ನಮ್ಮ ಪರಿಸರದ ವಾತಾವರಣದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಲೇ ಇದೆ. ಮನುಷ್ಯನ ಜೀವನಶೈಲಿಯು ಈಗಿನ ಆಧುನಿಕತೆಗೆ ತಕ್ಕಂತೆ ಬದಲಾಗುತ್ತಿದೆ, ವಿಷ ಗಾಳಿ ಉಸಿರಾಟ, ನಾಲಿಗೆಗೆ ರುಚಿ ಕೊಡುವ ಹೊಟ್ಟೆಗೆ ಬೇಡವಾಗುವ ಖಾದ್ಯಗಳ ಸೇವನೆ, ಇದರಿಂದಾಗಿ ಮನುಷ್ಯನ ಆರೋಗ್ಯ ದಿನನಿತ್ಯ ಕೆಡುತ್ತಲೇ ಇದೆ. ಇದರಿಂದಾಗಿ ನಮ್ಮ ಜೀವನದ ಉದ್ದಕ್ಕೂ ಪ್ರಾಣ ಹಿಂಡುವ ಕಾಯಿಲೆಗಳು ನಮ್ಮ ಜೀವನಕ್ಕೆ ಮಾರಕವಾಗುತ್ತಿದೆ. ಅದರಲ್ಲಿ ಅಸ್ತಮಾ ಕಾಯಿಲೆ ಮನುಷ್ಯನಿಗೆ ಬರುವ ದೀರ್ಘಕಾಲಿಕ ರೋಗ. ವಾಯು ಮಾಲಿನ್ಯ, ಧೂಮಪಾನ, ಮಕ್ಕಳಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವುದು, ಹವಾಮಾನ ವೈಪರೀತ್ಯದಿಂದ ಹರಡುವ ಜ್ವರ ಮತ್ತಿತರ ಕಾರಣಗಳಿಂದ ಅಸ್ತಮಾ ಬರುತ್ತದೆ. ಜೊತೆಗೆ ವಿಪರೀತ ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಅಥವಾ ದೌರ್ಬಲ್ಯ, ವ್ಯಾಯಾಮ-ಪ್ರೇರಿತ ಅಸ್ತಮಾ, ಕಿರಿಕಿರಿ, ಮುಂಗೋಪ, ಅಲರ್ಜಿ, ಸೀನುವಿಕೆ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು ಇತ್ಯಾದಿ ಪರಿಣಾಮಗಳು ಸಹ ಅಸ್ತಮಾ ಇರುವವರನ್ನು ಬಾಧಿಸುತ್ತದೆ.

ಹಲವು ವಿಧದಲ್ಲಿ ಅಸ್ತಮಾ ಕಾಯಿಲೆಗಳಿದ್ದು ಹೃದಯ ಸಂಬAಧ, ಶ್ವಾಸಕೋಶದ ಸಂಬAಧ ಸೇರಿದಂತೆ ಅಲರ್ಜೆಟಿಕ್ ಅಸ್ತಮಾ ಮತ್ತು ಕಾರ್ಡಿಯಾಕ್ ಅಸ್ತಮಾ ಎಂದೂ ಕರೆಯುತ್ತಾರೆ. ಉಸಿರಾಟದ ಗಾಳಿಯಲ್ಲಿ ಮನುಷ್ಯನ ದೇಹ ಸೇರುವ ಅತ್ಯಂತ ಸಣ್ಣ ಕಣಗಳು ಶ್ವಾಸನಾಳದ ಒಳ ಪದರಗಳನ್ನು ಊದಿಕೊಳ್ಳುವಂತೆ ಮಾಡಿ ಮೂಗಿನಲ್ಲಿ ನೆಗಡಿ, ಸೋರಿಕೆ ಆಗುವಂತೆ ಮಾಡುತ್ತವೆ. ಇದರಿಂದ ಉಸಿರಾಡಲು ತೊಂದರೆಯಾಗಿ ಕೆಮ್ಮು, ದಮ್ಮು ಸಾಮಾನ್ಯವಾಗಿ ಗೋಚರಿಸುತ್ತದೆ. ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗಿದ ನಂತರ ಈ ತೊಂದರೆಗಳ ಕಾಡುವಿಕೆ ಹೆಚ್ಚು. ಇದಲ್ಲದೆ ಕುಟುಂಬ ಸದಸ್ಯರಿಗೆ ಅಸ್ತಮಾ ಕಾಯಿಲೆ ಇದ್ದರೆ ಅದು ಮುಂದಿನ ತಲೆಮಾರಿಗೂ ಬರುವ ಸಾಧ್ಯತೆ ಇದೆ. ಗರ್ಭಿಣಿಯರು ತಂಬಾಕು ಹೊಗೆಯನ್ನು ಸೇವಿಸಿದರೆ ಹುಟ್ಟುವ ಮಗುವಿಗೆ ಅಸ್ತಮಾ ಬರುವ ಸಾಧ್ಯತೆ ಅಧಿಕ.

