ಮಡಿಕೇರಿ, ಮೇ ೧೮: ಗೋದಾಮಿನಲ್ಲಿಟ್ಟಿದ್ದ ಕಾಳುಮೆಣಸು ಕಳವು ಮಾಡಿದ್ದ ಐವರು ಆರೋಪಿಗಳ್ನು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ೨೪ ಗಂಟೆಯೊಳಗೆ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ನಿವಾಸಿಗಳಾದ ಸುಬ್ರಮಣಿ (೨೪), ಮಂಜು (೨೫), ಬೆಳ್ಳಿ (೩೬), ಕರ್ಪ (೪೯) ಹಾಗೂ ಕುಶಾಲ (೧೯) ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆÀ

ಅರ್ವತೋಕ್ಲುವಿನ ನಿವಾಸಿ ಎಂ. ಸುಬ್ಬಯ್ಯ ಎಂಬವರ ಮನೆಯ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಅಂದಾಜು ೪೫೦ ಕೆ.ಜಿ. ಕಾಳುಮೆಣಸು ಕಳ್ಳತನವಾಗಿರುವ ಕುರಿತು ತಾ. ೧೬ ರಂದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿದ ತನಿಖಾ ತಂಡ ಅವರುಗಳಿಂದ ಕಳವು ಮಾಡಿದ್ದ ೪೦೦ ಕೆಜಿ ಕಾಳುಮೆಣಸು, ಕೃತ್ಯಕ್ಕೆ ಬಳಸಿದ ೩ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳು ಸುಬ್ಬಯ್ಯ ಅವರ ತೋಟದ ಪಕ್ಕದ ತೋಟವೊಂದರ ಲೈನ್‌ಮನೆಯಲ್ಲಿ ವಾಸವಾಗಿದ್ದರು. ಗೋದಾಮಿನಲ್ಲಿ ಕಾಳುಮೆಣಸು ಇರುವುದು ತಿಳಿದು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ವೀರಾಜಪೇಟೆ ಉಪವಿಭಾಗ ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ ಮುಧೋಳ್, ಉಪನಿರೀಕ್ಷರುಗಳಾದ ರೂಪ ಬಿರಾದರ್, ಗೌರಿಶಂಕರ್, ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ

ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಶ್ಲಾಘಿಸಿದ್ದಾರೆ.