ಮಡಿಕೇರಿ, ಮೇ ೧೭: ರಾಜ್ಯ ಸರಕಾರದ ಆದೇಶದ ಮೇರೆಗೆ ಖಾಸಗಿ ತೋಟಗಳಲ್ಲಿನ ಮರಗಳ ಗಣತಿ ಕಾರ್ಯ ನಡೆಸುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿ.ಜೆ.ಪಿ, ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಇಂದು ಮಡಿಕೇರಿ ಯಲ್ಲಿರುವ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿತು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಶಾಸಕರುಗಳಾದ ಎಂ.ಪಿ ಅಪ್ಪಚ್ಚು ರಂಜನ್, ಮಾಜಿ ಎಂ.ಎಲ್.ಸಿ ಸುನಿಲ್ ಸುಬ್ರಮಣಿ ಸೇರಿದಂತೆ ಕೊಡಗಿನ ವಿವಿಧೆಡೆ ಗಳಿಂದ ಆಗಮಿಸಿದ್ದ ಬಿ.ಜೆ.ಪಿ ಪ್ರಮುಖರು, ಕಾರ್ಯಕರ್ತರು ‘ಬಡವರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ, ಅರಣ್ಯ ಮಂತ್ರಿಗಳಿಗೆ ಧಿಕ್ಕಾರ, ಕೊಡಗಿನ ಈರ್ವರು ಶಾಸಕರಿಗೆ ಧಿಕ್ಕಾರ, ಜೈ ಜವಾನ್ ಜೈ ಕಿಸಾನ್’ ಎಂಬಿತ್ಯಾದಿ ಘೋಷಣೆ ಗಳನ್ನು ಕೂಗುತ್ತಾ ಫಲಕಗಳನ್ನು ಹಿಡಿದು ಅರಣ್ಯ ಭವನವನ್ನು ಪ್ರವೇಶಿಸಿದರು.
ಖಾಸಗಿ ತೋಟಗಳಲ್ಲಿನ ಮರಗಳ ಗಣತಿ ಮಾಡುವ ಸಂಬAಧ ಇತ್ತೀಚೆಗೆ ರಾಜ್ಯ ಸರಕಾರವು ಹೊರಡಿಸಿರುವ ಆದೇಶವು ಜಿಲ್ಲೆಯ ಕೃಷಿಕರಿಗೆ, ಬೆಳೆಗಾರರಿಗೆ ಮಾರಕವಾಗಿದ್ದು, ಈ ಆದೇಶವನ್ನು ಹಿಂಪಡೆಯುವAತೆ ಆಗ್ರಹಿಸಿ ಬಿ.ಜೆ.ಪಿ, ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಡಿ.ಸಿ.ಎಫ್, ಸಿ.ಸಿ.ಎಫ್‌ಗೆ ಮನವಿ ಸಲ್ಲಿಸಲು ಮುಂದಾಗಿದ್ದು, ಇಬ್ಬರು ಅಧಿಕಾರಿ ಗಳೂ ರಜೆಯಲ್ಲಿದ್ದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಪಕ್ಷದ ಪ್ರಮುಖರು ಅವರಿಬ್ಬರೂ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭ
(ಮೊದಲ ಪುಟದಿಂದ) ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಪಕ್ಷದ ಪ್ರಮುಖರ ನಡುವೆ ಮಾತಿನ ಚಕಮಕಿ ನಡೆಯಿತು.
ಅಧಿಕಾರಿಗಳು ಬರುವವರೆಗೂ ಇಲ್ಲೇ ಕುಳಿತುಕೊಂಡು ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು, ಅರಣ್ಯ ಭವನದ ಸಿಬ್ಬಂದಿಗಳನ್ನೆಲ್ಲ ಹೊರ ಕಳುಹಿಸಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆಯನ್ನು ಎಂ.ಎಲ್.ಸಿ ಸುಜಾ ಕುಶಾಲಪ್ಪ ನೀಡಿದರು. ಅಧಿಕಾರಿಗಳಿಬ್ಬರೂ ಬೆಂಗಳೂರಿನಲ್ಲಿದ್ದ ಕಾರಣ ಸ್ಥಳಕ್ಕೆ ಎ.ಎಸ್.ಪಿ ಸುಂದರರಾಜ್ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳು ಆಗಮಿಸಿದ ಬಳಿಕ ಸರಕಾರದ ಮಾರಕ ಆದೇಶದ ರದ್ದತಿಗೆ ಕೋರಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ನೀಡಿದ ಪಕ್ಷದ ಪ್ರಮುಖರು ಧರಣಿಯನ್ನು ಸ್ಥಗಿತಗೊಳಿಸಿದರು. ತಕ್ಷಣದಿಂದಲೇ ಮರಗಣತಿ ಕಾರ್ಯ ನಿಲ್ಲಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸಲಾಗುವುದೆAದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು, ಮನವಿಯನ್ನು ಸರಕಾರಕ್ಕೆ, ರಾಜ್ಯಪಾಲರಿಗೆ ತಲುಪಿಸುವ ಭರವಸೆ ನೀಡಿದರು.
