ಗೋಣಿಕೊಪ್ಪ ವರದಿ, ಮೇ ೧೭ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಮಣವಟ್ಟಿರ ಮತ್ತು ಮುಕ್ಕಾಟಿರ (ಹರಿಹರ-ಬೆಳ್ಳೂರು) ಮಹಿಳಾ ತಂಡಗಳು ಫೈನಲ್ ಪ್ರವೇಶ ಪಡೆದುಕೊಂಡಿವೆ. ಮಾಳೇಟಿರಕ್ಕೆ ಮೂರನೇ ಸ್ಥಾನ, ಆತಿಥೇಯ ಅರಮಣಮಾಡ ನಾಲ್ಕನೇ ಸ್ಥಾನ ಉಳಿಸಿಕೊಂಡಿದೆ.

೩ನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಮಾಳೇಟಿರ (ಕೆದಮುಳ್ಳೂರು) ತಂಡವು ಆತಿಥೇಯ ಅರಮಣಮಾಡ ತಂಡವನ್ನು ೬ ರನ್‌ಗಳಿಂದ ಮಣಿಸಿ ಮೂರನೇ ಸ್ಥಾನ ಅಲಂಕರಿಸಿತು. ಮಾಳೇಟಿರ ೪ ವಿಕೆಟ್ ನಷ್ಟಕ್ಕೆ ೩೪ ರನ್, ಅರಮಣಮಾಡ ೪ ವಿಕೆಟ್ ಕಳೆದುಕೊಂಡು ೨೮ ರನ್‌ಗಳಿಸಿ ಸೋಲನುಭವಿಸಿತು. ಅರಮಣಮಾಡ ದರ್ಶಿನಿ, ಮಾಳೇಟಿರ ಕವಿತ ತಲಾ ೨ ವಿಕೆಟ್, ಅರಮಣಮಾಡ ಮನವಿ ೯ ರನ್, ಮಾಳೇಟಿರ ವಶಿನ್ ೮ ರನ್‌ಗಳ ಸಾಧನೆ ಮಾಡಿದರು.

ಮೊದಲ ಸೆಮಿಫೈನಲ್‌ನಲ್ಲಿ ಮುಕ್ಕಾಟಿರ (ಹರಿಹರ-ಬೆಳ್ಳೂರು) ತಂಡವು ಮಾಳೇಟಿರ (ಕೆದಮುಳ್ಳೂರು) ವಿರುದ್ಧ ೬ ರನ್‌ಗಳ ರೋಚಕ ಗೆಲುವು ದಾಖಲಿಸಿತು. ಮುಕ್ಕಾಟಿರ ೧ ವಿಕೆಟ್ ಕಳೆದುಕೊಂಡು ಗುರಿ ನೀಡಿದ ೪೫ ರನ್‌ಗಳನ್ನು ಬೆನ್ನಟ್ಟಿದ ಮಾಳೇಟಿರ ೫ ವಿಕೆಟ್ ಕಳೆದುಕೊಂಡು ೩೮ ರನ್‌ಗೆ ಕುಸಿಯಿತು. ಮುಕ್ಕಾಟಿರ ಹರ್ಷಿತಾ ವಿನಯ್ ೨ ವಿಕೆಟ್, ಅಂಜನಾ ಪೊನ್ನಣ್ಣ ೧ ವಿಕೆಟ್ ಮತ್ತು ೨೮ ರನ್, ಪ್ರಮಿ ಬಿದ್ದಪ್ಪ ೧೩ ರನ್, ಮಾಳೇಟಿರ ಪಲ್ಲವಿ ೧೩ ರನ್ ಗಳಿಸಿದರು.

