ಓ ದೇವರೇ. ನಾನು ಈ ಸಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹೇಗಾದರೂ ಮಾಡಿ ನಾನು ಸೋಲುವಂತೆ ಮಾಡಪ್ಪಾ..

ಹೀಗೆಂದು ಚುನಾವಣಾ ಅಭ್ಯರ್ಥಿಯೋರ್ವರು ಪ್ರಾರ್ಥನೆ ಮಾಡಿದ್ದಾರೆ. ಈ ಚುನಾವಣೆ ಅಂತಲ್ಲ ಪ್ರತೀ ಚುನಾವಣೆ ಯಲ್ಲಿಯೂ ಈ ಅಭ್ಯರ್ಥಿ ತನ್ನ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಯಾಕೆಂದರೆ, ಇವರು ಗೆಲುವಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬದಲಿಗೆ, ಸೋಲಲೆಂದೇ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ!

ಅಂದAತೆ, ಈ ಅಭ್ಯರ್ಥಿ ಈವರೆಗೆ ಸ್ಪರ್ಧಿಸಿರುವ ಚುನಾವಣೆಗಳು ಎಷ್ಟು ಗೊತ್ತೇ? ಇವರು ಸ್ಪರ್ಧಿಸಿ ಸೋತಿರುವ ಚುನಾವಣೆ ೨೩೭. ಈ ಸಲವೂ ತಮಿಳುನಾಡಿನ ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ತನ್ನ ೨೩೮ ನೇ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಅಭ್ಯರ್ಥಿ ಹೆಸರು ಡಾ. ಕೆ. ಪದ್ಮರಾಜನ್ ಇವರಿಗೆ ಚುನಾವಣಾ ಸೋಲಿನ ಕಿಂಗ್ ಮತ್ತು ಎಲೆಕ್ಷನ್ ಕಿಂಗ್ ಎಂಬ ಹೆಸರೂ ಲಭಿಸಿದೆ. !

ತಮಿಳುನಾಡು ರಾಜ್ಯದ ಮೆಟ್ಟೂರು ಗ್ರಾಮದಲ್ಲಿ ಟೈರ್ ರಿಪೇರಿ ಅಂಗಡಿಯ ಉದ್ಯಮ ನಡೆಸುತ್ತಿದ್ದ ಪದ್ಮರಾಜನ್ ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರು. ನೂರಾರು ಮಂದಿಗೆ ಚಿಕಿತ್ಸೆ ನೀಡುವ ಈ ವೈದ್ಯರಿಗೆ ೧೯೮೮ ರಿಂದ ಚುನಾವಣೆಗೆ ಸ್ಪರ್ಧಿಸುವ ಚಟ ಪ್ರಾರಂಭವಾಯಿತು.

ತಮಿಳುನಾಡು ಅಂಥಲ್ಲ, ಭಾರತದಲ್ಲಿ ಯಾವುದೇ ಚುನಾವಣೆ ಘೋಷಣೆಯಾಗಲಿ ಅಲ್ಲಿ ತಾನು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದೇ ಡಾ.ಪದ್ಮರಾಜನ್ ಅವರಿಗೆ ಚಟವಾಯಿತು.

ಹೀಗಾಗಿಯೇ ಕಳೆದ ೩೬ ವರ್ಷಗಳಲ್ಲಿ ಇವರು ಸ್ಪರ್ಧಿಸಿರುವ ಚುನಾವಣೆ ೨೩೭ ಆಗಿದೆ.

