ಮಡಿಕೇರಿ, ಮೇ ೨೧: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ದಿನಗಣನೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ರಾಜ್ಯದಲ್ಲಿ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ನಡೆಯಲು ಸಿದ್ಧವಾಗುತ್ತಿದೆ. ಈಗಾಗಲೇ ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯಗೊಂಡು, ಅಂತಿಮವಾಗಿ ೧೮ ಮಂದಿ ಕಣದಲ್ಲಿದ್ದಾರೆ. ಜೂ. ೩ ರಂದು ಮತದಾನ ನಡೆಯಲಿದೆ.
ಕೊಡಗು ಒಳಗೊಂಡ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ, ನ್ಯಾಮತಿ) ಜಿಲ್ಲೆಯನ್ನು
ಸೇರಿರುವ ನೈಋತ್ಯ ಕ್ಷೇತ್ರವೂ ಕೌತುಕ ಮೂಡಿಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಹಣಾಹಣಿಯೊಂದಿಗೆ ಬಂಡಾಯದ ಬಿಸಿಯೂ ಏರ್ಪಟ್ಟಿದೆ.
ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ವಿಧಾನ ಪರಿಷತ್ ಹಾಲಿ ಸದಸ್ಯ ಎಸ್.ಎಲ್. ಭೋಜೇಗೌಡ ಮೈತ್ರಿ ಅಭ್ಯರ್ಥಿಯಾಗಿ, ಕೊಡಗಿನವರೇ ಆದ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಕಾಂಗ್ರೆಸ್‌ನಿAದ ಸ್ಪರ್ಧಿಸುತ್ತಿದ್ದಾರೆ. ಇದರೊಂದಿಗೆ ಭಾಸ್ಕರ್ ಶೆಟ್ಟಿ, ನರೇಶ್ ಹೆಗ್ಗಡೆ, ಎಸ್.ಆರ್. ಹರೀಶ್ ಆಚಾರ್ಯ, ಎಚ್.ಡಿ. ಅರುಣ್, ಬಿ.ಆರ್. ನಂಜೇಶ್, ಕೆ.ಕೆ. ಮಂಜುನಾಥ್ ಪಕ್ಷೇತರರಾಗಿ ಸ್ಪರ್ಧೆ ಬಯಸಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ೨೩,೪೦೨ ಮತದಾರರಿದ್ದು, ಕೊಡಗು ಜಿಲ್ಲೆಯಲ್ಲಿ ೧,೫೭೮ ಮತದಾರರು ಅರ್ಹರಾಗಿದ್ದಾರೆ.
ಪದವೀಧರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಂ. ರಂಗಸ್ವಾಮಿ ನಾಮಪತ್ರ ಹಿಂತೆಗತದಿAದ ಅಂತಿಮವಾಗಿ ೧೦ ಮಂದಿ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ.
(ಮೊದಲ ಪುಟದಿಂದ) ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿ ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ಆಯನೂರು ಮಂಜುನಾಥ್ ಕಾಂಗ್ರೆಸ್‌ನಿAದ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಧನಂಜಯ ಸರ್ಜಿ ಕಣದಲ್ಲಿದ್ದಾರೆ. ಇದರೊಂದಿಗೆ ಹಿಂದೂ ಪರ ನಾಯಕ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಗೆ ‘ರೆಬೆಲ್’ ಆಗಿ ಪರಿಣಮಿಸಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಇವರು ಅಖಾಡದಲ್ಲಿದ್ದಾರೆ.
ಉಳಿದಂತೆ ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಪಕ್ಷೇತರರಾಗಿ ದಿನಕರ್ ಉಲ್ಲಾಳ್, ಎಸ್.ಬಿ. ದಿನೇಶ್, ಬಿ. ಮಹಮ್ಮದ್, ಶೇಖ್ ಬಾವ, ಜಿ.ಆರ್. ಷಡಕ್ಷರಪ್ಪ ಮತ್ತು ಎಸ್. ಮುಜಾಯಿದ್ ಸಿದ್ಧಿಕಿ ಸ್ಪರ್ಧೆ ಮಾಡುತ್ತಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಮತ ಚಲಾಯಿಸಲು ಒಟ್ಟು ೧,೮೫,೦೮೯ ಮಂದಿ ಅರ್ಹರಿದ್ದು, ಕೊಡಗಿನಲ್ಲಿ ೩,೯೦೯ ಮಂದಿ ಮತದಾರರಿದ್ದಾರೆ.
ಜಿಲ್ಲೆಯಲ್ಲಿಯೂ ಮತಗಟ್ಟೆ
ಶಿಕ್ಷಕರ ಕ್ಷೇತ್ರಕ್ಕೆ ೫, ಪದವೀಧರ ಕ್ಷೇತ್ರಕ್ಕೆ ೬ ಮತಗಟ್ಟೆಗಳು ಜಿಲ್ಲೆಯಲ್ಲಿವೆ. ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ಕಾವೇರಿ ಕಲಾಕ್ಷೇತ್ರ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಪೊನ್ನಂಪೇಟೆ ಜೂನಿಯರ್ ಕಾಲೇಜು ಮತಗಟ್ಟೆಗಳಾಗಿದ್ದು, ಪದವೀಧರ ಕ್ಷೇತ್ರಕ್ಕೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ನಗರಸಭೆಯ ಎಡ ಹಾಗೂ ಬಲಪಾರ್ಶ್ವ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಪೊನ್ನಂಪೇಟೆ ಜೂನಿಯರ್ ಕಾಲೇಜಿನಲ್ಲಿ ಮತಗಟ್ಟೆಗಳಿವೆೆ.