ಎರಡನೇ ಸೆಮಿಫೈನಲ್‌ನಲ್ಲಿ ಮಣವಟ್ಟಿರ ತಂಡವು ಆತಿಥೇಯ ಅರಮಣಮಾಡ ತಂಡವನ್ನು ೨೦ ರನ್‌ಗಳಿಂದ ಸೋಲಿಸಿತು. ಮಣವಟ್ಟಿರ ೨ ವಿಕೆಟ್ ಕಳೆದುಕೊಂಡು ೫೧ ರನ್ ದಾಖಲಿಸಿತು. ಅರಮಣಮಾಡ ೩ ವಿಕೆಟ್ ನಷ್ಟಕ್ಕೆ ಕೇವಲ ೩೧ ರನ್ ಗಳಿಸಿ ಸೋಲಿಗೆ ಶರಣಾಯಿತು. ಮಣವಟ್ಟಿರ ಸಂಗೀತ ೨೨ ರನ್, ಅರ್ಪಿತಾ ಹಾಗೂ ಸ್ಮಿತಾ ತಲಾ ೯ ರನ್, ಅರಮಣಮಾಡ ಟೀನಾ ೧೧ ರನ್, ಕಾವ್ಯ ೭ ರನ್, ಸಂಗೀತಾ ೨ ವಿಕೆಟ್, ಶೃತಿ ೧ ವಿಕೆಟ್ ಪಡೆದರು.

ಪುರುಷರ ಕ್ವಾರ್ಟರ್ ಫೈನಲ್ ಫಲಿತಾಂಶ

ಪುರುಷರ ವಿಭಾಗದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಚೆಕ್ಕೇರ, ನೆರವಂಡ, ಅಚ್ಚಪಂಡ ಹಾಗೂ ಕಳಕಂಡ ಗೆದ್ದು ಸೆಮಿಫೈನಲ್ ಪ್ರವೇಶ ಪಡೆದುಕೊಂಡಿತು.

ಕ್ವಾರ್ಟರ್ ಫೈನಲ್‌ನಲ್ಲಿ ಚೆಕ್ಕೇರ ತಂಡಕ್ಕೆ ಕಾಣತಂಡ ವಿರುದ್ಧ ೧ ರನ್‌ಗಳ ರೋಚಕ ಗೆಲುವು ದೊರೆಯಿತು. ಚೆಕ್ಕೇರ ೫ ವಿಕೆಟ್ ಕಳೆದುಕೊಂಡು ನಿಗದಿತ ೮ ಓವರ್‌ಗಳಲ್ಲಿ ೬೦ ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಕಾಣತಂಡ ೬ ವಿಕೆಟ್ ಕಳೆದುಕೊಂಡು ೫೮ ರನ್ ದಾಖಲಿಸಿ ವಿರೋಚಿತ ಸೋಲಿಗೆ ಶರಣಾಯಿತು. ಚೆಕ್ಕೇರ ಸಜನ್ ಸೋಮಯ್ಯ ಬಿಗಿ ದಾಳಿಗೆ ಕಾಣತಂಡ ಎಡವಿತು. ಪ್ರಮುಖ ೪ ವಿಕೆಟ್ ಕಳೆದುಕೊಂಡು ಪಂದ್ಯ ಕೈಚೆಲ್ಲಿ ಕೊಂಡಿತು. ಕಾರ್ಯಪ್ಪ ೨ ವಿಕೆಟ್‌ಗಳ ಗೆಲುವಿನ ಭಾಗವಾದರು. ಕಾಣತಂಡ ಕಿಶನ್ ೨೦ ರನ್, ಪ್ರಮೋದ್ ೧೩ ರನ್, ಚೆಕ್ಕೇರ ಸಜನ್ ಸೋಮಯ್ಯ ಹಾಗೂ ಆದರ್ಶ್ ತಲಾ ೧೨ ರನ್ ಪೇರಿಸಿದರು. ಕಾಣತಂಡ ಯಕ್ಷಿನ್ ೩ ವಿಕೆಟ್ ಪಡೆದು ಸುಲಭ ಗುರಿ ಪಡೆಯುವಂತಾಯಿತು. ನರೇಶ್ ಹಾಗೂ ಸಮಂತ್ ತಲಾ ೧ ವಿಕೆಟ್ ಪಡೆದರು. ನೆರವಂಡ ತಂಡಕ್ಕೆ ಮಾಳೇಟಿರ (ಕೆದಮುಳ್ಳೂರು) ವಿರುದ್ಧ ೮ ವಿಕೆಟ್‌ಗಳ ಜಯ ದೊರೆಯಿತು. ಮಾಳೇಟಿರ ೫ ವಿಕೆಟ್ ನಷ್ಟಕ್ಕೆ ೭೩ ರನ್ ಹೊಡೆದರು. ನೆರವಂಡ ೨ ವಿಕೆಟ್ ಕಳೆದುಕೊಂಡು ೬ ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದರು. ನೆರವಂಡ ಪ್ರಶಾಂತ್ ೪೬ ರನ್, ಪ್ರವೀಣ್ ಪೆಮ್ಮಯ್ಯ ೧೯ ರನ್, ಮಾಳೇಟಿರ ನವೀನ್ ೧೫, ರಾಣೆ ಕರುಂಬಯ್ಯ ೪೭ ರನ್, ನೆರವಂಡ ಕವನ್ ಕಾವೇರಪ್ಪ ೩ ವಿಕೆಟ್, ವರುಣ್ ಅಯ್ಯಪ್ಪ ೨, ಮಾಳೇಟಿರ ಪ್ರಯಾಗ್ ೧ ವಿಕೆಟ್ ಕಿತ್ತರು.

