ಮಡಿಕೇರಿ, ಮೇ ೧೮: ಪ್ರಸಕ್ತ ವರ್ಷ ಬೇಸಿಗೆ ಅವಧಿಯಲ್ಲಿ ಭಾರೀ ತಡವಾಗಿ ಜಿಲ್ಲೆಯಲ್ಲಿ ಮಳೆಯಾಗಿತ್ತು. ಬಹುತೇಕ ಕಡೆಗಳಲ್ಲಿ ಮೇ ಮೊದಲ ವಾರದ ತನಕವೂ ಅಗತ್ಯವಾಗಿದ್ದ ಅಡ್ಡಮಳೆ ಸುರಿಯದೆ ಜನರು ಬಿಸಿಲಿನಿಂದ ಪರಿತಪಿಸುವಂತಾಗಿತ್ತು. ಪ್ರಮುಖ ಬೆಳೆಯಾದ ಕಾಫಿ, ಕರಿಮೆಣಸು ಸೇರಿದಂತೆ ಇತರ ಬೆಳೆಗಳಿಗೂ ವಾತಾವರಣ ವ್ಯತಿರಿಕ್ತವಾಗಿತ್ತಲ್ಲದೆ, ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಆದರೆ, ಇದೀಗ ವಾತಾವರಣದಲ್ಲಿನ ಅಸಹಜತೆಯಿಂದಾಗಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದಿನಂಪ್ರತಿ ಮಳೆ ಸುರಿಯುತ್ತಿದೆ. ಈಗಿನ ವಾತಾವರಣ ಬಹುತೇಕ ಕೊಡಗಿನಲ್ಲಿ ಮುಂಗಾರಿನ ಛಾಯೆಯನ್ನು ನೆನಪಿಸುವಂತಿದೆ.
ಇದೀಗ ಮೇ ಮೂರನೆಯ ವಾರ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯೂ ಪ್ರಾರಂಭವಾಗಲಿದೆ. ಈಗಿನ ವಾತಾವರಣ ಮತ್ತೆ ಕೆಲ ದಿನಗಳು ಮುಂದುವರಿದಿದ್ದೇ ಆದಲ್ಲಿ ಜನರು ಈಗಿನಿಂದಲೇ ಮಳೆಗಾಲಕ್ಕೆ ಹೊಂದಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ. ಬೇಸಿಗೆ ಸಂದರ್ಭದಲ್ಲಿ ವಿಳಂಬವಾದ ಮಳೆಯಿಂದ ಚಿಂತಿತರಾಗಿದ್ದವರಿಗೆ ಇದೀಗ ದಿಢೀರ್ ಬದಲಾವಣೆಯಿಂದ ಮತ್ತೊಂದು ರೀತಿಯ ಸಂದಿಗ್ಧತೆ ಎದುರಾಗುತ್ತಿದೆ. ತೋಟ ಕೆಲಸಗಳೂ ಸೇರಿದಂತೆ ಮಳೆಗಾಲಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕಾಗಿದ್ದ ಅನೇಕ ಕೆಲಸ - ಕಾರ್ಯಗಳು ಇನ್ನೂ ಮುಗಿದಿಲ್ಲ. ಹಲವಾರು ಕಡೆಗಳಲ್ಲಿ ಬೇಸಿಗೆ ಮಳೆ ವಿಳಂಬದಿAದಾಗಿ, ತೋಟ ಕಪಾತು, ಮರ ಕಪಾತುವಿನಂತಹ ಕೆಲಸಗಳು ಮುಗಿದಿಲ್ಲ. ಗೊಬ್ಬರ ಪೂರೈಸುವ ಸಿದ್ಧತೆಗಳೂ ನಡೆಯಬೇಕಿದೆ. ಇಂತಹ ಪರಿಸ್ಥಿತಿಯ ನಡುವೆ ವಾತಾವರಣದ ಏರುಪೇರಿನಿಂದಾಗಿ ಅಲ್ಲಲ್ಲಿ ಭಾರೀ ಮಳೆಯಾಗುತ್ತಿರುವುದು ಹೊಸ ಆತಂಕಕ್ಕೆ ಎಡೆಯಾಗಿದೆ.
