*ಗೋಣಿಕೊಪ್ಪ, ಮೇ ೧೭: ಇತಿಹಾಸ ಪ್ರಸಿದ್ಧ ಕೆಸರಿನ ಓಕುಳಿಯ ಹಬ್ಬ ಎಂದೆ ಹೆಸರುವಾಸಿಯಾಗಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ, ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೧೮ (ಇಂದು) ಹಾಗೂ ೧೯ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬ ವಿಜೃಂಭಣೆಯಿAದ ನಡೆಯಲಿದ್ದು ಮೇ-೧೧ಕ್ಕೆ ದೇವಕಟ್ಟ್ ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳು ಆಚರಣೆಯಲ್ಲಿದ್ದು ತಾ. ೧೮ರಂದು ದೇವಕಟ್ಟನ್ನು ಸಡಿಲಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯುತ್ತದೆ.

ತಾ. ೧೮ರಂದು ಅಪರಾಹ್ನ ಸುಮಾರು ೨.೩೦ ಗಂಟೆಗೆ ಊರು ತಕ್ಕರಾದ ಚಮ್ಮಟೀರ ಕುಟುಂಬದ ಐನ್‌ಮನೆಯಿಂದ ಪೊಲವಂದೆರೆ ಹೊರಡುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ನಂತರ ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲದಲ್ಲಿ ವಿವಿಧ ಆಚರಣೆಗಳು ನಡೆದು, ಊರಿನ ನಿಗದಿತ ಸ್ಥಳಗಳಿಗೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದ ಬಳಿಕ ೩ ಗಂಟೆಗೆ ಮೂಕಳೇರ ಐನ್‌ಮನೆಗೆ ಹೋಗುವ ರಸ್ತೆಯಲ್ಲಿರುವ ಪೊಲವಪ್ಪ ಕೋಟದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ತಾ. ೧೯ ರಂದು ಚಮ್ಮಟೀರ ಹಾಗೂ ಮೂಕಳೇರ ಬಲ್ಯಮನೆಯಿಂದ ತಲಾ ಒಂದೊAದು ಕುದುರೆ ಹಾಗೂ ದೇವರ ಮೊಗ ಶೃಂಗಾರಗೊAಡು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಹೊರಡಲಿದ್ದು, ಸಂಜೆ ಸುಮಾರು ೩ ಗಂಟೆಯ ನಂತರ ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಹಾಗೂ ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸಿ ವಿವಿಧ ರೀತಿಯ ಆಚರಣೆಯ ಬಳಿಕ ದೇವರಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರೆರಚಾಟದೊಂದಿಗೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ಇಲ್ಲಿಗೆ ಹೊರಗಿನ ಊರಿನಿಂದ ಬರುವ ಅತಿಥಿಗಳಿಗೆ, ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೆ ಮುಕ್ತವಾಗಿ ಊರಿನವರೊಂದಿಗೆ ಸಂಭ್ರಮಿಸಲು ಅವಕಾಶವಿದ್ದು, ಅಂತಹವರಿಗೆ ಒಂದೊAದು ಬೆತ್ತ ನೀಡಲಾಗುತ್ತದೆ. ಬೆತ್ತದ ಕೋಲು ಹಿಡಿದವರಿಗೆ ಕೆಸರು ಹಾಕುವಂತಿಲ್ಲ. ಹಾಕಿದ್ದರೆ ಅವರಿಗೆ ದಂಡ ಬೀಳುತ್ತದೆ. ಕೆಸರು ಎರಚಾಟದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ ಎಂಬುವುದು ಹಬ್ಬದ ಸಂಪ್ರದಾಯ ಆಚರಣೆಯಾಗಿದೆ ಎಂದು ಪ್ರವೀಣ್ ವಿವರಿಸಿದ್ದಾರೆ.