ಕೊಡಗಿನ ಜನರು ಪರಿಸರ ರಕ್ಷಕರು - ಸುಜಾ ಕುಶಾಲಪ್ಪ
ಜಿಲ್ಲಾಧಿಕಾರಿ ಆಗಮನಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡಗಿನ ಜನರು ಹಲವಾರು ವರ್ಷಗಳಿಂದ ಪರಿಸರವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅರಣ್ಯ ಇಲಾಖೆಯು ಯಾವುದೇ ರೀತಿಯ ಪರಿಸರ ರಕ್ಷಣೆ ಮಾಡದೆ ಅನವಶ್ಯಕವಾಗಿ ಖಾಸಗಿ ತೋಟಗಳಿಗೆ ನುಗ್ಗಿ ಸರಕಾರದ ಸುರ್ಪದಿಗೆ ಪಡೆಯುವ ಉದ್ದೇಶದಿಂದ ರೈತರುಗಳು ಬೆಳೆದು ಪೋಷಿಸಿದ ಮರಗಳನ್ನು ಗಣತಿ ಮಾಡುತ್ತಿದೆ. ಕುಟ್ಟ ಗಡಿಯಿಂದ ಹಿಡಿದು ಚೆಂಬು ಗ್ರಾಮದವರೆಗೂ ಖಾಸಗಿ ತೋಟಗಳಿಗೆ ಬಲವಂತವಾಗಿ ನುಗ್ಗಿ ಈ ಕಾರ್ಯವನ್ನು ಇಲಾಖೆಯವರು ಮಾಡುತ್ತಿದ್ದಾರೆ. ಇಲಾಖೆಗೆ ಪರಿಸರದ ಮೇಲೆ ಪ್ರೇಮ ಇದ್ದು ಆದಲ್ಲಿ ಕೇರಳ-ಕೊಡಗು ಗಡಿಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ಬರಡು ಭೂಮಿಯಿದೆ. ಇದನ್ನು ಹಸಿರೀಕರಣ ಮಾಡಲಿ ಎಂದ ಅವರು, ವನ್ಯಪ್ರಾಣಿ ಉತ್ಪನ್ನಗಳ ವಾಪಸಾತಿ ಮಾಡುವ ಸಂಬAಧ ಮತ್ತೊಂದು ಜನವಿರೋಧಿ ಆದೇಶವನ್ನು ಹೊರಡಿಸಿರುವ ಕಾಂಗ್ರೆಸ್ ಸರಕಾರ, ಸಾಂಪ್ರದಾಯಿಕವಾಗಿ ದಶಕಗಳ ಕಾಲ ಕೊಡಗಿನ ಜನರು ಬಳಸುತ್ತಿರುವ ಕಡವೆ ಕೊಂಬು ಇತ್ಯಾದಿ ಉತ್ಪನ್ನಗಳನ್ನು ವಶಪಡಿಸುವ ಹುನ್ನಾರವನ್ನು ಹೊಂದಿದೆ ಎಂದು ಕಿಡಿಕಾರಿದರು.
ಉದ್ದೇಶಪೂರ್ವಕ ರಜೆ ಆರೋಪ
ಬಿ.ಜೆ.ಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಇಂದಿನ ಪ್ರತಿಭಟನೆ ಕುರಿತು ವಾರದ ಹಿಂದೆಯೇ ಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ತಿಳಿಸಿದ್ದರೂ ಉದ್ದೇಶಪೂರ್ವಕವಾಗಿ ಡಿ.ಸಿ.ಎಫ್ ಹಾಗೂ ಸಿ.ಸಿ.ಎಫ್ ಊರು ಬಿಟ್ಟು ತೆರಳಿದ್ದಾರೆ. ರಜೆ ನೆಪವೊಡ್ಡಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜನರಿಗೆ ಕಿರುಕುಳ ನೀಡುವ ಸರಕಾರ - ರಂಜನ್
ಮಾಜಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ರೈತರಿಗೆ ಕಿರುಕುಳ ಕೊಡುತ್ತಿರುವ ಸರಕಾರವಾಗಿದೆ. ದಶಕಗಳಿಂದ ಜನರು ಅನುಭವಿಸಿಕೊಂಡು ಬರುತ್ತಿರುವ ಕೃಷಿಯೇತರ ಸಿ ಆ್ಯಂಡ್ ಡಿ ಲ್ಯಾಂಡ್ ಅನ್ನು ಜನರಿಗೆ ಅಕ್ರಮ-ಸಕ್ರಮದಡಿ ಹಸ್ತಾಂತರಿಸಿ ಹಕ್ಕುಪತ್ರ ನೀಡಲು ಕಾಂಗ್ರೆಸ್ ಸರಕಾರವು ಹಿಂದೆ-ಮುAದೆ ನೋಡುತ್ತಿದೆ ಎಂದು ಆರೋಪಿಸಿದರು.