ಪ್ರಸ್ತುತ ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಅಪರಾಹ್ನದ ನಂತರ ಬಿರುಮಳೆಯಾಗುತ್ತಿರುವುದು ಕಂಡು ಬಂದಿದೆ. ವಿಶೇಷವೆಂದರೆ ಬರಡಾ ದಂತಿದ್ದ ಹಾರಂಗಿ ಜಲಾಶಯಕ್ಕೆ ಕೆಲ ದಿನದಿಂದ ನೀರಿನ ಹರಿವು ಹೆಚ್ಚಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ ೭೦ ಕ್ಯೂಸೆಕ್ಸ್ನಷ್ಟು ಇದ್ದ ಒಳಹರಿವು ತಾ. ೧೮ರಂದು ೨೦೦ ಕ್ಯೂಸೆಕ್ಸ್ನಷ್ಟಿತ್ತು.
೬.೫೧ ಇಂಚು
ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ೬.೫೧ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೪.೫೮ ಇಂಚಿನಷ್ಟಿತ್ತು.
ಮಡಿಕೇರಿ ತಾಲೂಕಿಗೆ ಇದೀಗ ಜನವರಿಯಿಂದ ಈ ತನಕ ೮.೫೩ ಇಂಚು ಮಳೆಯಾಗಿದೆ. ಕಳೆದ ವರ್ಷ ೬.೬೯ ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿಗೂ ಜನವರಿಯಿಂದ ಈ ತನಕ ೪.೩೮ ಇಂಚು ಮಳೆಯಾಗಿದ್ದರೆ, ಕಳೆದ ಬಾರಿ ೨.೮೪ ಇಂಚಿನಷ್ಟಿತ್ತು.
ಪೊನ್ನAಪೇಟೆ ತಾಲೂಕಿನಲ್ಲಿ ಜನವರಿಯಿಂದ ಈ ತನಕ ೫.೯೯ ಇಂಚು ಹಾಗೂ ಕಳೆದ ಬಾರಿ ೩.೦೭ ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿಗೂ ಹೆಚ್ಚು ಮಳೆಯಾಗಿದೆ. ಜನವರಿಯಿಂದ ಈ ತನಕ ೫.೦೪ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಈ ಅವಧಿಯಲ್ಲಿ ೩.೭೬ ಇಂಚಿನಷ್ಟಾಗಿತ್ತು. ಕುಶಾಲನಗರ ತಾಲೂಕಿಗೆ ಜನವರಿ ಯಿಂದ ಈ ತನಕ ೮.೬೦ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೬.೫೩ ಇಂಚಿನಷ್ಟಿತ್ತು. ವಿಶೇಷವೆಂದರೆ ಈ ಬಾರಿ ಎಲ್ಲಾ ತಾಲೂಕಿನಲ್ಲೂ ಮಳೆಯ ಪ್ರಮಾಣ ಹೆಚ್ಚಿದೆಯಾದರೂ ಮಳೆ ಸುರಿದಿರು ವುದು ಇತ್ತೀಚಿನ ಕೆಲ ದಿನಗಳಿಂದ ಮಾತ್ರ. ಶನಿವಾರದಂದು ಅಪರಾಹ್ನ ದಿಂದಲೇ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಹಲವಾರು ಭಾಗಗಳಲ್ಲಿ ಭಾರೀ ಮಳೆ ಯಾಗಿದೆ. ದಿಢೀರ್ ಮಳೆಯಿಂದಾಗಿ ದೈನಂದಿನ ಜನಜೀವನ ಅಸ್ತವ್ಯಸ್ತ ಗೊಂಡAತಾಗಿತ್ತು. ಕೆಲವೆಡೆಗಳಲ್ಲಿ ಸುಮಾರು ಎರಡು ಇಂಚಿಗಿAತಲೂ ಅಧಿಕ ಮಳೆಯಾಗಿರುವ ಕುರಿತು ವರದಿಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೂ ಒಂದೆರಡು ದಿನ ಇದೇ ವಾತಾವರಣ ಮುಂದುವರಿಯಲಿದೆ. ಜೊತೆಗೆ ಮೇ ೩೧ರ ವೇಳೆಯಿಂದಲೇ ಮುಂಗಾರು ಮಳೆಯೂ ಪ್ರಾರಂಭಗೊಳ್ಳುವ ಸಾಧ್ಯತೆಗಳಿವೆ.