ಮಡಿಕೇರಿ, ಮೇ ೧೭: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವ ಇದೀಗ ಅಂತಿಮ ಹಂತದತ್ತ ತಲುಪಿದೆ. ೨೨ನೆಯ ವರ್ಷದ ಕ್ರಿಕೆಟ್ ಉತ್ಸವವಾಗಿ ಬಾಳೆಲೆಯಲ್ಲಿ ಜರುಗುತ್ತಿರುವ ಅರಮಣಮಾಡ ಕಪ್ನ ಸೆಮಿಫೈನಲ್ ತಾ. ೧೮ ರಂದು (ಇಂದು) ಹಾಗೂ ಫೈನಲ್ ಮತ್ತು ಸಮಾರೋಪ ತಾ. ೧೯ ರ ಭಾನುವಾರದಂದು ಜರುಗಲಿದೆ.
ಪ್ರಸಕ್ತ ವರ್ಷದ ಕ್ರಿಕೆಟ್ ಉತ್ಸವ ವಿಶೇಷವಾಗಿ ನಡೆದಿದ್ದು, ವರ್ಣರಂಜಿತವಾದ ಸಮಾರೋಪ ಸಮಾರಂಭಕ್ಕೆ ಆಯೋಜಕರಾದ ಅರಮಣಮಾಡ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಮಹಿಳಾ ತಂಡಗಳಿಗೂ ಪ್ರತ್ಯೇಕ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಇದರಲ್ಲಿ ೪೯ ಕುಟುಂಬಗಳು ಭಾಗವಹಿಸಿದ್ದು, ವಿಶೇಷವಾಗಿದೆ. ಪುರುಷರ ವಿಭಾಗದಲ್ಲಿ ೨೬೪ ಕುಟುಂಬ ಇದ್ದು, ಮಹಿಳೆಯರ ವಿಭಾಗವೂ ಸೇರಿದಂತೆ ಒಟ್ಟು ೩೧೩ ಕುಟುಂಬಗಳು ಅರಮಣಮಾಡ ಕಪ್ನಲ್ಲಿ ಪಾಲ್ಗೊಂಡಿರುವುದು ಈತನಕದ ದಾಖಲೆಯಂತಾಗಿದೆ. ತಾ. ೧೮ ರಂದು (ಇಂದು) ಸೆಮಿಫೈನಲ್ ಜರುಗಲಿದ್ದು, ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಉತ್ಸವ ಸಮಿತಿ ಅಧ್ಯಕ್ಷ ನಿವೃತ್ತ ಎಸ್ಪಿ ಅರಮಣಮಾಡ ಕೆ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವು ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತಾ. ೧೯ ರಂದು ಫೈನಲ್ ಹಾಗೂ ಸಮಾರೋಪ ಕಾರ್ಯಕ್ರಮಗಳು ಆರಂಭವಾಗಲಿದೆ. ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸದ ಪ್ರತಾಪ್ಸಿಂಹ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಮಾಜಿ ಒಲಂಪಿಯನ್ ಮನೆಯಪಂಡ ಅಶ್ವಿನಿ ನಾಚಪ್ಪ, ರಿಪಬ್ಲಿಕ್ ಟಿ.ವಿ.ಯ ಚೇರಂಡ ಕಿಶನ್ ಮಾದಪ್ಪ, ಸೈಕಲ್ ಪ್ಯೂರ್ ಅಗರಬತ್ತಿಯ ಅರ್ಜುನ್ ಎಂ.ರAಗ, ಡಾ. ಮಾಪಂಗಡ
ಎಸ್. ಬೆಳ್ಯಪ್ಪ ಪಾಲ್ಗೊಳ್ಳಲಿದ್ದಾರೆ.
(ಮೊದಲ ಪುಟದಿಂದ) ಈ ದಿನದಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ರಘುರಾಮ್ಭಟ್ ಅವರೂ ಭಾಗವಹಿಸಲಿದ್ದಾರೆ. ಮುಕ್ತಾಯ ಸಮಾರಂಭದ ಅತಿಥಿಯಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಪಾಲ್ಗೊಳ್ಳಲಿರುವರು.