ಅಚ್ಚಪಂಡ ತಂಡಕ್ಕೆ ಚಿಮ್ಮಣಮಾಡ ವಿರುದ್ಧ ೧೦ ವಿಕೆಟ್‌ಗಳ ಜಯ ಸಿಕ್ಕಿತು. ಚಿಮ್ಮಣಮಾಡ ೯ ವಿಕೆಟ್ ಕಳೆದುಕೊಂಡು ೫೪ ರನ್‌ಗಳಿಗೆ ಕುಸಿಯಿತು. ಅಚ್ಚಪಂಡ ೪.೧ ಓವರ್‌ಗಳಲ್ಲಿ ಗುರಿಮುಟ್ಟಿತು. ಅಚ್ಚಪಂಡ ನಿರೋಶ್ ಹಾಗೂ ಅಯ್ಯಪ್ಪ ತಲಾ ೩ ವಿಕೆಟ್ ಕಬಳಿಸಿ ಚಿಮ್ಮಣಮಾಡ ತಂಡದ ಸೆಮಿಫೈನಲ್ ಆಸೆಗೆ ತಣ್ಣೀರು ಎರಚಿತು. ಅಯ್ಯಪ್ಪ ೪೩ ರನ್, ಮಿಥುನ್ ೧೨ ರನ್ ದಾಖಲಿಸಿದರು. ಚಿಮ್ಮಣಮಾಡ ಪರ ಸಚಿನ್ ೧೭ ರನ್ ಹೊಡೆದರು.

ಕಳಕಂಡ ತಂಡವು ತಂಬುಕುತ್ತೀರ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ತಂಬುಕುತ್ತಿರ ೯ ವಿಕೆಟ್ ಕಳೆದುಕೊಂಡು ೪೦ ರನ್ ದಾಖಲಿಸಿತು. ಕಳಕಂಡ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಳಕಂಡ ಕಾರ್ಯಪ್ಪ ಹ್ಯಾಟ್ರಿಕ್ ಸೇರಿ ೫ ವಿಕೆಟ್ ಪಡೆದು ಸಂಚಲನ ಮೂಡಿಸಿದರು. ತಂಬುಕುತ್ತಿರ ಅನಿಲ್ ೧೯, ಶರಣು ೧೫ ರನ್, ಸುಖೇಶ್ ೧ ವಿಕೆಟ್ ಕಿತ್ತರು.

ಮಾಳೇಟಿರ ಪಲ್ಲವಿ, ಅರಮಣಮಾಡ ಟೀನಾ, ಕಾಣತಂಡ ಕಿಶನ್, ಮಾಳೇಟಿರ ರಾಣೆ ಕರುಂಬಯ್ಯ, ಚಿಮ್ಮಣಮಾಡ ಸಚಿನ್, ತಂಬುಕುತ್ತಿರ ಅನಿಲ್, ಅರಮಣಮಾಡ ಮನವಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.