ಮಡಿಕೇರಿ, ಮೇ ೧೭: ಜಿಲ್ಲಾ ಹಾಪ್‌ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಹಾಪ್‌ಕಾಮ್ಸ್ ಆವರಣದಲ್ಲಿ ತಾ. ೨೪ ರಿಂದ ೨೬ ರ ತನಕÀ ಮೂರು ದಿನಗಳ ಕಾಲ ಮಾವು ಹಾಗೂ ಹಲಸು ಮೇಳ ನಡೆಯಲಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಮಾವು ಮೇಳ ನಡೆಯುತ್ತಿದ್ದು, ಈ ಬಾರಿ ಮೇಳದಲ್ಲಿ ಮಾವಿನೊಂದಿಗೆ ಹಲಸಿನ ಹಣ್ಣು ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿ ನೇರ ಮಾರುಕಟ್ಟೆ ಸೃಷ್ಟಿಸಲು ಈ ಮೇಳ ಪೂರಕ ವಾಗಿದ್ದು, ೧೦-೧೫ ತಳಿಗಳ ಮಾವು ಹಾಗೂ ವಿವಿಧ ಬಗೆಯ ಹಲಸು ಮೇಳದ ಆಕರ್ಷಣೆಯಾಗಲಿದೆ. ಹಾಪ್‌ಕಾಮ್ಸ್ ರೈತಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಂದ ನಿಗದಿತ ದರದಲ್ಲಿ ಹಣ್ಣು-ತರಕಾರಿಯನ್ನು ಖರೀದಿಸಿ ಗ್ರಾಹಕರಿಗೆ ಅರ್ಹ ದರದಲ್ಲಿ ಮಾರಾಟ ಮಾಡುತ್ತಿದೆ ಎಂದರು.

ತಾ. ೨೪ ರಂದು ಮೇಳವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಉದ್ಘಾಟಿಸಲಿದ್ದು, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹೆಚ್.ಆರ್. ಯೋಗೀಶ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ ಮಾತನಾಡಿ, ಕೊಡಗು ಸೇರಿದಂತೆ ರಾಜ್ಯದಲ್ಲಿ ಶೇ ೧೪ ರಷ್ಟು ಮಾವು ಬೆಳೆ ಕುಸಿತ ಕಂಡಿದೆ. ಜಿಲ್ಲೆಯ ಕಾಡುಮಾವಿಗೆ ಭಾರಿ ಬೇಡಿಕೆ ಇದ್ದು, ಅದನ್ನು ಪುನಶ್ಚೇತನಗೊಳಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಿಸಿದ ಅವರು, ಕೊಡಗು ಸೇರಿದಂತೆ ರಾಮನಗರ, ಕನಕಪುರ, ಚಿಕ್ಕಬಳ್ಳಾಪುರದಿಂದ ಮಾವು-ಹಲಸು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷದ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಈ ಬಾರಿಯೂ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಎಸ್.ಪಿ. ಪೊನ್ನಪ್ಪ, ಕೆ.ಎಂ. ಮನೋಹರ್, ಹೆಚ್.ಎಂ. ಸುಧೀರ್, ಕಾರ್ಯದರ್ಶಿ ರೇಷ್ಮಾ ಗಿರೀಶ್ ಹಾಜರಿದ್ದರು.