ಪಕ್ಷದ ಕಾರ್ಯಕರ್ತರ ಗದ್ದಲ:ಭಾಷಣ ಮಾಡದೆ ತೆರಳಿದ ರಾಹುಲ್, ಅಖಿಲೇಶ್ ಯಾದವ್!

ಪ್ರಯಾಗ್‌ರಾಜ್, ಮೇ ೧೯: ಪಕ್ಷದ ಕಾರ್ಯಕರ್ತರ ಗದ್ದಲ, ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡದೆ ಭಾನುವಾರ ನಿರ್ಗಮಿಸಿದರು. ಭಾರಿ ಜನಸಂದಣಿಯಿAದ ಕಾಲ್ತುಳಿತದಂತಹ ಪರಿಸ್ಥಿತಿ ಏರ್ಪಟ್ಟಿದ್ದರಿಂದ ಭದ್ರತೆ ಹಿನ್ನೆಲೆ ಇಬ್ಬರು ರಾಜಕೀಯ ನಾಯಕರು ಜನರನ್ನುದ್ದೇಶಿಸಿ ಮಾತನಾಡದೆ ಅಲ್ಲಿಂದ ನಿರ್ಗಮಿಸಿದರು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಫುಲ್‌ಪುರ್ ಲೋಕಸಭಾ ಕ್ಷೇತ್ರ ಪಡಿಲಾದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಮತ್ತು ಎಸ್ಪಿ ಕಾರ್ಯಕರ್ತರು ವೇದಿಕೆ ತಲುಪಲು ಯತ್ನಿಸಿದರು ಎನ್ನಲಾಗಿದೆ. ಪಕ್ಷದ ಕಾರ್ಯಕರ್ತರನ್ನು ಶಾಂತಗೊಳಿಸಲು ಅಖಿಲೇಶ್ ಮತ್ತು ರಾಹುಲ್ ಪದೇ ಪದೇ ವಿನಂತಿಸಿದರೂ ಅವರ ಮನವಿಗೆ ಕಿವಿಗೊಡದ ಉದ್ರೇಕಿತ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಬಳಿಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ತಮ್ಮ ನಡುವೆ ಸಂಕ್ಷಿಪ್ತ ಚರ್ಚೆ ನಡೆಸಿ ಸ್ಥಳದಿಂದ ನಿರ್ಗಮಿಸಿದರು.

ಸುಪ್ರೀಂ ಮೊರೆ ಹೋದ ಕರ್ನಾಟಕ ಸರ್ಕಾರ

ನವದೆಹಲಿ, ಮೇ ೧೯: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉದ್ರಿಕ್ತ ಗುಂಪೊAದರಲ್ಲಿ ತೊಡಗಿಸಿಕೊಂಡು ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿದ್ದಕ್ಕಾಗಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸುವಂತೆ ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಜೆಡಿ(ಎಸ್) ನಾಯಕ ಬಿ.ಬಿ. ಪಾಟೀಲ್ ಅವರಿಗೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಉನ್ನತ ನ್ಯಾಯಾಲಯದ ದ್ವಿಸದಸ್ಯ ಪೀಠವು ಪಾಟೀಲ್ ಅವರಿಗೆ ನೋಟೀಸ್ ಜಾರಿ ಮಾಡಿದೆ ಮತ್ತು ಕರ್ನಾಟಕ ಸರ್ಕಾರದ ಮೇಲ್ಮನವಿಗೆ ಅವರ ಪ್ರತಿಕ್ರಿಯೆಯನ್ನು ಕೇಳಿದೆ. ಬೇಸಿಗೆ ರಜೆಯ ನಂತರ ಜುಲೈ ೭ ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳನ್ನು ಹಾನಿಗೊಳಿಸಿದ ಆರೋಪದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದ ನಿವೃತ್ತ ಪೊಲೀಸ್ ಅಧಿಕಾರಿ ಪಾಟೀಲ್ ಆರೋಪಿಯಾಗಿದ್ದಾರೆ.

ಕೇಜ್ರಿವಾಲ್ ನಿವಾಸದಿಂದ ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡ ಪೊಲೀಸರು!

