ಮಡಿಕೇರಿ, ಮೇ ೧೮: ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನವರಾದ ಜಸ್ಟೀಸ್ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಇದೀಗ ನಿವೃತ್ತಿ ಹೊಂದುತ್ತಿದ್ದಾರೆ. ತಾ. ೧೯ ರಂದು (ಇಂದು) ನಿವೃತ್ತಿ ಹೊಂದಲಿರುವ ಇವರಿಗೆ ನಿನ್ನೆ ಸುಪ್ರೀಂ ಕೋರ್ಟ್ನಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸುಪ್ರೀಂಕೋರ್ಟ್ ವಕೀಲರ ಸಂಘದ ಮೂಲಕ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೀಫ್ ಜಸ್ಟೀಸ್ ಆಫ್ ಇಂಡಿಯಾ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಬೋಪಣ್ಣ ಅವರ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು. ಕಾನೂನು ವಿಚಾರಗಳನ್ನು ಆಳವಾಗಿ ಅರಿತಿದ್ದ ಬೋಪಣ್ಣ ಅವರು ಶಾಂತ ಸ್ವಭಾವದವರಾಗಿದ್ದರು. ಐದು ವರ್ಷಗಳ ಸೇವಾ ಅವಧಿಯಲ್ಲಿ ೯೦ಕ್ಕೂ ಅಧಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಒಂದು ರೀತಿಯಲ್ಲಿ ಅವರು ಸುಪ್ರೀಂಕೋರ್ಟ್ ತಂಡಕ್ಕೆ ಕ್ರಿಕೆಟ್‌ನಲ್ಲಿ ಮಿಸ್ಟರ್ ಡಿಪೆಂಡೇಬಲ್ ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಂತೆ ಇದ್ದುದಾಗಿ ಚಂದ್ರಚೂಡ್ ಅವರು ಬಣ್ಣಿಸಿದರು.

೧೯೫೯ರ ಮೇ ೨೦ ರಂದು ಜನಿಸಿದ ಬೋಪಣ್ಣ ಅವರು ೧೯೮೪ರಲ್ಲಿ ವಕೀಲ ವೃತ್ತಿ ಆರಂಭಿಸಿ, ೨೦೦೬ರಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯ ಮೂರ್ತಿಗಳಾಗಿ ನೇಮಕ ಗೊಂಡಿದ್ದರು. ಬಳಿಕ ೨೦೧೯ರ ಮೇ ೨೪ ರಂದು ಬೋಪಣ್ಣ ಅವರು ಸುಪ್ರೀಂಕೋರ್ಟ್ನ ನ್ಯಾಯ ಮೂರ್ತಿಗಳಾಗಿ ನಿಯುಕ್ತಿ ಗೊಂಡಿದ್ದರು.

ಕೊಡವ ಭಾಷೆಯಲ್ಲಿ ಮಾತನಾಡಿದ ಸಿಜೆಐ

ತಮ್ಮ ಭಾಷಣದ ನಡುವೆ ಸಿಜೆಐ ಚಂದ್ರಚೂಡ್ ಅವರು ಬೋಪಣ್ಣ ಅವರನ್ನು ಬ್ರದರ್ ಬೋಪಣ್ಣ ಎಂಬುದಾಗಿ ಸಂಬೋಧಿಸಿ ಬೋಪಣ್ಣ ಅವರ ಮಾತೃ ಭಾಷೆಯಾದ ಕೊಡವತಕ್ಕ್ನಲ್ಲೂ ಇವರ ಬಗ್ಗೆ ಮಾತನಾಡಿದ್ದು, ವಿಶೇಷವಾಗಿತ್ತು.

‘‘ಕೊಡಗು ಜಿಲ್ಲೆಯಲ್ಲಿ ಕೊಡವ ಜನಾಂಗದಲ್ಲಿ ಜನಿಸಿದವರು ಇವರಾಗಿದ್ದಾರೆ. ಮಾರ್ಷಲ್ ಟ್ರೆಡಿಷನ್‌ನ ಕೊಡವರು ಜನರಲ್‌ಗಳಾಗಿ, ಸೈನಿಕರಾಗಿ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ’’ ಎಂದ ಅವರು ಫೀ. ಮಾ. ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನು ಉಲ್ಲೇಖಿಸಿದರು. (ಮೊದಲ ಪುಟದಿಂದ) ಇತರರಂತೆ ಇವರು ಸೇನೆಗೆ ಸೇರದಿದ್ದರೂ ‘ಸೋಲ್ಜರ್ ಆಫ್ ಜಸ್ಟೀಸ್’ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು. ಬಳಿಕ ಕೊಡವ ಭಾಷೆಯಲ್ಲಿ ಕೂಡ ಚಂದ್ರಚೂಡ್ ಅವರು ಮಾತನಾಡಿ, ಇದನ್ನು ಆಂಗ್ಲಭಾಷೆಯಲ್ಲೂ ವಿವರಿಸಿದರು.

ಯುನೆಸ್ಕೊ ಪಟ್ಟಿ ಮಾಡಿರುವಂತೆ ಕೊಡವ ಭಾಷೆ ಅಳಿವಿನಂಚಿನಲ್ಲಿರುವ ಭಾಷೆಯಾಗಿದೆ. ಕಾವೇರಿ ತಾಯಿಯ ಮಣ್ಣಿನಲ್ಲಿ ಕಾವೇರಿಯ ಪುತ್ರರಾಗಿ ಜನಿಸಿದವರು ನೀವು, ಕೊಡಗಿನ - ಕೊಡವರ ಕೀರ್ತಿ ವೀರಪರಂಪರೆಯನ್ನು ದೆಹಲಿಯ ತನಕ ಪಸರಿಸಿ ದೇಶಕ್ಕೆ ಕೀರ್ತಿ ತಂದಿದ್ದೀರ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಮ್ಮದೇ ಹೆಜ್ಜೆಯಲ್ಲಿ ನಡೆದಿರುವ ನೀವು ಮಾಡಿರುವ ಸೇವೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಾಶ್ವತವಾಗಿರುತ್ತದೆ ಎಂದು ಬಣ್ಣಿಸಿದರು.