ಕಣಿವೆ, ಮೇ ೧೭: ಗುರುವಾರ ರಾತ್ರಿ ಸುರಿದ ಮಳೆಗೆ ತೊರೆನೂರು ಗ್ರಾಮದ ಯೋಗೇಶ್ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಅಳುವಾರದ ದೇವಾಂಗ ಪ್ರೇಮಕುಮಾರ ಎಂಬವರು ಬಿತ್ತನೆ ಮಾಡಿದ್ದ ಶುಂಠಿ ಬೆಳೆಯ ಹೊಲದ ಮಣ್ಣು ಬಿತ್ತನೆ ಬೀಜದೊಂದಿಗೆ ಕೊಚ್ಚಿ ಹೋಗಿದೆ.

ಅಲ್ಲದೇ ತಗ್ಗುಪ್ರದೇಶದ ಭೂಮಿಯಲ್ಲಿ ನೆಟ್ಟಿರುವ ಅಡಿಕೆ ಸಸಿಗಳು ಜಲಮಯವಾಗಿವೆ. ತೊರೆನೂರು ಗ್ರಾಮದ ರಾಜ್ಯ ಹೆದ್ದಾರಿ ಬದಿಯಿಂದ ತಗ್ಗು ಪ್ರದೇಶದತ್ತ ಹರಿದ ವ್ಯಾಪಕವಾದ ಮಳೆಯ ನೀರು ಹರಿದ ಪರಿಣಾಮ ಈ ನಷ್ಟ ಸಂಭವಿಸಿದೆ.

ಶುAಠಿ ಬಿತ್ತನೆಗೆ ಖರ್ಚು ಮಾಡಿದ್ದ ಲಕ್ಷಾಂತರ ರೂ ಮಳೆಯ ನೀರಿಗೆ ಹೋಮ ಮಾಡಿದಂತಾಗಿದೆ ಎಂದು ಕೃಷಿಕ ಪ್ರೇಮಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.