ಕುಶಾಲನಗರ, ಮೇ ೧೭: ಕುಶಾಲನಗರ ವಾರದ ಸಂತೆ ನಡೆಯುತ್ತಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಸಂಪೂರ್ಣ ತ್ಯಾಜ್ಯಮಯವಾಗಿ ಗೋಚರಿಸುತ್ತಿದೆ.
ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಸುರಿದು ಇಡೀ ಪ್ರದೇಶ ವಾಸನಾಮಯವಾಗಿ ಪರಿವರ್ತನೆ ಗೊಂಡಿದೆ.
ಸಂತೆ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಆದರೆ ಅದನ್ನು ಸ್ವಚ್ಛಗೊಳಿಸಿದ ನಂತರ ಸಮರ್ಪಕವಾಗಿ ವಿಲೇವಾರಿ ಮಾಡದೆ ಆವರಣದಲ್ಲಿ ರಾಶಿ ಹಾಕಿ ಬೆಂಕಿ ಹಾಕಿ ಸುಡುತ್ತಿರುವುದು ಬೆಳವಣಿಗೆಯಾಗಿದ್ದು ಇದರಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಾಕರ್ಸ್ ಅಸೋಸಿಯೇಷನ್ ಸದಸ್ಯರು ನೆಟ್ಟು ಬೆಳೆಸಿದ ನೂರಾರು ಸಂಖ್ಯೆಯ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಲು ಕಾರಣವಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹೆಚ್ ಟಿ ರವಿ ಮತ್ತು ಪ್ರಮುಖರಾದ ಪ್ಯಾರಡೈಸ್ ರವಿ, ವನಿತಾ ಚಂದ್ರಮೋಹನ್, ಮತ್ತಿತರರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಇದರೊಂದಿಗೆ ನೆಟ್ಟು ಬೆಳೆಸಿದ ಗಿಡಗಳನ್ನು ಬೆಂಕಿ ಹಾಕಿ ಸುಡಲಾಗಿದೆ. ಮಳೆಗಾಲದಲ್ಲಿ ತ್ಯಾಜ್ಯಗಳು ನೇರವಾಗಿ ನದಿ ಸೇರುವ ಸಾಧ್ಯತೆ ಇದೆ. ಸಂಬAಧಿಸಿದ ಆಡಳಿತ ಅಧಿಕಾರಿ ತಾಲೂಕು ತಹಶೀಲ್ದಾರ್ ಅವರು ತ್ಯಾಜ್ಯ ವಿಲೇವಾರಿ ಬಗ್ಗೆ ಗಮನಹರಿಸಿ ಕ್ರಮ ಕೈಗೊಂಡು ಮುಂದೆ ಇಂತಹ ಅನಾಹುತಗಳು ನಡೆದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.