ವರದಿ: ಚಂದ್ರಮೋಹನ್
ಕುಶಾಲನಗರ, ಮೇ.೧೮: ಕುಶಾಲನಗರದ ಐತಿಹಾಸಿಕ ಕೆರೆಯಾದ ತಾವರೆಕೆರೆಗೆ ಕಾಯಕಲ್ಪ ನೀಡುವಲ್ಲಿ ಕುಶಾಲನಗರ ಪುರಸಭೆ ಮೂಲಕ ಕಾರ್ಯ ಯೋಜನೆ ರೂಪಿಸಲು ಚಿಂತನೆ ಹರಿಸಿದೆ.
ಸ್ಥಳೀಯರ ಆಗ್ರಹದ ಮೇರೆಗೆ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ಪುರಸಭೆ ಆಡಳಿತ ಅಧಿಕಾರಿಗಳು ಮತ್ತು ಮಡಿಕೇರಿ ಉಪ ವಿಭಾಗಾಧಿಕಾರಿಗಳ ಸಲಹೆಯಂತೆ ತಾವರೆಕೆರೆಯ ಅಭಿವೃದ್ಧಿ ಮತ್ತು ಕೆರೆ ತಟದ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ.
ಸುಮಾರು ೩.೮೩ ಎಕರೆ ವ್ಯಾಪ್ತಿಯ ಬೃಹತ್ ಕೆರೆ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದ ದೃಶ್ಯ ಕಂಡು ಬಂದಿತ್ತು.
ಇತ್ತೀಚೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರ ಯೋಜನೆಯ ಶೌರ್ಯ ತಂಡದ ಸದಸ್ಯರು, ಕಾಲೇಜು ಎನ್ ಎಸ್ ಎಸ್ ತಂಡದ ವಿದ್ಯಾರ್ಥಿಗಳು, ಕುಶಾಲನಗರ ಪುರಸಭೆ ಸಹಯೋಗದೊಂದಿಗೆ ತಾವರೆಕೆರೆಯ ತಟದ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.
ಒAದಲ್ಲ ಒಂದು ರೀತಿಯಲ್ಲಿ ತಾವರೆಕೆರೆ ಅಭಿವೃದ್ಧಿ ಕಾಣದೆ ಹೂಳು ತುಂಬಿ ಕೆರೆಯ ಅಸ್ತಿತ್ವವೇ ಕಾಣದಂತೆ ಪೊದೆ ತುಂಬಿದ ದೃಶ್ಯ ಕೂಡ ಗೋಚರಿಸಿತ್ತು. ಕೆರೆಯ ಅಭಿವೃದ್ಧಿಗಾಗಿ ಕುಶಾಲನಗರ ನಗರ ಅಭಿವೃದ್ಧಿ ಪ್ರಾಧಿಕಾರ ಮೂಲಕ ಯೋಜನೆ ರೂಪಿಸಿ ಹಲವು ವರ್ಷ ಕಳೆದರೂ ಯಾವುದೇ ರೀತಿಯ ಪ್ರಯೋಜನ ಕಂಡುಬAದಿಲ್ಲ.
ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಕೆಲ ವರ್ಷಗಳ ಹಿಂದೆ ಯೋಜನೆ ರೂಪುಗೊಂಡರೂ ಅನುಷ್ಟಾನ ಮಾಡುವಲ್ಲಿ ‘ಕುಡ’ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನೊಂದೆಡೆ ಕೆರೆಯ ಅಕ್ರಮ ಒತ್ತುವರಿ ಕೂಡ ನಿರಂತರವಾಗಿ ನಡೆಯುತ್ತಿತ್ತು.
ಹೈಕೋರ್ಟ್ ವಕೀಲ ಪಿ. ಅಮೃತೇಶ್ ಅವರು ಕೆರೆ ಒತ್ತುವರಿ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ಹೂಡಿ ಈ ಹಿನ್ನೆಲೆಯಲ್ಲಿ ಹಲವು ಬಾರಿ ಸರ್ವೆ ಕಾರ್ಯ ನಡೆಸಿ ಹದ್ದು ಬಸ್ತು ಗುರುತಿಸಲಾಗಿತ್ತು.
ಹಿಂದೆ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮಂಜುನಾಥ ಗುಂಡೂರಾವ್ ಅವರು ಕೆರೆಯ ಅಭಿವೃದ್ಧಿಗೆ ವಿಶೇಷ ಕ್ರಿಯಾ ಯೋಜನೆ ಒಂದನ್ನು ರೂಪಿಸಿದರೂ ಅದು ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿತ್ತು.
ಈ ಸಾಲಿನಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳು ಸೂಚನೆ ನೀಡಿದ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಕೆರೆಯ ಹೂಳೆತ್ತುವ ಬಗ್ಗೆ ಕೂಡ ಚಿಂತನೆ ನಡೆದಿತ್ತು.
ಇದೀಗ ಕೆರೆಯ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದಿರುವ ಕಾರಣ ಈ ಬಾರಿ ಹೂಳೆತ್ತಲು ಸಮಸ್ಯೆ ಉಂಟಾಗಿದೆ ಮುಂದಿನ ದಿನಗಳಲ್ಲಿ ಕೆರೆಯ ಹೂಳೆತ್ತಲು ಕಾಮಗಾರಿ ನಡೆಯಲಿದೆ ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಪ್ರಸಕ್ತ ಕೆರೆಯ ಸುತ್ತಲೂ ಹಿಟಾಚಿ ಮೂಲಕ ಹೂಳನ್ನು ಎತ್ತಿ ಮೇಲೆ ಹಾಕಲಾಗುತ್ತಿದೆ. ಆದರೆ ನೀರಿನ ಸಂಗ್ರಹದ ಪ್ರಮಾಣದಿಂದ ಹಿಟಾಚಿ ಯಂತ್ರ ಕೆಸರಿನಲ್ಲಿ ಸಿಲುಕಿಕೊಂಡಿದ್ದು ಸಿಬ್ಬಂದಿಗಳು ಯಂತ್ರವನ್ನು ಮೇಲೆತ್ತಲು ಹರಸಾಹಸ ಪಡುವಂತಾಯಿತು.
ಕಳೆದ ೨೪ ವರ್ಷಗಳ ಹಿಂದೆ ಹೂಳೆತ್ತುವ ಕಾಮಗಾರಿ ಸಂದರ್ಭ ಕೂಡ ಇದೇ ರೀತಿ ಹಿಟಾಚಿ ಯಂತ್ರ ಕೆರೆಯಲ್ಲಿ ಕೆಸರಿನಲ್ಲಿ ಸಿಲುಕಿ ಎರಡು ದಿನಗಳ ಕಾಲ ಅದನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.