ನವದೆಹಲಿ, ಮೇ ೧೯: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬAಧಿಸಿದAತೆ ದೆಹಲಿ ಪೊಲೀಸರ ತಂಡವು ಭಾನುವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ತಲುಪಿದ್ದು, ಸಿಸಿಟಿವಿ ಡಿವಿಆರ್ ಅನ್ನು ವಶಪಡಿಸಿಕೊಂಡಿದೆ. ಮೇ ೧೩ ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸಿಎಂ ನಿವಾಸಕ್ಕೆ ತೆರಳಿದ್ದ ವೇಳೆ ಅವರ ಆಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಲಿವಾಲ್ ಆರೋಪಿಸಿದ್ದಾರೆ. ಮಲಿವಾಲ್ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಪಡೆಯಲು ಪೊಲೀಸರ ತಂಡವು ಸಿಸಿಟಿವಿ ಡಿವಿಆರ್ (ಡಿಜಿಟಲ್ ವೀಡಿಯೋ ರೆಕಾರ್ಡರ್) ಸೇರಿದಂತೆ ಎಲೆಕ್ಟಾçನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಸಿಎಂ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗುತ್ತಿದೆ ಎಂದು ಮಲಿವಾಲ್ ಆರೋಪಿಸಿದ್ದಾರೆ. ದೆಹಲಿಯ ಸಿವಿಲ್ ಲೈನ್ಸ್ನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಬಿಭವ್ ಕುಮಾರ್ ಅವರನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿ: ಓರ್ವ ಸಾವು-ಇಬ್ಬರಿಗೆ ಗಾಯ

ಅನಂತನಾಗ್, ಮೇ ೧೯: ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಪಿಯ ಮಾಜಿ ಸರ್ ಪಂಚ್‌ರ ಹತ್ಯೆಯಾಗಿದೆ. ಜೈಪುರ ಮೂಲದ ದಂಪತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಿಜೆಪಿಯ ಮಾಜಿ ಸರಪಂಚ್‌ನನ್ನು ಐಜಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಹೀರ್ಪೋರಾದಲ್ಲಿ ಐಜಾಜ್ ಅಹ್ಮದ್ ಶೇಖ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಪೊಲೀಸರು ಪ್ರದೇಶವನ್ನು ಸುತ್ತುವರಿದು ತೀವ್ರ ಗಾಯಗೊಂಡ ಐಜಾಜ್ ಅಹ್ಮದ್‌ನನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಯನ್ನಾರ್ ಪ್ರದೇಶದಲ್ಲಿ ಜೈಪುರದ ದಂಪತಿ ಗಾಯಗೊಂಡಿದ್ದಾರೆ. ಅನಂತ್‌ನಾಗ್ ಜಿಲ್ಲೆಯ ಯನ್ನಾರ್‌ನಲ್ಲಿ ಜೈಪುರ ನಿವಾಸಿ ಫರ್ಹಾ ಎಂಬ ಮಹಿಳೆ ಮತ್ತು ಆಕೆಯ ಸಂಗಾತಿ ತಬ್ರೇಜ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಒಕೆ ನಮಗೆ ಸೇರಿದ್ದು : ಅಮಿತ್ ಶಾ

ಪ್ರಯಾಗ್‌ರಾಜ್, ಮೇ ೧೯: ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದನ್ನು ವಾಪಸ್ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪಾಕಿಸ್ತಾನ ಅಣುಬಾಂಬ್ ಹೊಂದಿರುವುದರಿAದ ಅದಕ್ಕೆ ಗೌರವ ನೀಡಿ ಎಂದು ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳುತ್ತಾರೆ. ರಾಹುಲ್ ಬಾಬಾ, ಇಂದು ಪ್ರಯಾಗ್‌ರಾಜ್‌ನ ಪವಿತ್ರ ಭೂಮಿಯಿಂದ ಹೇಳುತ್ತೇನೆ, ಈ ಪಿಒಕೆ ನಮ್ಮದು, ನಮ್ಮದೇ ಆಗಿರುತ್ತದೆ ಮತ್ತು ನಾವು ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಐಪಿಎಲ್ ಬೆಟ್ಟಿಂಗ್: ಯುವಕ ನೇಣಿಗೆ ಶರಣು!

ರಾಯಚೂರು, ಮೇ ೧೯: ಐಪಿಎಲ್ ಬೆಟ್ಟಿಂಗ್‌ದAಧೆಯಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ (೨೯) ಆತ್ಮಹತ್ಯೆಗೆ ಶರಣಾದ ಯುವಕ. ಈತ ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಆದರೆ ಬೆಟ್ಟಿಂಗ್ ಕಟ್ಟಿದ ಎಲ್ಲ ಮ್ಯಾಚ್‌ಗಳು ಸೋತಿದ್ದವು. ಸಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಸಾಲಗಾರರ ಕಾಟಕ್ಕೆ ಬೇಸತ್ತ ಮುದಿಬಸವ ಲಾಡ್ಜ್ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೂಮಿನ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿ ಒಳಹೊಕ್ಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಿಂಧನೂರು ನಗರ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.