ಕೊಡಗಿನ ಬಹುತೇಕ ಎಲ್ಲ ಗ್ರಾಮಗಳಲ್ಲಿ ದೇವಸ್ಥಾನಗಳಿವೆ. ಇಂತಹ ದೇವಸ್ಥಾನಗಳಲ್ಲಿ ದಶಕಗಳಿಂದ ಕಾಡುಕುರಿ, ಕಡವೆಗಳ ಕೊಂಬುಗಳನ್ನಿರಿಸಿ ಉತ್ಸವಗಳ ಸಂದರ್ಭ ಬಳಸುವ ಸಂಪ್ರದಾಯ ಈ ಹಿಂದಿನಿAದಲೂ ಇದೆ. ಆದರೆ ಕಾಂಗ್ರೆಸ್ ಸರಕಾರವು ಇಂತಹ ಅರಣ್ಯ ಉತ್ಪನ್ನಗಳನ್ನು ವಶಪಡಿಸುವ ಹುನ್ನಾರದಡಿ ಇವುಗಳ ವಾಪಸಾತಿಗೆ ಆದೇಶ ಹೊರಡಿಸಿದೆ. ಇದು ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವಂತಹದ್ದು ಎಂದು ಆರೋಪಿಸಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ವನ್ಯಪ್ರಾಣಿ ಹಾವಳಿ ಹೆಚ್ಚಾಗಿದೆ. ಕೊಡಗಿನಲ್ಲಿ ವಾರಕ್ಕೆ ಒಬ್ಬರಂತೆ ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಹುಲಿಗಳ ದಾಳಿಗೆ ಆಕಳುಗಳು ಸಾವನ್ನಪ್ಪುತ್ತಿವೆ. ಆದರೆ ಅರಣ್ಯ ಇಲಾಖೆ ಯಾವುದೇ ರೀತಿಯ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಬೆಳೆಗಾರರು ತಮ್ಮ ಹಾಗೂ ಬೆಳೆಗಳ ರಕ್ಷಣೆಗೆ ಆನೆಗಳಿಗೆ ಗುಂಡು ಹೊಡೆದರೆ, ತೀವ್ರ ತರಹದ ಶಿಕ್ಷೆ ವಿಧಿಸುವ ಇಲಾಖೆಯು, ಇದೇ ಆನೆಗಳ ದಾಳಿಯಿಂದ ಮಾನವನು ಪ್ರಾಣ ಬಿಟ್ಟರೆ, ಅವರ ಜೀವಕ್ಕೆ ಬೆಲೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು.
ಅಧಿಕಾರಿಗಳು ಜನಪರ ಕೆಲಸ ಮಾಡಬೇಕು - ಸುನಿಲ್
ಮಾಜಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಅಧಿಕಾರಿಗಳು ಜನಪರ ಕೆಲಸ ಮಾಡಬೇಕು. ಆದರೆ ಡಿ.ಸಿ.ಎಫ್ ಹಾಗೂ ಸಿ.ಸಿ.ಎಫ್ ಉದ್ದೇಶಪೂರ್ವಕವಾಗಿ ಇಂದೇ ಕಚೇರಿಗೆ ಹಾಜರಾಗದೆ ಓಡಿ ಹೋಗಿದ್ದಾರೆ. ಖಾಸಗಿ ತೋಟಗಳಲ್ಲಿ ಮರಗಣತಿ ನಡೆಸುವುದು ಬೆಳೆಗಾರರಿಗೆ ಮಾರಕವಾಗಿದ್ದು, ನ್ಯಾಯಯುತವಾಗಿ ಬೆಳೆಗಾರರ ಪರ ಹೋರಾಟಕ್ಕೆ ಬಿ.ಜೆ.ಪಿ ಬೆಂಬಲಕ್ಕೆ ನಿಂತಿದೆ. ವೀರಾಜಪೇಟೆ ಕ್ಷೇತ್ರದ ಶಾಸಕರು ಮರಗಣತಿ ಆದೇಶ ವಾಪಸಾತಿ ಮಾಡುವ ಮೌಖಿಕ ಭರವಸೆ ನೀಡಿದರಾದರೂ ಮುಂದಿನ ದಿನವೇ ಮರಗಣತಿ ಜಿಲ್ಲೆಯ ವಿವಿಧೆಡೆ ಮುಂದುವರಿದಿದೆ. ತಕ್ಷಣವೇ ಈ ಕಾರ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಅಧಿಕಾರಿಗಳ ನಿರ್ಲಕ್ಷ - ಎಸ್.ಜಿ ಮೇದಪ್ಪ
