ಶನಿವಾರಸಂತೆ, ಮೇ ೧೭: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ೫-೩೦ ರಿಂದ ಗುಡುಗು - ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿದು ಇಳೆ ತಂಪಾಯಿತು. ೨ ಇಂಚಿಗೂ ಅಧಿಕ ಮಳೆಯಾಗಿದ್ದು, ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡು ಬೆಳಗ್ಗಿನ ಜಾವದವರೆಗೂ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಮೊದಲ ಬಾರಿಗೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.
ಶುಕ್ರವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಈ ಭಾಗದಲ್ಲಿ ವರ್ಷ ಪ್ರಾರಂಭದಿAದ ಈವರೆಗೆ ಒಟ್ಟು ೫ ಇಂಚು ಮಳೆಯಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ ಕೃಷಿಕರು ಹರ್ಷಚಿತ್ತರಾಗಿದ್ದಾರೆ.
ತೋಟದಲ್ಲಿ ಕೊಳವೆಬಾವಿಯಿದ್ದು, ನೀರಿನ ಅನುಕೂಲವಿದ್ದವರು ಮೋಟಾರ್ ಮೂಲಕ ನೀರು ಹಾಯಿಸಿದ ಪರಿಣಾಮ ಕಾಫಿ ಹೂವರಳಿ, ಫಸಲು ಚೆನ್ನಾಗಿದೆ. ಆದರೆ, ಮಳೆಯನ್ನೇ ಅವಲಂಬಿಸಿರುವ ಬೆಳೆಗಾರರು ಮಳೆ ಮುಂದುವರೆದರೆ ತೊಂದರೆಯಿಲ್ಲವಾದರೂ ಸಕಾಲಕ್ಕೆ ಮಳೆಯಾಗದ ಕಾರಣ ಉತ್ತಮ ಫಸಲು ನಿರೀಕ್ಷಿಸುವಂತಿಲ್ಲ. ಹೂ ಅರಳಿದರೂ ಕಾಫಿ ಮತ್ತು ಕಾಳುಮೆಣಸು ಇಳುವರಿ ಕೊಡುವುದಿಲ್ಲ ಎಂದು ಕೂಜಗೇರಿ ಗ್ರಾಮದ ಬೆಳೆಗಾರ ಕೆ.ಟಿ.ಹರೀಶ್ ಮತ್ತಿತರರು ಆತಂಕ ವ್ಯಕ್ತಪಡಿಸಿದರು.
ಭತ್ತ ಬೆಳೆಯುವ ರೈತರಲ್ಲಿ ಗುರುವಾರ ಸಂಜೆ ಸುರಿದ ಮಳೆ ಉತ್ಸಾಹ ಗರಿಗೆದರಿಸಿದೆ. ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದು ಗದ್ದೆಯಲ್ಲಿ ಉಳುಮೆ ಮಾಡುವ ಸಿದ್ಧತೆಯಲ್ಲಿದ್ದಾರೆ.