ಅಸ್ತಮಾ ಕಾಯಿಲೆ ಹಠಾತ್ತನೆ ಶುರುವಾಗಬಹುದು ಅಥವಾ ನಿಧಾನಕ್ಕೆ ಮನುಷ್ಯನನ್ನು ಬಾಧಿಸಬಹುದು. ನಿರಂತರ ಕಾಡುವ ಉಬ್ಬಸ, ಎದೆ ಬಿಗಿತ, ಉಸಿರಾಟದಲ್ಲಿ ಶಬ್ದ, ಮುಂತಾದವುಗಳನ್ನು ಅಸ್ತಮಾ ಎಂದು ಪರಿಗಣಿಸಬಹುದು. ಆದರೆ ಒಂದೆರಡು ದಿನ ಬಂದು ಹೋಗುವ ಕೆಮ್ಮಿನಿಂದ ಅಸ್ತಮಾ ಕಾಯಿಲೆ ಇದೆ ಎಂದರೆ ತಪ್ಪಾಗುತ್ತದೆ! ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯೊಂದಿಗೆ ಅಸ್ತಮಾ ಕಾಯಿಲೆ ಹೌದೋ, ಅಲ್ಲವೋ ಎಂಬುದನ್ನು ನಿರ್ಧರಿಸಬೇಕು.

ಅಸ್ತಮಾ ರೋಗಿಗಳು ಹುಳಿ, ಎಣ್ಣೆ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಧೂಮಪಾನ ಮಾಡದಿರುವುದೇ ಒಳಿತು. ಆದಷ್ಟು ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡದೆ ಸ್ವಚ್ಛ ಗಾಳಿಯ ಉಸಿರಾಟಕ್ಕೆ ಆದ್ಯತೆ ನೀಡಬೇಕು! ಅನಿವಾರ್ಯವಾಗಿ ಅಂತಹ ಪ್ರದೇಶಗಳಲ್ಲಿ ಇರಬೇಕಾಗಿ ಬಂದರೆ ಮೂಗಿಗೆ ಮಾಸ್ಕ್ ಧರಿಸಿಕೊಳ್ಳಬೇಕು. ಶುದ್ಧ ಆಹಾರ ಸೇವನೆಗೆ ಮಹತ್ವ ನೀಡಬೇಕು. ಅಸ್ತಮಾ ಅಲರ್ಜಿಯಿಂದ ಬರುವ ಕಾಯಿಲೆ. ಈ ಕಾಯಿಲೆಗೆ ನಗರ ಅಥವಾ ಗ್ರಾಮಾಂತರ ಎಂಬ ಭೇದವಿಲ್ಲವಾದರೂ ಹೆಚ್ಚಿನ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲೇ ಕಂಡುಬರುತ್ತದೆ. ನಗರ ಪ್ರದೇಶಗಳಲ್ಲಿ ಧೂಳು ಹಾಗೂ ವಾಹನಗಳ ಹೊಗೆ ಮಾಲಿನ್ಯ ಹೆಚ್ಚಿರುವುದರಿಂದ ಇಲ್ಲೇ ಅಸ್ತಮಾ ಬಾಧೆ ಹೆಚ್ಚಿರುತ್ತದೆ! ಮಕ್ಕಳಿಂದ ಹಿಡಿದು ಮುದುಕರವರೆಗೂ ಇದು ಕಾಣಿಸಿಕೊಳ್ಳುತ್ತದೆ.

