ಪೊನ್ನಂಪೇಟೆ, ಮೇ ೧೯: ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟು ಸೇರಿದರೆ ಮಾತ್ರ ಉರೂಸ್ ನಡೆಯುತ್ತದೆ. ಇಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಗೂ ಉಭಯ ಕಡೆಯವರು ಸಮಾನರು. ಕೊಡಗಿನಲ್ಲಿ ಕೊಡವರು ಮತ್ತು ಮುಸ್ಲಿಮರು (ಹೆಚ್ಚಾಗಿ ಕೊಡವ ಮುಸ್ಲಿಮರು) ಒಗ್ಗೂಡಿ ಆಚರಿಸುವ ಏಕೈಕ ನೇರ್ಚೆ (ಉರೂಸ್ ಅಥವಾ ವಾರ್ಷಿಕ ಉತ್ಸವ) ಇದಾಗಿದೆ. ಸದಾ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಯುವ ಪ್ರಸಕ್ತ ದಿನಗಳಲ್ಲಿ ಈ ವೈಶಿಷ್ಟö್ಯ ಪೂರ್ಣವಾದ ಮತ್ತು ಕೋಮು ಸಾಮರಸ್ಯದ ಸಂದೇಶವನ್ನು ಒತ್ತಿ ಹೇಳುವ ಇತಿಹಾಸ ಪ್ರಸಿದ್ಧ ಕುತ್ತುನಾಡು ನೇರ್ಚೆ ತಾ. ೨೦ ರಂದು (ಇಂದು) ಜರುಗಲಿದೆ.

ಸಮಾಜದಲ್ಲಿ ಸಾಮರಸ್ಯವನ್ನು ಶಾಶ್ವತವಾಗಿ ನೆಲೆಗೊಳಿಸಲು ಪೂರ್ವಿಕರು ಪ್ರತೀ ವರ್ಷ ವಾರ್ಷಿಕ ಉತ್ಸವ, ಧಾರ್ಮಿಕ ಜಾತ್ರೆ ಮೊದಲಾದವುಗಳನ್ನು ಜಾರಿಗೆ ತಂದರು. ನಾಗರಿಕತೆ ಹೆಚ್ಚಾದಂತೆ ಜಾತ್ರೆ- ಉತ್ಸವಗಳಿಗೆ ಮತೀಯ ಸೋಂಕು ತಗುಲಿಕೊಂಡಿತು. ಆದ್ದರಿಂದ ಯಾವುದೇ ಜಾತ್ರೆ, ದೇವರ ವಾರ್ಷಿಕ ಉತ್ಸವಗಳು ಜಾತಿ ಮತ್ತು ಧರ್ಮದ ಹಿನ್ನೆಲೆಯಲ್ಲಿ ನಡೆಯುವುದು ಸಾಮಾನ್ಯವಾಗಿದೆ. ಆದರೆ ದಕ್ಷಿಣ ಕೊಡಗಿನ ‘ಕುತ್ತುನಾಡು ನೇರ್ಚೆ' (ಉರೂಸ್) ಮಾತ್ರ ಇದಕ್ಕೆಲ್ಲವೂ ಅಪವಾದವಾಗಿ ಆಚರಿಸಲ್ಪಡುತ್ತಿದೆ. ಯಾವುದೇ ಮತೀಯ ಬಣ್ಣಗಳಿಲ್ಲದೆ ಕೇವಲ ಪರಸ್ಪರ ಮನುಷ್ಯ ಸಹೋದರತೆಯ ಸಂಕೇತವಾಗಿ ನಡೆಯುತ್ತಾ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕುತ್ತುನಾಡು ವಾರ್ಷಿಕ ಉರೂಸ್‌ಗೆ ೩೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಸಂರಕ್ಷಿಸಲ್ಪಟ್ಟ ಕಾಡಿನೊಳಗೆ (ಹಿಂದೆ ಇದು ದಟ್ಟಾರಣ್ಯವಾಗಿತ್ತು) ಜರುಗುವ ಈ ಉರೂಸ್‌ನಲ್ಲಿ ಅಸಂಖ್ಯತ ಜನರು ಪಾಲ್ಗೊಂಡು ತಮಗೆ ತಿಳಿಯದಂತೆಯೇ ಇಲ್ಲಿ ಸಾಮರಸ್ಯ ಮೆರೆಯುತ್ತಾರೆ. ಉರೂಸ್ ಆಚರಣೆಯ ನೆಪದಲ್ಲಿ ಇಲ್ಲಿ ಸಮಾಗಮಗೊಳ್ಳುವ ಜನರ ಮನಸ್ಸುಗಳು ಪರಸ್ಪರ ಮನುಷ್ಯ ಸ್ನೇಹದ ಸಂಕೋಲೆಗಳಿAದ ಬಂದಿಯಾಗುತ್ತದೆ.

