ಕಣಿವೆ, ಮೇ ೧೯: ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಬದಿಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗಿತ್ತು. ಜೊತೆಗೆ ಆಸ್ಪತ್ರೆಗೆ ಧಾವಿಸುತ್ತಿದ್ದ ರೋಗಿಗಳು ಕೂಡ ಕಿತ್ತು ನಿಂತ ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು.

ಪುರಸಭೆ ಈ ಬಗ್ಗೆ ತಲೆಕೆಡೆಸಿಕೊಳ್ಳದ ಹಿನ್ನೆಲೆಯಲ್ಲಿ ಬೇಸತ್ತ ಇಲ್ಲಿನ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರು ಸೇರಿಕೊಂಡು ಹಣ ಹೊಂದಿಸಿ ಕೊಂಡು ರಸ್ತೆಯ ಗುಂಡಿ ಮುಚ್ಚಲು ಬೇಕಾದಂತಹ ಜಲ್ಲಿ ಕಲ್ಲು, ಸಿಮೆಂಟ್ ಹಾಗೂ ಎಂ ಸ್ಯಾಂಡ್ ತಂದು ಇಲ್ಲಿನ ರಸ್ತೆಯ ಗುಂಡಿಯನ್ನು ಮುಚ್ಚುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದರು. ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ ಆಟೋ ಚಾಲಕರು ರಸ್ತೆಯ ಗುಂಡಿಗಳಿಗೆ ಕಾಂಕ್ರಿಟ್ ತುಂಬಿಸಿದರು. ಜೊತೆಗೆ ಒಂದು ವಾರ ಕಾಲ ನೀರು ಹಾಕಿ ಕ್ಯೂರಿಂಗ್ ಕೂಡ ಮಾಡುವ ಪಣ ತೊಟ್ಟರು.