ಆಸ್ತಮಾಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸಾ ವಿಧಾನವಿಲ್ಲ. ಆದರೆ ವೈದ್ಯರೊಂದಿಗೆ ನಿಕಟವಾಗಿ ಸಂಪರ್ಕವಿರಿಸಿ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪ್ರಚೋದಕಗಳನ್ನು ತಪ್ಪಿಸುವ ಮೂಲಕ ರೋಗವನ್ನು ನಿಯಂತ್ರಿಸುವುದು ಉತ್ತಮ ಚಿಕಿತ್ಸೆಯಾಗಿದೆ. ಮನೆಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳಿಂದಲೂ ಅಸ್ತಮಾವನ್ನು ನಿಯಂತ್ರಿಸುವುದು ಅಥವಾ ಕಡಿಮೆಯಾಗಿಸಲು ಸಾಧ್ಯವಿದೆ. ತುರಿದ ಮೂಲಂಗಿ, ಜೇನು, ನಿಂಬೆ ರಸವನ್ನು ಸೇರಿಸಿ ಕಾಯಿಸಿ ಪ್ರತಿದಿನ ಒಂದು ಚಮಚ ಸೇವಿಸುತ್ತಾ ಬರುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ನೀರಿನೊಂದಿಗೆ ಮೆಂತೆ ಕಾಳನ್ನು ಬೇಯಿಸಿ, ಜೇನು, ಶುಂಠಿ ರಸ ಹಾಕಿ ಬೆರೆಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗಬಹುದು. ಅಸ್ತಮಾ ವೃದ್ಧಿಯನ್ನು ತಡೆಗಟ್ಟಲು ಅದಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆಹಚ್ಚಬೇಕು ಹಾಗೂ ಅಸ್ತಮಾಕ್ಕೆ ಪ್ರಚೋದನೆ ನೀಡುವ ವಸ್ತುಗಳಿಂದ ದೂರ ಇರಬೇಕು. ಸರಿಯಾದ ಔಷಧಿಯನ್ನು ಸರಿಯಾದ ಪ್ರಮಾಣ ಮತ್ತು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬೇಕು. ಅಸ್ತಮಾ ತಡೆಗೆ ಭದ್ರ ತಳಹದಿ ಹಾಕುವ ನಿಟ್ಟಿನಲ್ಲಿ ನಿಯಮಿತವಾಗಿ ತಜ್ಞರನ್ನು ಭೇಟಿಯಾಗಿ ಅವರು ನೀಡುವ ವೈದ್ಯಕೀಯ ಸೂಚನೆಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡಬೇಕು. ಅಸ್ತಮಾ ಕಾಯಿಲೆ ಬಗ್ಗೆ ಜನರಿಗೆ ಅರಿವಿಕೆ ಮೂಡಿಸಲು ಮುಂದಿನ ಪೀಳಿಗೆಗೆ ಒಳ್ಳೆಯ ಆರೋಗ್ಯ ನೀಡಬೇಕಾದರೆ ನಮ್ಮ ಸುತ್ತಮುತ್ತಲೂ ಇರುವ ಪರಿಸರವನ್ನು ಕಾಲ ಕಾಲಕ್ಕೆ ಶುಚಿಯಾಗಿಟ್ಟುಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗಬಲ್ಲದು. ತಿಳಿದವರಾಡಿದಂತೆ... ನಮ್ಮ ಅರೋಗ್ಯ ನಮ್ಮ ಕೈಯ್ಯಲಿದೆ ಅಲ್ಲವೇ!!!

- ಈರಮಂಡ ಹರಿಣಿ ವಿಜಯ್, ಕೋಡಂಬೂರು, ಮೊ. ೯೭೪೦೯೭೦೮೪೦