ಉರೂಸ್ ಆಚರಣೆಯ ಕಟ್ಟುಪಾಡು ಹೀಗೆ ಆರಂಭಗೊಳ್ಳುತ್ತದೆ: ಕೊಡಗಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಎಮ್ಮೆಮಾಡಿನಲ್ಲಿ ಸಮಾಧಿಯಾಗಿರುವ ಸೂಫಿ ಶಹೀದ್ ವಲಿಯುಲ್ಲಾರವರ ಹೆಸರಿನಲ್ಲಿ ವರ್ಷಂಪ್ರತಿ ಆಯೋಜಿಸಲಾಗುವ ಕುತ್ತುನಾಡು ಉರೂಸ್ ಏಪ್ರಿಲ್ ಅಥವಾ ಮೇ ತಿಂಗಳಿನ ಒಂದು ಸೋಮವಾರದಂದು ನಡೆಯುತ್ತದೆ. ಪ್ರಸಿದ್ಧ ಎಮ್ಮೆಮಾಡು ಉರೂಸ್‌ನ ಪ್ರಮುಖ ದಿನವಾದ ಸೋಮವಾರದಂದು (ಇಂದು) ಬೇಗೂರು ಕಲ್ಲಾಯಿ ಮಸೀದಿಯ ಆಡಳಿತ ಮಂಡಳಿ, ಬೇಗೂರು- ಮಾಪಿಳೆತೋಡಿನ ತಕ್ಕರು (ಊರಿನ ಹಿರಿಯ ಮುಖ್ಯಸ್ಥರು) ಕುತ್ತುನಾಡಿಗೆ ತೆರಳಿ ಅಲ್ಲಿ ಕರ್ತುರ ಕುಟುಂಬದ ತಕ್ಕರು ಮತ್ತು ಗ್ರಾಮಸ್ಥರೊಂದಿಗೆ ಸೇರಿ ಕುತ್ತುನಾಡು ಉರೂಸ್‌ನ ದಿನವನ್ನು ನಿಶ್ಚಯಿಸುತ್ತಾರೆ. ನಿಶ್ಚಯಿಸಿದ ದಿನದಿಂದ ಸಂಪ್ರದಾಯದAತೆ ಉರೂಸ್‌ಗೆ ‘ಕಟ್ಟು’ ಬೀಳುತ್ತದೆ. ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮಕ್ಕೆ ಒಳಪಟ್ಟಿರುವ ‘ನಾಡುಗುಂಡಿ’ ಹೊಳೆದಡದ ಕಾಡಿನಲ್ಲಿ ಸೂಫಿ ಶಹೀದ್ ಅವರ ಸ್ಮಾರಕ ಬಿಡಾರವಿದೆ. ಉರೂಸ್‌ನ ದಿನದಂದು ಬಿಡಾರದ ಬಳಿ ಬೆಳಿಗ್ಗೆ ೮ಗಂಟೆಗೆ ಆಲೀರ ಮತ್ತು ಕರ್ತುರ ಕುಟುಂಬದ ತಕ್ಕರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕುತ್ತುನಾಡು ಉರೂಸ್‌ಗೆ ಚಾಲನೆ ನೀಡುತ್ತಾರೆ. ಬಳಿಕ ಸಾಮೂಹಿಕ ಪ್ರಾರ್ಥನೆ ಜರುಗಿ ಧಾರ್ಮಿಕ ವಿಧಾನಗಳು ಆರಂಭಗೊಳ್ಳುತ್ತವೆ.

ಹಾಲನ್ನ ಪ್ರಸಾದ: ಉರೂಸ್‌ನಲ್ಲಿ ಹಾಲನ್ನ (ಹಾಲು ಅನ್ನ)ದ ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಧ್ವಜಾರೋಹಣದ ನಂತರ ಉಭಯ ಸಮುದಾಯದವರು ಜೊತೆಗೂಡಿ ಬಿಡಾರದ ಆವರಣದಲ್ಲಿ ೩ ಕಲ್ಲುಗಳನ್ನು ಜೋಡಿಸಿ ಬೆಂಕಿ ಹಚ್ಚಿ ಪಾತ್ರೆಗೆ ಶುದ್ದವಾದ ಹಾಲನ್ನು ಹಾಕಿ ಕುದಿಸುತ್ತಾರೆ. ಭಕ್ತರು ಹರಕೆ ರೂಪದಲ್ಲಿ ತರುವ ಹಾಲನ್ನೆಲ್ಲ ಇಲ್ಲಿ ಪ್ರಸಾದಕ್ಕೆ ಬಳಸಲಾಗುತ್ತದೆ. ಕುದಿಯುವ ಹಾಲಿಗೆ ಅಕ್ಕಿಯನ್ನು ಹಾಕಿ ಕೇವಲ ಹಾಲು ಮತ್ತು ಅಕ್ಕಿಯಿಂದ ಪ್ರಸಾದವನ್ನು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿಯಾಗಿ ವಿತರಿಸುತ್ತಾರೆ.

