ಅತಿ ಪುರಾತನವಾದ ಈ ಮಹಾಕ್ಷೇತ್ರವು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ ಇರ್ಪುವಿನಲ್ಲಿರುವುದು. ಈ ದೇವಸ್ಥಾನದಲ್ಲಿರುವ ಉದ್ಭವ ಶಿವಲಿಂಗವನ್ನು ತ್ರೇತಾಯುಗದಲ್ಲಿ ಶ್ರೀರಾಮನು ಪ್ರತಿಷ್ಠಾಪಿಸಿದನೆನ್ನಲಾಗಿದೆ. ದೇವರ ಪ್ರತಿಷ್ಠಾಪನೆಯಲ್ಲಿ ದೇವ ಪ್ರತಿಷ್ಠೆ ಮತ್ತು ತಂತ್ರಿ ಪ್ರತಿಷ್ಠೆ ಎಂಬ ಎರಡು ವಿಧವಿದೆ. ಇದು ದೇವ ಪ್ರತಿಷ್ಠೆಯಾದ್ದರಿಂದ ಇಲ್ಲಿ ಧ್ವಜಸ್ಥಂಭ ಇರುವುದಿಲ್ಲ.
ಮೂರು ದಿಕ್ಕಿನಲ್ಲಿ ಬೆಟ್ಟ ಹಾಗೂ ಒಂದು ದಿಕ್ಕಿನಲ್ಲಿ ಬಯಲು ಪ್ರದೇಶ ಮತ್ತು ಮಧ್ಯದಲ್ಲಿ ಸದಾ ಹರಿಯುವ ಲಕ್ಷ್ಮಣ ತೀರ್ಥ ಹೊಳೆಯನ್ನು ಹೊಂದಿರುವ ದೇವಸ್ಥಾನವು ವಿಶಾಲವಾದ ದೊಡ್ಡ ಕಗ್ಗಲ್ಲ ಮೇಲೆ ಬಹಳ ಸುಂದರವಾಗಿ ನಿರ್ಮಾಣಗೊಂಡಿದೆ. ಕಾಫಿ ತೋಟದ ಮಧ್ಯದಲ್ಲಿರುವ ರಸ್ತೆಯಲ್ಲಿ ಹೋಗುವಾಗ ಈ ದೇಗುಲವು ಕಾಣಸಿಗುವುದು. ದೇಗುಲ ಸಮೀಪಿಸುತ್ತಿದ್ದಂತೆ ಮುಖ್ಯ ದ್ವಾರದ ಎದುರಿನಲ್ಲಿರುವ ಬಿಲ್ವಪತ್ರೆ ಮರ ಎದುರಾಗುವುದು. ಒಳಾಂಗಣ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿರುವ ಶ್ರೀರಾಮೇಶ್ವರ ದೇವರ ದರ್ಶನವಾಗುವುದು. ಗರ್ಭಗುಡಿಯ ಇಕ್ಕೆಲಗಳಲ್ಲಿ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಆಂಜನೇಯ ಹಾಗೂ ಸೀತಾರಾಮನ ಗುಡಿಗಳಿರುವುದು. ಸೀತಾರಾಮನ ಗುಡಿಯಲ್ಲಿರುವ ಶ್ರೀರಾಮನ ವಿಗ್ರಹವನ್ನು ಶಿವರಾತ್ರಿಯಂದು ಗರ್ಭಗುಡಿಯಲ್ಲಿರುವ ಶಿವಲಿಂಗದ ಮುಂದಿಟ್ಟು ಪೂಜಿಸಿ ನಿತ್ಯ ಬಲಿಪೂಜೆ ಮಾಡಲಾಗುವುದು. ಹಬ್ಬ ಮುಗಿದ ನಂತರ ಮರಳಿ ಆ ಗುಡಿಯಲ್ಲಿ ಇಡಲಾಗುವುದು. ದೇಗುಲದ ಪಶ್ಚಿಮ ದಿಕ್ಕಿನಲ್ಲಿರುವ ಇರ್ಪು ಜಲಪಾತಕ್ಕೆ ಹೋಗುವ ದಾರಿಯಲ್ಲಿ ನಾಗದೇವರ ಸ್ಥಾನ ಹಾಗೂ ಅಶ್ವತ್ಥಕಟ್ಟೆ ಇರುವುದು.
