ಶನಿವಾರಸಂತೆ, ಮೇ ೨೦: ಶನಿವಾರಸಂತೆ ವಲಯ ಅರಣ್ಯ ಇಲಾಖೆ ವತಿಯಿಂದ ಚಂಗಡಹಳ್ಳಿ ರಸ್ತೆಯಲ್ಲಿ ಇರುವ ಕಾಜೂರು ಸಸ್ಯ ಕ್ಷೇತ್ರದಲ್ಲಿ ರೈತರಿಗಾಗಿ ವಿವಿಧ ಬಗೆಯ ಉಪಯುಕ್ತ ಸಸ್ಯಗಳನ್ನು ಬೆಳೆಯಲಾಗಿದೆ. ಅಗಸೆ, ಅವಳಿಗೆ, ಆಲೆಹಣ್ಣು, ಜೋಪುಳ, ಹಲಸು, ಹೆಬ್ಬಲಸು, ಮಾವು, ಅಮ್ಟೆ, ಸೀಬೆ, ಸಿಲ್ವರ್, ಹೇರಳೆಕಾಯಿ, ನೆಲ್ಲಿ, ತೇಗ, ಸಿಲ್ವರ್ ಪನ್ನೆರಲ, ಹೊನ್ನೆ, ಅಶೋಕ ಇತ್ಯಾದಿ ಔಷಧಿ ಗುಣವಿರುವ ಸಸ್ಯಗಳನ್ನು ಬೆಳೆಯಲಾಗಿದ್ದು ಮೇ ತಿಂಗಳ ಕೊನೆಯ ವಾರದಲ್ಲಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ರೈತರು ತಮ್ಮ ಆಧಾರ್ ಕಾರ್ಡ್ ಹಾಗೂ ಆರ್.ಟಿ.ಸಿ.ಯನ್ನು ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಚೇರಿಗೆ ನೀಡಿ ಗಿಡಗಳನ್ನು ಪಡೆದುಕೊಳ್ಳಬಹುದಾಗಿದೆ. ಚಿಕ್ಕ ಗಿಡಗಳಿಗೆ ರೂ. ೩ ಹಾಗೂ ದೊಡ್ಡ ಗಿಡಗಳಿಗೆ ರೂ. ೬ ರಂತೆ ದರ ನಿಗದಿಪಡಿಸಲಾಗಿದೆ. ಕೃಷಿಕರು ಕಡಿಮೆ ದರದಲ್ಲಿ ಉಪಯುಕ್ತ ಸಸ್ಯಗಳನ್ನು ಖರೀದಿಸಿ ತೋಟಗಳಲ್ಲಿ ನೆಡುವ ಮೂಲಕ ಪರಿಸರ ಉಳಿಸಿ, ಬೆಳೆಸಬಹುದು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಹಾಗೂ ಉಪ ವಲಯ ಅರಣ್ಯಾಧಿಕಾರಿ ಆರ್. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.