ಭಂಡಾರ ಜಮಾಯಿಸುವುದು: ಉರೂಸ್ ದಿನದಂದು ಬೆಳಿಗ್ಗೆ ಆದ್ಯವಾಗಿ ಬಿಡಾರದ ಮುಂಭಾಗದಲ್ಲಿರುವ ಹೊಳೆಯಲ್ಲಿ (ನೇರ್ಚೆ ಗುಂಡಿ) ಬಾಳೆ ಗೊನೆಯೊಂದನ್ನು ಮುಳುಗಿಸಿ ಬಿಡಾರದ ದ್ವಾರದ ಮೇಲ್ಬಾಗದಲ್ಲಿ ಕಟ್ಟಲಾಗುತ್ತದೆ. ಈ ವೇಳೆ ಆಲೀರ ಕುಟುಂಬದ ತಕ್ಕರು ಪ್ರಾರ್ಥನೆ ಸಲ್ಲಿಸಿ ದ್ವಾರದ ಎಡಭಾಗದಲ್ಲಿ ಕೂರುತ್ತಾರೆ. ನಂತರ ಕೊಡವ ಜನಾಂಗದ ಕರ್ತುರ ಕುಟುಂಬದ ತಕ್ಕರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ದ್ವಾರದ ಬಲಭಾಗದಲ್ಲಿ ಕೂರಿಸಿದ ನಂತರ ಭಂಡಾರ ಇಡುವ ಸಂಪ್ರದಾಯ ಆರಂಭವಾಗುತ್ತದೆ. ಕಾರ್ಯ ಮುಗಿಯುವವರೆಗೂ ಉಭಯ ತಕ್ಕರು ಎಡ-ಬಲ ಬದಿಯಾಗಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಹುರಿದ ಅಕ್ಕಿ, ಕರಿಮೆಣಸು ಹಾಗೂ ಸಕ್ಕರೆಯಿಂದ ತಯಾರಿಸಿದ ‘ಕಾಪೊಡಿ’ ಮತ್ತು ನೇರ್ಚೆಗುಂಡಿಯಲ್ಲಿ ಮುಳುಗಿಸಿ ತಂದ ಬಾಳೆ ಹಣ್ಣು ಇಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದವಾಗಿದೆ.

ಹರಕೆ ಮತ್ತು ಹರಾಜು: ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೊತ್ತುಕೊಳ್ಳುವ ಹರಕೆಗಳನ್ನು ಉರೂಸ್‌ನ ದಿನದಂದು ತಂದೊಪ್ಪಿಸುತ್ತಾರೆ. ಮಧ್ಯಾಹ್ನದ ನಂತರ ಹರಕೆ ಬಂದ ವಸ್ತುಗಳನ್ನು ಹರಾಜು ಮಾಡುವ ಪ್ರಕ್ರಿಯೆ ಉರೂಸ್‌ನ ಭಾಗವಾಗಿ ನಡೆಯುತ್ತದೆ. ಇದಕ್ಕಾಗಿ ಜನ ಬೆಳಿಗ್ಗೆಯಿಂದಲೇ ಕಾದು ಕುಳಿತಿರುತ್ತಾರೆ. ಹಸು, ಕರು, ಕೋಳಿ, ಅಕ್ಕಿ, ತೆಂಗಿನಕಾಯಿ, ಹಾಲು, ತುಪ್ಪ, ಕಾಫಿ, ಕರಿಮೆಣಸು ಮೊದಲಾದವುಗಳನ್ನು ಇಲ್ಲಿ ಹರಾಜು ಹಾಕಲಾಗುತ್ತದೆ. ಹರಕೆ ವಸ್ತುಗಳ ಪೈಕಿ ನಾಟಿಕೋಳಿ ಹೆಚ್ಚು ಸಂಖ್ಯೆಯಲ್ಲಿರುತ್ತದೆ. ನಾಟಿ ಕೋಳಿಗಳನ್ನು ಉರೂಸ್‌ನ ಹರಾಜಿನಲ್ಲಿ ಪಡೆದು ಮನೆಗೆ ಕೊಂಡೊಯ್ದು ಸಾಕಿದರೆ ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ ಎಂದು ಭಕ್ತರು ನಂಬಿಕೆಯಾಗಿದೆ.