ತ್ರೇತಾ ಯುಗದಲ್ಲಿ ಶ್ರೀರಾಮನು ಸೀತಾಪಹರಣ ಮಾಡಿದ್ದ ರಾವಣನ ಸಂಹಾರಗೈದು ಅವನ ಸಹೋದರನಾದ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿದ ನಂತರ ಅಯೋಧ್ಯೆಗೆ ಪರಿವಾರ ಸಮೇತನಾಗಿ ಸೀತೆಯೊಂದಿಗೆ ಪುಷ್ಪಕ ವಿಮಾನದಲ್ಲಿ ಹಿಂದಿರುಗುವಾಗ ಇರುಳಿನ ಸಮಯವಾಗುತ್ತಿರಲು, ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ಇರ್ಪು ಎಂಬ ಪ್ರದೇಶದಲ್ಲಿ ರಾತ್ರಿ ತಂಗಲು ತೀರ್ಮಾನಿಸಿದರು. ಅದು ಶಿವರಾತ್ರಿಯ ಹಿಂದಿನ ದಿನವಾಗಿತ್ತು. ರಾವಣನು ಓರ್ವ ಮಹಾನ್ ಶಿವಭಕ್ತನಾಗಿದ್ದರಿಂದ ಅವನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀ ರಾಮನು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಲು ನಿರ್ಧರಿಸಿದ್ದನು.
ಶಿವಪೂಜೆ ಮಾಡಲು ಲಿಂಗ ತರಲೆಂದು ಶ್ರೀ ರಾಮನು ಆಂಜನೇಯನನ್ನು ಕಾಶಿಗೆ ಕಳುಹಿಸಿದನು. ದೇವರ ಪೂಜೆಯ ತರುವಾಯ ಜಲಾಹಾರ ಸೇವಿಸುವುದು ಶ್ರೀರಾಮನ ನಿಯಮ. ರಾಮನು ಆಹಾರ ಸೇವಿಸದಿರಲು ಇನ್ನುಳಿದವರು ಆಹಾರ ಸೇವಿಸರು. ಎಲ್ಲರೂ ಆಂಜನೇಯನ ಬರುವಿಕೆಗಾಗಿ ಕಾದು ಕುಳಿತಿದ್ದರು. ಕಾಶಿಯಲ್ಲಿರುವ ಹೊಳೆಗೆ ತಲುಪಿದ ಬ್ರಹ್ಮಚಾರಿ ಹನುಮಂತನಿಗೆ ದೇವಕನ್ಯೆಯರು ಹೊಳೆಯ ನೀರಲ್ಲಿ ಜಲಕ್ರೀಡೆ ಆಡುತ್ತಿರುವುದು ಕಾಣಿಸಿತು. ಅವರ ಜಳಕ ಮುಗಿಯುವವರೆಗೆ ಮರೆಯಲ್ಲಿ ನಿಂತು ನಿರ್ಗಮಿಸಿದ ನಂತರ ನದಿಯಲ್ಲಿರುವ ಲಿಂಗ ಹುಡುಕಿ ತರುವುದರಲ್ಲಿ ತಡವಾಗಿತ್ತು.
