ವೀರಾಜಪೇಟೆ, ಮೇ ೧೯: ವೀರಾಜಪೇಟೆ ಪುರಸಭೆಯ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪುರಸಭೆಯ ಕಾರು ಚಾಲಕ ನಿಕ್ಸನ್ (೫೧) ಎಂಬವರು ಚನ್ನಪಟ್ಟಣದ ಬಳಿ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ವೀರಾಜಪೇಟೆ ಪುರಸಭೆ ಕೆಲಸದ ನಿಮಿತ್ತ ಪುರಸಭೆ ಸಿಬ್ಬಂದಿಗಳ ಜೊತೆಯಲ್ಲಿ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಿದ್ದು, ಕೆಲಸ ಮುಗಿಸಿ ಸಂಜೆ ವೇಳೆ ವೀರಾಜಪೇಟೆಗೆ ಮರಳುವ ಸಂದರ್ಭ ಚನ್ನಪಟ್ಟಣದ ಬಳಿ ರಸ್ತೆಯ ಒಂದು ಭಾಗದಲ್ಲಿ ವಾಹನ ನಿಲ್ಲಿಸಿ ರಾತ್ರಿ ೯.೩೦ ಗಂಟೆ ಸಮಯದಲ್ಲಿ ಹೊಟೇಲ್ನಲ್ಲಿ ಊಟಕ್ಕೆ ತೆರಳುತ್ತಿದ್ದಾಗ ಆಂಧ್ರಪ್ರದೇಶ ಮೂಲದ (ಕೆಎ-೪೨ ಪಿ-೦೫೦೦) ಸಂಖ್ಯೆಯ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಿಕ್ಸನ್ ಅವರಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚನ್ನಪಟ್ಟಣದ ಪೊಲೀಸರು ವೀರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿಗಳ ಫಲಕ ಹೊಂದಿದ ಕಾರು ಹಾಗೂ ನಿಕ್ಸನ್ ಅವರ ವಿವಿಧ ದಾಖಲಾತಿಗಳನ್ನು ಪರಿಶೀಲಿಸಲು ವೀರಾಜಪೇಟೆ ಮೂಲದವರೆಂದು ಖಚಿತಪಡಿಸಿ ವೀರಾಜಪೇಟೆಗೆ ಮಾಹಿತಿ ನೀಡಿದ್ದಾರೆ. ಮೃತ ನಿಕ್ಸನ್ ಹಲವಾರು ವರ್ಷಗಳಿಂದ ಪುರಸಭೆ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಒರ್ವ ಪುತ್ರ, ಪುತ್ರಿ ಇದ್ದಾರೆ. ಚನ್ನಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ನಿಕ್ಸನ್ ಅವರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇವರ ಅಂತ್ಯಕ್ರಿಯೆ ತಾ.೨೦ರಂದು (ಇಂದು) ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸ್ಮಶಾನದಲ್ಲಿ ನಡೆಯಲಿದೆ.