ ಅಳವಡಿಕೆ ಆದ ೨೪ ಗಂಟೆಗಳ ಬಳಿಕ ಕಾಡಾನೆಗಳ ಚಲನವಲನದ ಬಗ್ಗೆ ಜಿಪಿಎಸ್ ಮೂಲಕ ಮಾಹಿತಿಯು ಇಲಾಖಾಧಿಕಾರಿಗಳಿಗೆ ರವಾನೆ ಆಗುತ್ತದೆ. ಈ ಮಾಹಿತಿಯನ್ನು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ, ಆರ್ಆರ್ಟಿ ತಂಡದ ಸಿಬ್ಬಂದಿಗಳು ಮೊಬೈಲ್ ಗ್ರೂಪಿನ ಮುಖಾಂತರ ಗ್ರಾಮಸ್ಥರಿಗೆ ಕಳುಹಿಸಿ ಜಾಗ್ರತೆಗೊಳಿಸುತ್ತಾರೆ. ವರದಿ : ವಾಸು ಎ.ಎನ್
ಕಂಬಿಬಾಣೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ
ಸುಂಟಿಕೊಪ್ಪ: ಹಾಡುಹಗಲೇ ಅತ್ತೂರು ನಲ್ಲೂರು ಗ್ರಾಮದ ಕಂಬಿ ಬಾಣೆಯ ಪಟ್ಟಣದಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು ಅಲ್ಲಿನ ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಂಬಿಬಾಣೆಯ ನಿವಾಸಿಗಳು ಎಂದಿನAತೆ ಬೆಳಿಗ್ಗೆ ಎದ್ದು ಕೂಲಿ ಕೆಲಸಕ್ಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ತೆರಳುವ ಸಿದ್ಧತೆ ಯಲ್ಲಿದ್ದಾಗ ದಿಢೀರನೆ ಕಾಡಾನೆ ಪ್ರತ್ಯಕ್ಷ ಗೊಂಡಿದೆ. ಬಳಿಕ ಜನರ ಬೊಬ್ಬೆ, ನಾಯಿಗಳ ಬೊಗಳುವಿಕೆ ನಡುವೆ ರಸ್ತೆಯಲ್ಲಿ ಸಾಗಿ ಬಂದ ಕಾಡಾನೆ (ಮೊದಲ ಪುಟದಿಂದ) ರಸ್ತೆ ಬದಿಯ ಮನೆಗಳ ಎದುರು ನಿಲ್ಲಿಸಿದ್ದ ವಾಹನಗಳಿಗೆ ಯಾವುದೇ ಹಾನಿ ಮಾಡದೆ ಪಕ್ಕದ ನಳಂದ ತೋಟದೊಳಗೆ ನುಗ್ಗಿದೆ. ಕಳೆದ ಹಲವು ಸಮಯಗಳಿಂದ ಕಾಡಾನೆಗಳ ಹಿಂಡು ತೋಟದೊಳಗೆ ಬೀಡುಬಿಟ್ಟಿದ್ದು, ಇದರಿಂದ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ, ಕೊಡಗರಹಳ್ಳಿಯ ಉಪ್ಪುತೋಡು ಭಾಗದಲ್ಲೂ ಸಹ ಕಾಡಾನೆಗಳ ದಾಳಿಯಿಂದ ಸಣ್ಣ ರೈತರು ಕಂಗಾಲಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಂಡು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕಾಗಿದೆ ಹಾಗೂ ಬಡ ಜನರ ಜೀವ ಉಳಿಸಬೇಕಿದೆ ಎಂಬುದು ಸಾರ್ವಜನಿಕ ಆಗ್ರಹವಾಗಿದೆ.