ಮಡಿಕೇರಿ, ಮೇ ೨೦ : ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ಮಳೆಗಾಲದ ಸಂದರ್ಭ ಭಾರೀ ತೊಂದರೆಯಾಗುವುದು ವಿದ್ಯುತ್ ಪೂರೈಕೆಯ ವ್ಯವಸ್ಥೆಯಾಗಿದೆ. ಅರಣ್ಯ ಪ್ರದೇಶ - ತೋಟಗಳು, ಗುಡ್ಡಗಾಡು ಪ್ರದೇಶದಿಂದ ಆವೃತ್ತವಾಗಿರುವ ಜಿಲ್ಲೆ ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸೆಸ್ಕ್ ಇಲಾಖೆ ಇದೀಗ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ವಿದ್ಯುತ್ ಮಾರ್ಗ ಹಾದುಹೋಗುವ ಮಾರ್ಗಗಳ ನಿರ್ವಹಣೆ, ಫೀಡರ್ಗಳ ದುರಸ್ತಿ, ಅಗತ್ಯ ಸಾಮಗ್ರಿಗಳ ಸಂಗ್ರಹ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರಾದ ಅನಿತಾಬಾಯಿ ಅವರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಹಕಾರಕ್ಕೆ ಮನವಿ
ಪ್ರಸ್ತುತ ವಿದ್ಯುತ್ ಮಾರ್ಗಗಳು ಹಾದು ಹೋಗುವ ಪ್ರದೇಶಗಳಲ್ಲಿ ವಿದ್ಯುತ್ ತಂತಿಗೆ ಅಡಚಣೆಯಾಗುವÀ ಸಣ್ಣಪುಟ್ಟ ಮರದ ರೆಂಬೆಗಳನ್ನು ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ. ಆದರೆ ದೊಡ್ಡಕೊಂಬೆಗಳು, ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಈ ಬಗ್ಗೆ ಸಹಕಾರ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆಯುತ್ತಿರುವದಾಗಿ ಅವರು ತಿಳಿಸಿದ್ದಾರೆ.
ಶೇ. ೬೦ ರಷ್ಟು ಸಿಬ್ಬಂದಿ ಕೊರತೆ
ಈ ನಡುವೆ ಸೆಸ್ಕ್ ಇಲಾಖೆಯಲ್ಲಿ ಶೇ. ೬೦ ರಷ್ಟು ಸಿಬ್ಬಂದಿ ಕೊರತೆ ಇರುವುದು ಭಾರೀ ಸಮಸ್ಯೆಯಾಗಿದೆ. ಕಳೆದ ವರ್ಷ ಸುಮಾರು ೩೫ ರಿಂದ ೪೦ ಸಿಬ್ಬಂದಿಗಳು ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾವಣೆ ಮಾಡಿಸಿಕೊಂಡು ತೆರಳಿದ್ದಾರೆ. ಈ ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸರಕಾರದ ಗಮನಕ್ಕೂ ತರಲಾಗಿದೆ. ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೂತನ ಸಿಬ್ಬಂದಿ ನೇಮಕಾತಿಯಾಗುವ ಆಶಾಭಾವನೆ ಇರುವುದಾಗಿ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದ್ದಾರೆ.
ಸದ್ಯದ ಮಟ್ಟಿಗೆ ಇಲಾಖೆಯ ಪ್ರಸ್ತಾವನೆಯಂತೆ ೭೫ ಗ್ಯಾಂಗ್ಮೆನ್ಗಳಿಗೆ ಮಂಜೂರಾತಿ ದೊರೆತಿದೆ, ಇವರಲ್ಲಿ ೬೦ ಮಂದಿ ನಿಯೋಜಿತರಾಗಿದ್ದು, ಇನ್ನೂ ೧೫ ಮಂದಿಯ ನಿಯೋಜನೆಯಾಗಬೇಕಿದೆ. ಈ ಕೆಲಸಕ್ಕೆ ಸದ್ಯಕ್ಕೆ ಹೊರಜಿಲ್ಲೆಯ ಜನರೇ ಆಗಮಿಸಿದ್ದಾರೆ. ಈ ಕೆಲಸದತ್ತ ಜನರು ಆಸಕ್ತಿ ತೋರದಿರುವುದೂ ನೇಮಕಾತಿಗೆ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ನಿಂದ ೩೦೦ ಕಂಬ ಹಾನಿ
ಏಪ್ರಿಲ್ನಿಂದ ಈ ತನಕ ಅಡ್ಡಮಳೆ - ಗಾಳಿಯಿಂದಾಗಿ ಸುಮಾರು ೩೦೦ ಕಂಬಗಳಿಗೆ ಹಾನಿಯಾಗಿದ್ದು, ಇದನ್ನು ಸರಿಪಡಿಸಲಾಗಿದೆ. ಇನ್ನು ಮಳೆಗಾಲಕ್ಕೆ ಮುಂಜಾಗ್ರತೆಯಾಗಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಕೊರತೆಯಿಲ್ಲ. ಇವುಗಳನ್ನು ಹೆಚ್ಚು ಹಾನಿಯಾಗುವ ಪ್ರದೇಶ ವ್ಯಾಪ್ತಿಯ ಕಚೇರಿಗಳಲ್ಲಿ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಮಳೆ ಸಂದರ್ಭ ಹಾನಿಯಾದಲ್ಲಿ ಕಂಬ - ತಂತಿಗಳು ತುಂಡರಿಸಿ ಬಿದ್ದಲ್ಲಿ ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸದ್ಯದಲ್ಲಿ ನೀಡಲಾಗುವದು ಎಂದು ಅನಿತಾಭಾಯಿ ಅವರು ತಿಳಿಸಿದ್ದಾರೆ. ಪ್ರಸ್ತುತ ಅಡ್ಡಮಳೆಯ ಸಂದರ್ಭ ತಿತಿಮತಿ, ನಾಪೋಕ್ಲು, ಮೂರ್ನಾಡು, ಚೆಟ್ಟಳ್ಳಿ, ವೀರಾಜಪೇಟೆ, ಶ್ರೀಮಂಗಲ ವಿಭಾಗಗಳಲ್ಲಿ ಸಮಸ್ಯೆ ಉದ್ಭವವಾಗಿದ್ದು, ಇದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ ಅವರು ಖಾಸಗಿ ತೋಟಗಳಲ್ಲಿ ಮಾಲೀಕರು ಮರ - ರೆಂಬೆಗಳ ತೆರವಿಗೆ ಅಗತ್ಯ ಸಹಕಾರ ನೀಡುವಂತೆ ಕೋರುವುದಾಗಿ ಹೇಳಿದರು.