ಕೂಡಿಗೆ, ಮೇ ೧೭ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಈ ವ್ಯಾಪ್ತಿಯ ರೈತರು ಮೆಕ್ಕೆಜೋಳ ಬಿತ್ತನೆಗೆ ಭೂಮಿಯನ್ನು ಸಿದ್ಧತೆ ಮಾಡುವಲ್ಲಿ ತೊಡಗಿದ್ದಾರೆ.

ಕಳೆದ ತಿಂಗಳು ಸುಡುಬಿಸಿಲಿನ ತಾಪಮಾನಕ್ಕೆ ಭೂಮಿಯ ತಾಪಮಾನವು ಹೆಚ್ಚಾಗಿದ್ದು, ಇದೀಗ ಕಳೆದ ಒಂದು ವಾರದಿಂದ ಕುಶಾಲನಗರ ತಾಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಅಳುವಾರ, ಬಾಣಾವಾರ ವ್ಯಾಪ್ತಿಯಲ್ಲಿ ಭಾರಿ ಮಳೆ ಬಿದ್ದ ಪರಿಣಾಮವಾಗಿ ಭೂಮಿಯು ಉಳುಮೆ ಮಾಡಲು ಹದವಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಈಗಾಗಲೇ ಟ್ರಾಕ್ಟರ್ ಮೂಲಕ ತಮ್ಮ ತಮ್ಮ ಜಮೀನುಗಳ ಉಳುಮೆ ಮಾಡಲು ಸಿದ್ಧರಾಗಿದ್ದಾರೆ.

ಜೂನ್ ಮೊದಲ ವಾರದಲ್ಲಿ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತಗೊಂಡ ಹೈಬ್ರೀಡ್ ತಳಿ ಮೆಕ್ಕೆಜೋಳವನ್ನು ಖರೀದಿಸಿ ನಂತರ ಗೊಬ್ಬರ ಮತ್ತು ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗುವುದು ಎಂದು ಈ ವ್ಯಾಪ್ತಿಯ ಪ್ರಗತಿಪರ ರೈತರಾದ ವಿಶ್ವನಾಥ, ಶಿವಣ್ಣ, ಮಹೇಶ್, ರವಿ, ಮಂಜುನಾಥ ಸೇರಿದಂತೆ ಅನೇಕ ರೈತರು ತಿಳಿಸಿದ್ದಾರೆ.