ಕಣಿವೆ, ಮೇ ೧೮: ಬಯಲು ಸೀಮೆ ಕುಶಾಲನಗರ ತಾಲೂಕಿನ ಕೃಷಿಕರು ಹೆಚ್ಚಾಗಿ ಬೆಳೆಯುವ ಮುಸುಕಿನ ಜೋಳವನ್ನು ಬಳಸಿ ಹಸುಗಳ ರಸಮೇವನ್ನು ಹೆಬ್ಬಾಲೆಯಲ್ಲಿ ಉತ್ಪಾದಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಖಾಸಗಿ ರಸಮೇವು ಉತ್ಪಾದನಾ ಸಂಸ್ಥೆ ಹೆಬ್ಬಾಲೆಯಲ್ಲಿ ಘಟಕವೊಂದನ್ನು ಬಾಡಿಗೆಗೆ ಪಡೆದು ಪ್ರಕ್ರಿಯೆಗೆ ಮುಂದಾಗಿದೆ.

ಬ್ರೆಜಿಲ್‌ನಿAದ ಅಮದುಗೊಂಡ ನಾಲ್ಕು ಯಂತ್ರಗಳನ್ನು ಬಳಸಿ ಸಣ್ಣ ಪ್ರಮಾಣದಲ್ಲಿ ಹುಡಿ ಮಾಡಿದ ಮುಸುಕಿನ ಜೋಳವಿರುವ ಜೋಳದ ಕಡ್ಡಿಯ ತ್ಯಾಜ್ಯಕ್ಕೆ ಸಾವಯವ ಬೆಲ್ಲ ಹಾಗೂ ಉಪ್ಪು ಸಿಂಪಡಿಸಿ ಪ್ಲಾಸ್ಟಿಕ್‌ಗಳಿಂದ ‘ಬೇಲ್’ ಮಾದರಿಯಲ್ಲಿ ‘ಪ್ಯಾಕಿಂಗ್’ ಮಾಡಿ ಮೇವು ಸರಬರಾಜು ಮಾಡಲಾಗುತ್ತದೆ.

ರಸಮೇವು ಉಪಯೋಗ : ರೈತರು ಬೆಳೆಯುವ ಮುಸುಕಿನ ಜೋಳದ ಫಸಲು ಭರಿತ ರಸಮೇವನ್ನು ತಿನ್ನುವ ಹಸುಗಳಿಂದ ಗುಣಮಟ್ಟದ ಹಾಲಿನ ಜೊತೆಗೆ ಹಾಲಿನ ಉತ್ಪನ್ನವೂ ಹೆಚ್ಚಳ ವಾಗುತ್ತದೆ. ಜೊತೆಗೆ ಹಾಲಿನಲ್ಲಿ ಎಸ್‌ಎನ್‌ಎಫ್, ಪ್ಯಾಟ್ ಹಾಗೂ ಡಿಗ್ರಿಯ ಮಟ್ಟ ಹೆಚ್ಚಳವಾಗುತ್ತದೆ ಎಂದು ರಸ ಮೇವು ಉತ್ಪಾದನಾ ಘಟಕದ ಮೇಲ್ವಿಚಾರಕ ಸಾಗರ್ ಕೃಷ್ಣ ‘ಶಕ್ತಿ’ಗೆ ವಿವರಿಸಿದ್ದಾರೆ.

ರೈತರಿಗೂ ಅನುಕೂಲ : ರಸ ಮೇವು ಘಟಕದಿಂದಾಗಿ ಸುತ್ತ ಮುತ್ತಲಿನ ಜೋಳದ ಬೆಳೆಯ ಕೃಷಿಕರಿಗೆ ಅನುಕೂಲವಾಗುತ್ತದೆ.

ಕುರಿಗಳಿಗೂ ಉಪಯುಕ್ತ : ಈ ರಸಮೇವು ಹಸುಗಳಿಗಷ್ಟೇ ಅಲ್ಲದೇ ಕುರಿಗಳಿಗೂ ಕೂಡ ಹೆಚ್ಚಿನ ಉಪಯೋಗವಾಗಲಿದೆ.

ಕುರಿಯ ಹಾಲಿನ ಹೆಚ್ಚಳದ ಜೊತೆಗೆ ಕುರಿಗಳ ತೂಕದಲ್ಲಿ ಹೆಚ್ಚಳ ಹಾಗೂ ಕುರಿಗಳ ಕೂದಲು ಕೂಡ ಹೊಳಪು ಬರುತ್ತದೆ ಎನ್ನಲಾಗುತ್ತಿದೆ.

ಬೇಲ್ ಮಾದರಿಯಲ್ಲಿ ಪ್ಯಾಕಿಂಗ್ ಮಾಡುವ ಈ ರಸಮೇವು ತಲಾ ೫೦ ರಿಂದ ೬೦ ಕೆಜಿಗಳಷ್ಟು ತೂಕವಿರುತ್ತದೆ. ಈ ರಸಮೇವನ್ನು ಗರಿಷ್ಠ ಎರಡು ವರ್ಷಗಳವರೆಗೂ ಇಡಬಹುದು.

ನೆರಳು ಬಿಸಿಲು ಎಲ್ಲಿ ಬೇಕಾದರೂ ಇದನ್ನು ಇಟ್ಟುಕೊಳ್ಳಬಹುದು ಎಂದು ಸಾಗರ್ ಕೃಷ್ಣ ಹೇಳುತ್ತಾರೆ.

- ಕೆ.ಎಸ್. ಮೂರ್ತಿ, ಕಣಿವೆ