ಪೂಜಾ ಸಮಯವು ಮೀರುತ್ತಿರಲು ಲಿಂಗಕ್ಕಾಗಿ ಪರಿತಪಿಸುತ್ತಾ ಶ್ರೀ ರಾಮನು ಅತ್ತಿತ್ತ ನೋಡಲು, ಅನತಿ ದೂರದಲ್ಲಿ ಸೀತಾದೇವಿಯು ಮಣ್ಣು ಹಾಗೂ ಮರಳನ್ನು ಸೇರಿಸುತ್ತಾ ಕುಳಿತಿರುವುದು ಗೋಚರಿಸಿ ಸಮೀಪಿಸಿ ನೋಡಲು ಅಲ್ಲಿ ಲಿಂಗ ಉದ್ಭವಿಸಿರುವುದನ್ನು ಗಮನಿಸಿದನು. ಶ್ರೀ ರಾಮನು ಆ ಉದ್ಭವ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಗಿರುವ ತೀರ್ಥಕ್ಕಾಗಿ ಲಕ್ಷö್ಮ್ಮಣನೆಡೆಗೆ ನೋಡಲು, ಶ್ರೀ ರಾಮನ ಇಂಗಿತವನ್ನರಿತ ಲಕ್ಷö್ಮಣನು ತನ್ನ ಬಿಲ್ಲಿನಿಂದ ಬಾಣ ಬಿಡಲು ಬೆಟ್ಟದ ಕಲ್ಲಿನ ಸೆರೆಗೆ ಚುಚ್ಚಿ ನೀರಿನ ಸೆಲೆಯೊಂದು ಜಿಲ್ಲೆಂದು ಚಿಮ್ಮಿ ಜಲಧಾರೆಯಾಗಿ ಉಕ್ಕಿ ಲಕ್ಷ್ಮಣ ತೀರ್ಥ ಹೊಳೆಗೆ ಸೇರಿ ಹರಿಯಿತು. ಬೆಟ್ಟದಿಂದ ಚಿಮ್ಮಿದ ಜಲಧಾರೆಯು ಮುಂದೆ ಇರ್ಪು ಜಲಪಾತವೆಂದು ಪ್ರಸಿದ್ಧವಾಯಿತು. ಈ ತೀರ್ಥದಿಂದ ಶ್ರೀರಾಮನು ಲಿಂಗವನ್ನು ಪೂಜಿಸಿದನು. ಆಂಜನೇಯನು ಲಿಂಗ ತರುವಷ್ಟರಲ್ಲಿ ಪೂಜೆ ಮುಗಿದಿತ್ತು.
ಹನುಮಂತ ಬೆಟ್ಟ
ತಾನು ಬರುವ ಮೊದಲೇ ಪೂಜೆ ಮಾಡಿರುವುದು ಹನುಮಂತನಿಗೆ ನೋವು ತಂದು ಸಿಟ್ಟು ಬರುವಂತೆ ಮಾಡಿತ್ತು. ಪ್ರತಿಷ್ಠಾಪಿಸಿ ಪೂಜಿಸಿದ ಲಿಂಗವನ್ನು ನಾಶ ಮಾಡುವ ಸಲುವಾಗಿ ಹನುಮಂತನು ನಿಂತಲ್ಲಿAದಲೇ ಬಾಲ ಬೆಳೆಸಿ ಅಲ್ಲೆ ಸ್ವಲ್ಪ ದೂರದಲ್ಲಿದ್ದ ಬೆಟ್ಟಕ್ಕೆ ಸುತ್ತಿ ಅದನ್ನು ಎತ್ತಿ ಲಿಂಗದ ಮೇಲೆ ಇಡಲು ಪ್ರಯತ್ನಿಸಿದನು. ಆ ಬೆಟ್ಟವನ್ನು ಮುಂದೆ ಹನುಮಂತ ಬೆಟ್ಟ ಎಂದು ಕರೆಯಲಾಯಿತು. ಅಷ್ಟರಲ್ಲಿ ರಾಮನು ಹನುಮಂತನನ್ನು ಸಮಾಧಾನಿಸಿ ಅವನ ಕೈಯಲ್ಲಿದ್ದ ಲಿಂಗವನ್ನು ಬೇರೆ ಸ್ಥಾನದಲ್ಲಿಟ್ಟು