ವೀರಾಜಪೇಟೆ, ಮೇ ೧೮: ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ತಲೆ ಎತ್ತಿ ನಿಂತಿದೆ. ಸಮಸ್ತ ಜನತೆ ಪ್ರಜೆಗಳಾಗಿ ಭ್ರಷ್ಟಾಚಾರ ತಡೆಯಲು ಮುಂದಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಕೊಠಾರಿ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ, ರಾಜ್ಯಶಾಸ್ತç ವಿಭಾಗದ ವಿದ್ಯಾರ್ಥಿಗಳಿಗೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಅರಿವು ಕಾರ್ಯಕ್ರಮ'ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಸಂತೋಷ್ ಕೊಠಾರಿ ಅವರು, ಸರಕಾರ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರೂ ಭ್ರಷ್ಟಾಚಾರ ನಿಂತಿಲ್ಲ. ಭ್ರಷ್ಟಾಚಾರವನ್ನು ನಿಗ್ರಹ ಮಾಡುವ ಮೂಲಕ ಭ್ರಷ್ಟಾಚಾರ ಮುಕ್ತ ದೇಶ ಮಾಡಲು ವಿದ್ಯಾರ್ಥಿಗಳ, ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಸಿಂಧೂರ ಎನ್. ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಭ್ರಷ್ಟಾಚಾರ ಎಂಬುದು ಲಂಚದ ಒಂದು ಮುಖ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಇದು ಭಾರತದಲ್ಲಿ ಮಾತ್ರವಲ್ಲ ೧೮೦ ದೇಶಗಳಲ್ಲಿಯೂ ಇದ್ದು, ಅದರಲ್ಲಿ ಭಾರತ ೯೩ನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಲೋಕಾಯುಕ್ತ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಕ್ಕಳಿಗೂ ತಿಳಿ ಹೇಳಬೇಕಾಗಿದೆ ಎಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಂಚ ಕೊಟ್ಟರೆ ಮಾತ್ರ ಕೆಲಸ ಆಗುವುದು ಎಂಬುದನ್ನು ಮನಸ್ಸಿನಿಂದ ದೂರ ಮಾಡಬೇಕು. ಪ್ರತಿಯೊಬ್ಬರು ನಮ್ಮಲ್ಲಿರುವ ಕಾನೂನು ಅರಿವು ಬಳಸಿಕೊಂಡು ಲಂಚ ಕೊಡುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಅರಿವು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅತಿಥಿಯಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ ಅವರು ಮಾತನಾಡಿ, ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ನಡೆಯುವ ಕಾನೂನು ಅರಿವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಪ್ರದೀಪ ಪೋತದಾರ, ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಆರ್.ದಿವ್ಯ ಉಪಸ್ಥಿತರಿದ್ದು ಮಾತನಾಡಿದರು.
ರಾಜ್ಯಶಾಸ್ತç ಸಹಾಯಕ ಪ್ರಾಧ್ಯಾಪಕರಾದ ಎಂ.ಬಿ. ದಿವ್ಯ, ಕಾಲೇಜ್ ನಾಯಕ ಹೆಚ್.ಎ. ಅಜಿತ್, ವಿ. ಮಂಜುಳಾ ವಂದಿಸಿದರು.