ಅನ್ನ ಪ್ರಸಾದ: ಉರೂಸ್‌ನ ಕೊನೆಯ ಭಾಗವಾಗಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತದೆ. ಉರೂಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮಾಂಸಹಾರ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ಕುರಿ ಅಥವಾ ಕೋಳಿ ಮಾಂಸ ಮತ್ತು ತುಪ್ಪದ ಅನ್ನ ಇಲ್ಲಿನ ಅನ್ನ ಪ್ರಸಾದದ ವಿಶೇಷ. ಅನ್ನ ಪ್ರಸಾದ ತಯಾರಾದ ಕೂಡಲೇ ಉಭಯ ತಕ್ಕರು ಜೊತೆ ಸೇರಿ ಅನ್ನ ಪ್ರಸಾದ ವಿತರಣೆಗೆ ಚಾಲನೆ ನೀಡುತ್ತಾರೆ. ಮೊದಲು ಎಲ್ಲರೂ ಕುಳಿತು ಸಾಮೂಹಿಕವಾಗಿ ಊಟ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಈಚೆಗೆ ಅನ್ನಪ್ರಸಾದವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಮನೆಗೆ ಕೊಂಡೊಯ್ದು ಕುಟುಂಬದವರೊAದಿಗೆ ಊಟ ಮಾಡುತ್ತಾರೆ. ಅನ್ನ ಪ್ರಸಾದ ವಿತರಣೆ ಬಳಿಕ ಕುತ್ತುನಾಡ್ ಉರೂಸ್‌ಗೆ ತೆರೆ ಬೀಳುತ್ತದೆ.

ಉರೂಸ್‌ನ ಹಿನ್ನೆಲೆ: ಎಮ್ಮೆಮಾಡಿನಲ್ಲಿ ಸಮಾಧಿಯಾದ ಸೂಫಿ ಶಹೀದ್ ವಲಿಯುಲ್ಲಾರವರು ಕೊಡಗಿಗೆ ಬಂದು ೪ ಶತಮಾನಗಳ ಹಿಂದೆ ತಾವೂರಿಗೆ ತೆರಳುವ ಮಾರ್ಗ ಮಧ್ಯೆ ದಟ್ಟಾರಣ್ಯವಾದ ಕುತ್ತುನಾಡಿನ ಕೊಂಗಣ ಕಾಡಿನಲ್ಲಿ ವಿಶ್ರಾಂತಿ ಪಡೆದಿದ್ದರು. ಸೂಫಿ ಸಂತರಾಗಿದ್ದ ಅಸಾಧಾರಣ ವ್ಯಕ್ತಿತ್ವದ ಈ ದಾರ್ಶನಿಕರನ್ನು ಅಲ್ಲಿನ ಕರ್ತುರ ಕುಟುಂಬದ ಹಿರಿಯರೊಬ್ಬರು ಕಾಡಿನಲ್ಲಿ ಭೇಟಿಯಾದರು ಎನ್ನಲಾಗಿದೆ. ಕಾಡಿನಲ್ಲಿ ವಿಶ್ರಾಂತಿ ಪಡೆದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಇವರು ಸಮೀಪದ ಮಾಪಿಳ್ಳೆತೋಡುವಿನ ಮುಸ್ಲಿಂ ಜನಾಂಗದವರನ್ನು ಸೇರಿಸಿಕೊಂಡು ಈ ಅಸಾಧಾರಣ ವ್ಯಕ್ತಿ ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ ನೆನಪಿಗಾಗಿ ಬಿಡಾರವೊಂದನ್ನು ನಿರ್ಮಿಸಿ ವಾರ್ಷಿಕ ಉರೂಸ್ ಆಚರಣೆಯನ್ನು ಪ್ರಾರಂಭಿಸಲಾಯಿತು ಎಂಬ ಪ್ರತೀತಿ ಇದೆ. ಶತಮಾನಗಳ ಹಿಂದೆ ನಿರ್ಮಿಸಲಾಗಿದ್ದ ಬಿಡಾರ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಕಳೆದ ಕೆಲ ವರ್ಷಗಳ ಹಿಂದೆ ದಾನಿಗಳ ನೆರವಿನಿಂದ ನೂತನ ಬಿಡಾರವನ್ನು ಆಧುನಿಕ ಶೈಲಿಯಲ್ಲಿ ಇಲ್ಲಿ ನಿರ್ಮಿಸಲಾಗಿದೆ. ಬೇಗೂರು ಮಾಪಿಳ್ಳೆತೋಡಿನ ಕಲ್ಲಾಯಿ ಜುಮಾ ಮಸೀದಿಯ ಆಡಳಿತ ಮಂಡಳಿ- ಗ್ರಾಮಸ್ಥರು ಮತ್ತು ಕರ್ತುರ ಕುಟುಂಬದ ಉಸ್ತುವಾರಿಯಲ್ಲಿ ಕಡೇಮಾಡ, ಮಾಂಗೆರ, ತೀತಿಮಾಡ ಕುಟುಂಬಸ್ಥರು ಸೇರಿದಂತೆ ಬೇಗೂರು ಹಾಗೂ ಸ್ಥಳೀಯ ಗ್ರಾಮವಾಸಿಗಳ ಸಹಕಾರದಲ್ಲಿ ಪ್ರತಿ ವರ್ಷ ಸಹೋದರತೆಯ ಸಂಕೇತವಾಗಿ ನಡೆಯುವ ಕುತ್ತುನಾಡು ಉರೂಸನ್ನು ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರು ಸಾಕ್ಷೀಕರಿಸುತ್ತಾರೆ.