ಮಹಿಳಾ ವಿಭಾಗದ ಫೈನಲ್, ಅರಮಣಮಾಡ ಕುಟುಂಬಸ್ಥರ ಮೆರವಣಿಗೆ, ಪುರುಷರ ವಿಭಾಗದ ಫೈನಲ್ ಸಭಾ ಕಾರ್ಯಕ್ರಮ, ತೀರ್ಪುಗಾರರು, ತಾಂತ್ರಿಕ ಸಿಬ್ಬಂದಿಗೆ ಸನ್ಮಾನ, ಸಾಧಕರಿಗೆ ಸನ್ಮಾನ, ಮುಂದಿನ ವರ್ಷದ ಆಯೋಜಕರಾದ ಚೆಕ್ಕೇರ ಕುಟುಂಬಸ್ಥರಿಗೆ ಧ್ವಜ ಹಸ್ತಾಂತರ, ಬಹುಮಾನ ವಿತರಣೆ ಬಳಿಕ ಸಂಜೆ ೬.೩೦ ರಿಂದ ಕೊಡವ ಸಂಗೀತ ಹಾಗೂ ಡಿ.ಜೆ. ನೈಟ್ ಕಾರ್ಯಕ್ರಮ ಜರುಗಲಿದೆ.ಅರಮಣಮಾಡ ಕಪ್ ಕ್ರಿಕೆಟ್ ಉತ್ಸವ ನಡೆದ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜು ಮೈದಾನ ಹಾಗೂ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರೇಕ್ಷಕರಿಗೆ ಬಿಸಿಲಿನ ರಕ್ಷಣೆಯೊಂದಿಗೆ ಪಂದ್ಯಾವಳಿ ವೀಕ್ಷಿಸಲು ಈ ಬಾರಿ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು. ಎರಡೂ ಮೈದಾನದಲ್ಲಿ ಬಿದಿರಿನ ಕಂಬ, ತೆಂಗಿನಗರಿ, ಬೈನೆಮರದ ಗರಿ, ಹುಲ್ಲು ಹಾಕಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಪ್ಲಾಸ್ಟಿಕ್ ಬಾಟಲಿ ಸೇರಿ ಮತ್ತಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆ ಇಲ್ಲದಂತೆ ಮಾಡಲಾಗಿತ್ತು.
ಅರಮಣಮಾಡ ಕುಟುಂಬ ಬೆಸಗೂರಿನಲ್ಲಿ ಐನ್ಮನೆ ಹೊಂದಿದ್ದು, ಬೆಸಗೂರು, ಕೊಟ್ಟಗೇರಿ, ಬೇಗೂರು, ರಾಜಪುರ, ತೇಂಬರೆ, ಕಾರ್ಮಾಡ್ ಸೇರಿದಂತೆ ಇತರೆಡೆಗಳಲ್ಲಿ ನೆಲೆಸಿರುವ ಸರ್ವ ಕುಟುಂಬದವರು ಸೇರಿ ಈ ಪಂದ್ಯಾವಳಿ ಆಯೋಜಿಸಿದ್ದಾಗಿ ಅಧ್ಯಕ್ಷ ಸುರೇಶ್ ಅವರು ತಿಳಿಸಿದ್ದಾರೆ. ವಿವಿಧ ದಾನಿಗಳು ತವರು ಮನೆ ಹುಡುಗಿಯರು, ಕುಟುಂಬಸ್ಥರು ಸಹಕಾರ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ರೂ. ೧೦ ಲಕ್ಷ ಅನುದಾನ ಸೇರಿದಂತೆ ರೂ. ೨೦ ಲಕ್ಷ ವೆಚ್ಚದಲ್ಲಿ ಎರಡು ಮೈದಾನ, ಸುಮಾರು ೫೦೦ ವಾಹನಗಳ ನಿಲುಗಡೆಗೆ ವ್ಯವಸ್ಥೆ ಹಾಗೂ ಹೊಸ ವೇದಿಕೆ ಈ ಉತ್ಸವದೊಂದಿಗೆ ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.