ಪೂಜಿಸುವುದಾಗಿ ಹೇಳಿ ಪೂರ್ವ ದಿಕ್ಕಿನಲ್ಲಿ ಮೂರು ಹೆಜ್ಜೆ ಇಟ್ಟು ಲಿಂಗ ಪ್ರತಿಷ್ಠಾಪನೆಗೆ ಸ್ಥಳ ಆರಿಸಲು ಹೇಳಿದನು. ಅಂತೆಯೆ ಆಂಜನೇಯನು ಮೂರನೆ ಹೆಜ್ಜೆ ಇರಿಸಿದ ಸ್ಥಳವಾದ ಹೇರ್ಮಾಡುವಿನಲ್ಲಿ ಇಟ್ಟು ಮಾರನೆಯ ದಿನ ಮುಂಜಾನೆ ಅಂದರೆ ಶಿವರಾತ್ರಿಯಂದು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಶಿವರಾತ್ರಿಯ ಸಮಯದಲ್ಲಿ ಹೇರ್ಮಾಡಿನಲ್ಲಿ ಹನುಮಂತನು ತಂದ ಲಿಂಗಕ್ಕೆ ಮೊದಲ ಪೂಜೆಯಾದ ನಂತರ ಇರ್ಪುವಿನಲ್ಲಿರುವ ಉದ್ಭವಲಿಂಗಕ್ಕೆ ಪೂಜಿಸಲಾಗುವುದು. ಹಿಂದು ಮುಂದಾಗಿ ಒಂದೆ ಬಾರಿಗೆ ಎರಡು ಲಿಂಗಕ್ಕೆ ಪೂಜೆ ಮಾಡುವ ಕಾರಣ ಈ ಸ್ಥಳಕ್ಕೆ ಇರ್ಪು (ಇರುಪೂಜೆ ಎರಡು ಪೂಜೆ) ಎಂಬ ಹೆಸರು ಬಂತು. ಲಿಂಗ ಹೇರಿಕೊಂಡು ಇಟ್ಟ (ಇಡಿಗಿದ) ಸ್ಥಳಕ್ಕೆ ಹೇರ್ಮಾಡು ಎಂದು ಹೆಸರಿಸಲಾಯಿತೆನ್ನುವರು. ಶಿವರಾತ್ರಿಯ ಹಿಂದಿನ ದಿನದಂದು ಇಲ್ಲಿ ತೀರ್ಥೋದ್ಭವವಾದ ಕಾರಣ ಆ ಸಮಯದಲ್ಲಿ ಎರಡು ದಿನ ಇಲ್ಲಿ ತೀರ್ಥ ಸ್ನಾನ ಮಾಡುವರು. ಶಿವರಾತ್ರಿಗೆ ಇಲ್ಲಿ ದೇವರ ಉತ್ಸವವು ಏಳು ದಿನಗಳ ಕಾಲ ನಡೆಯುವುದು. ಉತ್ಸವದ ಸಮಯದಲ್ಲಿ ಉಚಿತ ಅನ್ನಪ್ರಸಾದದ ವ್ಯವಸ್ಥೆಯು ಇರುವುದು. ಶಿವರಾತ್ರಿಯಂದು ದೇವಾಲಯದ ಮುಂದಿರುವ ವಿಶಾಲವಾದ ಗದ್ದೆ ಬಯಲಿನಲ್ಲಿ ಅಂಗಡಿ ಮುಂಗಟ್ಟುಗಳಿAದ ಕೂಡಿದ ದೊಡ್ಡ ಜಾತ್ರೆಯು ನಡೆಯುವುದು. ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದ ಪಡೆದು ಹಿಂದಿರುಗುವರು. ಉತ್ಸವದ ಕೊನೆಯ ದಿನದಂದು ದೇವರು ಅವಭೃಥ ಸ್ನಾನಕ್ಕಾಗಿ ಸಮೀಪದಲ್ಲಿರುವ ಈ ಲಕ್ಷ್ಮಣ ತೀರ್ಥ ಹೊಳೆಗೆ ಹೋಗುವರು.
