ಮಡಿಕೇರಿ, ಮೇ ೧೮: ಮಲೆನಾಡು ಜಿಲ್ಲೆಯಾದ ಕೊಡಗಿನ ಮಳೆಗಾಲದ ತೀವ್ರತೆ ಎಲ್ಲರಿಗೂ ಅರಿವಿದೆ. ಒಮ್ಮೆ ಮುಂಗಾರು ಅಬ್ಬರಿಸಲಾರಂಭಿಸಿದರೆ ವರ್ಷಂಪ್ರತಿ ಹತ್ತು - ಹಲವಾರು ಸಮಸ್ಯೆಗಳು ಎದುರಾಗುವುದು ಜಿಲ್ಲೆಯ ವಾಸ್ತವತೆಯಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮೂಲಕ ಮಳೆಗಾಲಕ್ಕೆ ಮುಂಜಾಗ್ರತೆಯಾಗಿ ಕೆಲವು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪ್ರಸಕ್ತ ವರ್ಷ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಕೆಲವು ಅಗತ್ಯತೆಗಳಿಗೆ ಅಡಚಣೆ ಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಯ ನೀತಿ ಸಂಹಿತೆಯ ನಿರ್ಬಂಧಗಳು ಜಾರಿಯಲ್ಲಿವೆ. ಇದೀಗ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯೂ ಎದುರಾಗಿದೆ. ಈ ಕಾರಣದಿಂದಾಗಿ ಲೋಕಸಭಾ ಚುನಾವಣೆಯ ಮ ಎಣಿಕೆಯ ದಿನವಾದ ಜೂನ್ ೪ರ ತನಕ ಇರುವ ನೀತಿ ಸಂಹಿತೆಯ ನಿರ್ಬಂಧ, ಶಿಕ್ಷಕರ - ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ದಿನವಾದ ಜೂನ್ ೬ ತನಕವೂ ವಿಸ್ತರಣೆಯಾಗಲಿದೆ.

ನೀತಿ ಸಂಹಿತೆಯ ನಿರ್ಬಂಧಗಳು ದೇಶದಲ್ಲಿ ಸಾಮಾನ್ಯವಾಗಿದ್ದು, ಇದನ್ನು ಎಲ್ಲರೂ ಪಾಲಿಸಲೇಬೇಕಾಗುತ್ತದೆ. ಆದರೆ, ಕೊಡಗಿನ ಮಟ್ಟಿಗೆ ಹೇಳುವುದಾದರೆ, ಈ ಬಾರಿಯ ನೀತಿ ಸಂಹಿತೆ ಮುಕ್ತಾಯವಾಗುವ ವೇಳೆಗೆ ಬಹುಶಃ ಮುಂಗಾರು ಮಳೆಯೂ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯೂ ಆಗದಂತೆ ಜಾಗ್ರತೆ ವಹಿಸುವುದರೊಂದಿಗೆ ಮಳೆಗಾಲದ ಪೂರ್ವ ತಯಾರಿಯೂ ಅನಿವಾರ್ಯವಾಗಿದ್ದು, ಈ ಬಗ್ಗೆ ಸಂಬAಧಿಸಿದವರು ಗಮನಹರಿಸ ಬೇಕಾಗಿದೆ. ಈಗಾಗಲೇ ಪ್ರಾರಂಭ ಗೊಂಡಿರುವ ಕೆಲಸಗಳಿಗೆ ಸಮಸ್ಯೆ ಇಲ್ಲವಾದರೂ, ಹೊಸ ಕೆಲಸಗಳಿಗೆ ಅವಕಾಶಗಳಿಲ್ಲ. ಇದನ್ನು ಗಮನ ದಲ್ಲಿರಿಸಿಕೊಂಡು ನೀತಿ ಸಂಹಿತೆಯೂ ಉಲ್ಲಂಘನೆಯಾಗದ ರೀತಿಯಲ್ಲಿ ವ್ಯವಹರಿಸುವುದು ಮುಖ್ಯವಾಗಲಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಅನಿವಾರ್ಯತೆಯ ಕೆಲಸ ಕಾರ್ಯ ಗಳನ್ನು ನಡೆಸಲು, ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಪಡೆಯಲು ಸಾಧ್ಯವಾಗುವುದೇ ಎಂಬ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು ಎಂದು ತಿಳಿಸಿದ್ದಾರೆ. ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಅವರು ಪ್ರತಿಕ್ರಿಯಿಸಿ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಗಳು ಏನಿದ್ದರೂ ಜಿಲ್ಲಾಡಳಿತದ ಮೂಲಕ ಮಾಡಬಹುದಾಗಿದೆ. ನೀತಿ ಸಂಹಿತೆ ಇದಕ್ಕೆ ಅಡಚಣೆಯಾಗದು, ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಿಲ್ಲ, ಹೊಸ ಕೆಲಸದ ಪ್ರಾರಂಭ, ಜನಪ್ರತಿನಿಧಿಗಳ ಭಾಗವಹಿಸುವಿಕೆ, ಪ್ರಗತಿ ಪರಿಶೀಲನೆ ಸಭೆ ನಡೆಸಲು ಸಾಧ್ಯವಿಲ್ಲ, ಜಿಲ್ಲಾಡಳಿತ ಅಥವಾ ಸಂಬAಧಿತ ಇಲಾಖೆಗಳು ನೀತಿ ಸಂಹಿತೆಯನ್ನು ನೆಪ ಮಾಡಬಾರದು, ಅಗತ್ಯತೆಗೆ ಚುನಾವಣಾ ಆಯೋಗದಿಂದಲೂ ವಿಶೇಷ ಅನುಮತಿ ಪಡೆಯಬಹುದು ಎಂದಿದ್ದಾರೆ.