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ ಮೇದಪ್ಪ ಅವರು ಮಾತನಾಡಿ, ಬಿ.ಜೆ.ಪಿಯು ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷ. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವುದೇ ಇಂದಿನ ಪ್ರತಿಭಟನೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ತೋಟದ ಕೆಲಸವಿದ್ದರೂ ಸಮಸ್ಯೆ ಬಗೆಹರಿಸುವ ಹಿತದೃಷ್ಟಿಯಿಂದ ಇಂದು ಇಲ್ಲಿ ಮಹಿಳೆಯರಾದಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೇವೆ . ಇದನ್ನು ಅರಿತಿದ್ದರೂ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿ ರಜೆ ಮಾಡಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಸರಕಾರಕ್ಕೆ ಹಣದ ಕೊರತೆ - ಪೊನ್ನಪ್ಪ
ಪಕ್ಷ ಪ್ರಮುಖ ಕೋಡಿ ಪೊನ್ನಪ್ಪ ಅವರು ಮಾತನಾಡಿ, ಈಗಿನ ರಾಜ್ಯ ಸರಕಾರವು ಎಲ್ಲವನ್ನೂ ಉಚಿತ ಮಾಡಿ ಹಣದ ಕೊರತೆಯಿಂದ ಪರದಾಡುತ್ತಿದೆ. ಅನ್ಯ ಮಾರ್ಗದಲ್ಲಿ ಹಣ ಮಾಡುವ ಉಪಾಯ ಮಾಡಿರುವ ಸರಕಾರ ಅರಣ್ಯ ಇಲಾಖೆ ಮೂಲಕ ಖಾಸಗಿ ತೋಟಗಳ ಮರಗಳ ಗಣತಿ ಮಾಡಿ ಟಿಂಬರ್ ಲಾಬಿಯೊಂದಿಗೆ ಒಪ್ಪಂದ ಮಾಡಿ ಮುಂದೆ ಮರ ಕಡಿಯುವ ಹುನ್ನಾರ ರೂಪಿಸಿದೆ ಎಂದು ಆರೋಪಿಸಿದರು.
ಬಿ.ಜೆ.ಪಿ ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಮಾತನಾಡಿ, ಕೃಷಿಕರು, ಬೆಳೆಗಾರರಿಂದ ಇಂದು ಹಸಿರು ಉಳಿದಿದೆ. ಅರಣ್ಯ ಇಲಾಖೆಗೆ ಅರಣ್ಯ ರಕ್ಷಣೆಗೆ ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಅರಣ್ಯದ ಅಧಿಕಾರ ವಹಿಸುವ ಅಧಿಕಾರವಿಲ್ಲ ಎಂದರು. ಬಿ.ಜಿಪಿ ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಗೈರಿಗೆ ಅಸಮಾಧಾನ ವ್ಯಕ್ತಪಡಿಸಿ ಆದೇಶ ರದ್ಧತಿ ಆಗದೆ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯ ವೇಳೆ ಬಿ.ಜೆ.ಪಿ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ, ಅನಿತಾ ಪೂವಯ್ಯ, ಮನು ಮುತ್ತಪ್ಪ, ಸವಿತಾ ರಾಕೇಶ್, ಮಹೇಶ್ ಜೈನಿ, ಬಲ್ಲಾರಂಡ ಮಣಿ ಉತ್ತಪ್ಪ, ಬಿ.ಕೆ ಅರುಣ್ ಕುಮಾರ್, ಬಿ.ಕೆ ಜಗದೀಶ್ ಕುಮಾರ್, ರವಿ ಕುಶಾಲಪ್ಪ, ತೇಲಪಂಡ ಶಿವಕುಮಾರ್ ನಾಣಯ್ಯ, ನಾಗೇಶ್ ಕುಂದಲ್ಪಾಡಿ, ಮನು ಮಂಜುನಾಥ್, ಭಾರತೀಶ್, ಪಳೆಯಂಡ ರಾಬಿನ್ ದೇವಯ್ಯ, ಅರುಣ್ ಶೆಟ್ಟಿ ಹಾಗೂ ಇತರರು ಹಾಜರಿದ್ದರು. ನಗರ ಠಾಣೆ ಠಾಣಾಧಿಕಾರಿ ಲೋಕೇಶ್ ಹಾಗೂ ನಗರ ಪೊಲೀಸರಿಂದ ಬಂದೋಬಸ್ತ್ ಕಲ್ಪಿಸಲಾಗಿತ್ತು.