ಕುರ್ಚಿ ಗ್ರಾಮದಲ್ಲಿ ಇರ್ಪು ಇದೆ. ಸುಮಾರು ೨೫೦ ವರ್ಷಗಳ ಹಿಂದೆ ಕುರ್ಚನ್ ನಂಬಿಯಾರ್ ಎಂಬ ಹೆಸರಿನ ಪಾಳೆಗಾರನಿಗೆ ಸೇರಿದ ಜಾಗವಾಗಿದ್ದ ಕಾರಣ ಅವನ ಹೆಸರಲ್ಲಿ ಗುರುತಿಸಿ ನಂತರ ಅದು ಕುರ್ಚಿ ಎಂದಾಯಿತು. ದೇವರ ಭಂಡಾರವನ್ನು ೧೫೦ ವರ್ಷಗಳ ಹಿಂದೆ ಚೋಕಿರ ಕುಟುಂಬದ ಐನ್ಮನೆಯಲ್ಲಿ ಇಡಲಾಗುತ್ತಿತ್ತು. ನಂತರದಲ್ಲಿ ಆ ಮನೆಯು ಜೀರ್ಣಾವಸ್ಥೆಗೆ ಬಂದಿದ್ದರಿAದ ಅಜ್ಜಮಾಡ ಕುಟುಂಬದವರ ಐನ್ಮನೆಗೆ ಸ್ಥಳಾಂತರಿಸಲಾಯಿತು. ಈ ಎರಡು ಕುಟುಂಬಗಳನ್ನು ದೇವಸ್ಥಾನದ ರಕ್ಷಕ ಕುಟುಂಬವೆAದು ಗುರುತಿಸಲಾಗುವುದು. ದೇವಾಲಯದಲ್ಲಿ ಪ್ರತಿವರ್ಷವು ಅಧಿಕ ಸಂಖ್ಯೆಯಲ್ಲಿ ಮದುವೆ ಹಾಗು ನಾಮಕರಣಗಳು, ಕವಿಗೋಷ್ಟಿ ನಡೆಯುವುದು. ದೇಗುಲದ ಅಭಿವೃದ್ಧಿ ಕಾರ್ಯವು ಬರದಿಂದ ಸಾಗುತ್ತಿರುವುದು.
೨೫೦ ವರ್ಷಕ್ಕೆ ಮೊದಲು ಎರಡನೆ ಲಿಂಗರಾಜರ ಸಮಯದಲ್ಲಿ ಇಂತಿಷ್ಟು ಜಾಗ ಎಂದು ಅಳೆದು ಶಿಸ್ತು ಮಾಡಲಾದಂತೆ ಈ ದೇವಸ್ಥಾನಕ್ಕೆ ೧೫೭.೫ ಎಕರೆಯಷ್ಟು ಜಾಗವಿದೆ. ೧೮೦ ವರ್ಷಗಳ ಹಿಂದೆ ಬ್ರಹ್ಮಕಲಶ ಮಾಡಿರುವ ಮಾಹಿತಿ ಇದೆ. ಇತ್ತೀಚೆಗೆ ನಮಸ್ಕಾರ ಮಂಟಪ ಮತ್ತು ಗರ್ಭಗುಡಿ ಪುನರ್ ನಿರ್ಮಿಸಿ ಹೊರ ಪೌಳಿ ಮಾತ್ರ ಇದ್ದ ದೇಗುಲಕ್ಕೆ ಒಳಪೌಳಿಯನ್ನು ಕಟ್ಟಿ ಜೀರ್ಣೋದ್ಧಾರ ಮಾಡಿ ೨೦೨೦ನೇ ಇಸವಿಯ ಫೆಬ್ರವರಿ ೨೦ಕ್ಕೆ ಬ್ರಹ್ಮ ಕಲಶ ಮಾಡಲಾಯಿತು. ಮುಂದೆ ರಾಜಗೋಪುರ ಕಟ್ಟುವ ಉದ್ದೇಶವಿರುವುದು. ೧೯ ಅಡಿ ಎತ್ತರವಿರುವ ಇಲ್ಲಿಯ ಗರ್ಭಗುಡಿಗೆ ನಿಯಮಕ್ಕನುಸಾರವಾಗಿ ೫೭ ಅಡಿ ಎತ್ತರದ ರಾಜಗೋಪುರ ಅಂದರೆ ಗರ್ಭಗುಡಿಗಿಂತ ಮೂರು ಪಟ್ಟು ಎತ್ತರದಲ್ಲಿ ಕಟ್ಟಬೇಕಾಗುವುದು.
