ಮಡಿಕೇರಿ, ಮೇ ೨೧: ಜಿಲ್ಲೆಯಾದ್ಯಂತ ತಾ. ೨೯ ರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಮಕ್ಕಳನ್ನು ಶಾಲೆಗಳಿಗೆ ಸ್ವಾಗತಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ

ಎಂ. ಚಂದ್ರಕಾAತ್ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಅಕ್ಷರ ದಾಸೋಹವನ್ನು ಸಮರ್ಪಕವಾಗಿ ನಿಭಾಯಿಸುವುದು, ಸ್ವಚ್ಛತಾ ಕಾರ್ಯ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಟಾನ ಸೇರಿದಂತೆ ಅಗತ್ಯವಾಗಿ ಕೈಗೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳ ಸಭೆಯನ್ನು ಸದ್ಯದಲ್ಲೇ ಏರ್ಪಡಿಸಿ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದರು. ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವ ಉದ್ದೇಶದಿಂದ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಸಮುದಾಯಗಳ ಸಹಕಾರದೊಂದಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮೆರವಣಿಗೆ ಮೂಲಕ, ಎತ್ತಿನಗಾಡಿಯಲ್ಲಿ ವಾದ್ಯಗೋಷ್ಠಿಗಳೊಂದಿಗೆ ಸೇರಿದಂತೆ ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ತಯಾರಿ ನಡೆಸಲಾಗುವುದು. ಅಲ್ಲದೇ ಮಕ್ಕಳಿಗೆ ಮೊದಲ ದಿನ ಸಿಹಿ ಹಂಚಿ ಸ್ವಾಗತಿಸಲಾಗುವುದು ಎಂದು ಅವರು ತಿಳಿಸಿದರು.

ಪೂರಕ ಪರೀಕ್ಷೆ

ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೯ ಮಂದಿ ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರಲ್ಲಿ ಮತ್ತಷ್ಟು ಹೆಚ್ಚಿನ ಅಂಕ ಪಡೆಯುವ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದ್ದು, ೬೦ ಮಂದಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ೧೫ ಮಂದಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ.

(ಮೊದಲ ಪುಟದಿಂದ) ಇವರೆಲ್ಲರೂ ಸೇರಿ ಒಟ್ಟು ೭೦೪ ಮಂದಿಗೆ ಜೂನ್ ೧೪ ರಿಂದ ಪೂರಕ ಪರೀಕ್ಷೆ-೨ ನಡೆಯಲಿದ್ದು, ಈ ವಿದ್ಯಾರ್ಥಿಗಳಿಗೆ ಪೂರ್ವ ಬೋಧನೆಗೆ ಶಿಕ್ಷಕರುಗಳಿಗೆ ಸೂಚಿಸಲಾಗುತ್ತದೆ. ಮಡಿಕೇರಿ ಜೂನಿಯರ್ ಕಾಲೇಜು, ವೀರಾಜಪೇಟೆ ಜೂನಿಯರ್ ಕಾಲೇಜು ಹಾಗೂ ಸೋಮವಾರಪೇಟೆ ಜೂನಿಯರ್ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹತ್ತನೇ ತರಗತಿಯಲ್ಲಿ ಶೇ. ೧೦೦ರಷ್ಟು ಸಾಧನೆ ಮಾಡಿದ ಶಾಲೆಗಳ ಮುಖ್ಯ ಶಿಕ್ಷಕರುಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ ಎಂದು ಚಂದ್ರಕಾAತ್ ವಿವರಿಸಿದರು. ಈ ಸಂದರ್ಭ ಶಿಕ್ಷಣಾಧಿಕಾರಿ ಎಂ. ಮಹದೇವಸ್ವಾಮಿ ಹಾಜರಿದ್ದರು. -ಉಜ್ವಲ್