ನಂಬಿಕೆಯ ಕೇಂದ್ರ: ಕುತ್ತುನಾಡು ವ್ಯಾಪಿಗೆ ಸೇರಿರುವ ಕೊಂಗಣ, ಬಿ.ಶೆಟ್ಟಿಗೇರಿ ಮತ್ತು ಕುಟ್ಟಂದಿ ಗ್ರಾಮದ ಕೊಡವ ಜನಾಂಗದವರಿಗೆ ಈ ಕುತ್ತು ನಾಡು ಸೂಫಿ ಶಹೀದರ ಬಿಡಾರ ಮತ್ತು ಉರೂಸ್ ಬಗ್ಗೆ ಅಪಾರವಾದ ನಂಬಿಕೆಯಿದೆ. ದನಕರುಗಳು ನಾಪತ್ತೆಯಾದರೆ ಕುತ್ತುನಾಡಿನ ‘ಶೇಖಮಾರ್’ ಅವರ ಹೆಸರಿನಲ್ಲಿ ಹರಕೆ ಹೊತ್ತರೆ ತಕ್ಷಣ ಪ್ರತಿಫಲಿಸುವ ನಂಬಿಕೆ ಇಂದಿಗೂ ಇದೆ. ದನ ಕರುಗಳಿಗೆ, ಕೋಳಿಗಳಿಗೆ ಕಾಯಿಲೆ ಬಂದಾಗ ಕುತ್ತುನಾಡಿನ ಬಿಡಾರದ ಮುಂಭಾಗದಲ್ಲಿರುವ ನೇರ್ಚೆ ಗುಂಡಿ ಹೊಳೆಯಿಂದ ನೀರು ಮತ್ತು ಬಿಡಾರದೊಳಗೆ ಶಾಶ್ವತವಾಗಿ ದೊರೆಯುವ ಹುತ್ತದ ಮಣ್ಣನ್ನು ತಂದು ಮಿಶ್ರಣ ಮಾಡಿ ದನ-ಕರು ಮತ್ತು ಕೋಳಿಗಳ ಮೇಲೆ ಸಿಂಪಡಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಸ್ಥಳೀಯರದ್ದು.

ಬಿಡಾರದ ಹುತ್ತದ ಮಣ್ಣನ್ನು ತೆಗೆದು ಬಟ್ಟೆಯಲ್ಲಿ ಕಟ್ಟಿ ದನ-ಕರುಗಳ ಕೊಟ್ಟಿಗೆಯಲ್ಲಿ ಇಡುವ ಪರಿಪಾಠವು ಇಲ್ಲಿದೆ. ಈ ಕಾರಣದಿಂದಲೇ ದನ ಕರುಗಳು ಹರಕೆ ರೂಪದಲ್ಲಿ ಇಲ್ಲಿಗೆ ಬರುತ್ತವೆ.

ಎಮ್ಮೆಮಾಡಿನಂತೆಯೇ ಕುತ್ತುನಾಡಿನಲ್ಲೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ.

- ರಫೀಕ್ ತೂಚಮಕೇರಿ