ದೇವಸ್ಥಾನ ನಿರ್ಮಾಣದಲ್ಲಿ ಒಟ್ಟು ಐದು ವಿಧಗಳಿವೆ ಎನ್ನುವರು. ಮೊದಲನೆಯದಾಗಿ ತೆರೆದ ದೇಗುಲ. ಅಂದರೆ ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಲ್ಲಿನಿಂದ ನಿರ್ಮಿತ ಮೇಲ್ಛಾವಣಿ ಇಲ್ಲದ ದೇವನೆಲೆ. ಎರಡನೆಯದು ಹಂಚು ಅಥವಾ ಕಲ್ಲಿನ ಮೇಲ್ಛಾವಣಿ ಇರುವುದು. ಮೂರನೆಯದು ತಾಮ್ರದ ಮೇಲ್ಛಾವಣಿ, ನಾಲ್ಕನೆಯದು ಬೆಳ್ಳಿಯ ಮತ್ತು ಐದನೆಯದು ಚಿನ್ನದ ಮೇಲ್ಛಾವಣಿ. ೧೯೨೪ ರ ಇಸವಿಯಲ್ಲಿ ಈ ದೇಗುಲವನ್ನು ಮುಜರಾಯಿಗೆ ಸೇರ್ಪಡಿಸಲಾಯಿತು.
ದೂರದ ಬೆಟ್ಟದೊಳಗಿರುವ ಕಾನನದೊಳಗಿಂದ ನದಿಯಾಗಿ ಹರಿದು ಬರುವ ಇರ್ಪು ಜಲಪಾತದ ನೋಟವು ದೂರಕ್ಕೆ ಬಿಳಿ ದಾರದಂತೆ ಕಂಗೊಳಿಸುವುದು. ಬೆಟ್ಟದಲ್ಲಿರುವ ಈ ಜಲಧಾರೆಯ ಸ್ಥಳದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪೊನ್ನುಮಾಳದಿಟ್ಟೆ ಎಂಬ ಪ್ರದೇಶದಿಂದ ಹಲವಾರು ನದಿಗಳು ಜನ್ಮ ಕಳೆದು ಹರಿಯುತ್ತವೆ. ಉತ್ತರ ದಿಕ್ಕಿನಲ್ಲಿ ಲಕ್ಷ್ಮಣತೀರ್ಥ, ದಕ್ಷಿಣ ದಿಕ್ಕಿನಲ್ಲಿ ರಾಮತೀರ್ಥ ಮತ್ತು ಪಶ್ಚಿಮ ದಿಕ್ಕಿನ ತುಂಬಾ ಎತ್ತರ ಪ್ರದೇಶದಲ್ಲಿ ಕಕ್ಕಟ್ಟ್ ಹೊಳೆ ಹುಟ್ಟುತ್ತದೆ. ಅಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿ ಕಬಿನಿ ಹೊಳೆ ಹುಟ್ಟಿ ಹರಿಯುತ್ತದೆ.
ಲಕ್ಷ್ಮಣತೀರ್ಥ ರಾಮತೀರ್ಥ ನದಿಗಳು ಬೇರೆ ಬೇರೆಯಾಗಿ ಹರಿದು ಮುಂದೆ ಒಂದಾಗಿ ಲಕ್ಷ್ಮಣತೀರ್ಥವಾಗಿ ಮುಂದುವರೆಯುತ್ತದೆ.
ದೇವರ ಕೃಪೆಯಿಂದಾಗಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವೆಲ್ಲವು ಹಚ್ಚ ಹಸಿರು ಸಂಪತ್ತಿನಿAದ ತುಂಬಿರುವುದು.
ವಿವರಣೆ ನೀಡಿದ ದೇಗುಲದ ಅಧ್ಯಕ್ಷ ಮದ್ರಿರ ವಿಷ್ಣು ಅವರಿಗೆ ಧನ್ಯವಾದಗಳು.
- ಉಳುವಂಗಡ ಕಾವೇರಿ ಉದಯ,
ಟಿ. ಶೆಟ್ಟಿಗೇರಿ. ಮೊ. ೯೫೯೧೩೬೬೨೯೬