೪ ಬಾರಿ ಪ್ರಧಾನ ಮಂತ್ರಿಗಳ ಎದುರು, ೧೬ ಬಾರಿ ಮುಖ್ಯಮಂತ್ರಿಗಳ ಎದುರು, ೧೩ ಕೇಂದ್ರ ಸಚಿವರ ಎದುರು, ೧೫ ರಾಜ್ಯ ಸಚಿವರ ಪ್ರತಿಸ್ಪರ್ಧಿಯಾಗಿ, ಇವರು ಚುನಾವಣಾ ಕಣದಲ್ಲಿದ್ದರು. ಈವರೆಗೆ ವಿಧಾನಸಭೆಯ ೭೩ ಚುನಾವಣೆ, ರಾಜ್ಯಸಭೆಯ ೫೦ ಚುನಾವಣೆ, ಲೋಕಸಭೆಯ ೩೨ ಚುನಾವಣೆಗಳಲ್ಲಿ ಡಾ. ಪದ್ಮರಾಜನ್ ಅಭ್ಯರ್ಥಿಯಾಗಿದ್ದರು. ಇಷ್ಟೊಂದು ಸಲ ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆ ಒಂದೆಡೆಯಾದರೆ, ಎಲ್ಲಾ ಚುನಾವಣೆಯಲ್ಲಿ ಸೋತ ಕಾರಣದಿಂದಾಗಿ ಭಾರತದಲ್ಲಿ ಅತ್ಯಧಿಕ ಚುನಾವಣೆ ಸೋತ ಅಭ್ಯರ್ಥಿ ಎಂಬ ಗಿನ್ನಿಸ್ ದಾಖಲೆ, ಲಿಮ್ಕಾ ದಾಖಲೆಯೂ ೬೫ ವರ್ಷದ ಡಾ. ಪದ್ಮರಾಜನ್ ಪಾಲಾಗಿದೆ.

ತಮಿಳುನಾಡು ಮಾತ್ರವಲ್ಲದೇ, ನವದೆಹಲಿ, ಕರ್ನಾಟಕ, ಆಂಧ್ರ, ಕೇರಳ, ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿಯೂ ಇವರು ಸ್ಪರ್ಧಿಸಿದ್ದಾರೆ.

ಇಷ್ಟೊಂದು ಚುನಾವಣೆಗೆ ಸ್ಪರ್ಧಿಸಲು ಎಷ್ಟೊಂದು ವೆಚ್ಚವಾಗಿರಬಹುದು?

ಡಾ. ಪದ್ಮರಾಜನ್ ಹೇಳುವಂತೆ, ನಾನು ಯಾವುದೇ ಚುನಾವಣೆಯ ಪ್ರಚಾರಕ್ಕೆ ಖರ್ಚು ಮಾಡುವುದೇ ಇಲ್ಲ, ಗೆಲ್ಲಬೇಕು ಎಂದು ಮತದಾರರನ್ನು ಕೇಳಿದರೆ ತಾನೇ ಪ್ರಚಾರ ಮಾಡಬೇಕಾಗುವುದು? ಆದರೆ ಇಷ್ಟೂ ವರ್ಷಗಳಲ್ಲಿ ನಾಮಪತ್ರ ಸಲ್ಲಿಕೆಯ ಠೇವಣಿಗಾಗಿ ೨೮ ಲಕ್ಷ ರೂ. ವೆಚ್ಚ ಮಾಡಿ ಪ್ರತೀ ಚುನಾವಣೆಯಲ್ಲಿಯೂ ಠೇವಣಿ ಮತ ಕಳೆದುಕೊಂಡು ಠೇವಣಿ ಹಣವನ್ನೂ ಕಳೆದುಕೊಂಡಿದ್ದೇನೆ!

ಅಲ್ಲಾ ಸ್ವಾಮಿ ಯಾಕೆ ಇಂಥ ಚಟ ಎಂದರೆ ಪದ್ಮರಾಜನ್ ಹೇಳುವುದು ಹೀಗೆ.

ಯಾಕೆ ಸಾಮಾನ್ಯ ವ್ಯಕ್ತಿ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಬಾರದು? ಪ್ರಭಾವಿಗಳೇ ಸ್ಪರ್ಧಿಸಬೇಕೇ? ನನ್ನಂಥ ಸಾಮಾನ್ಯನೂ ಚುನಾವಣೆ ಎದುರಿಸಬಹುದು ಎಂಬುದನ್ನು ನಿರೂಪಿಸಲು ಪ್ರತೀ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲುತ್ತಿದ್ದೇನೆ. ನನಗೆ ಯಾವುದೇ ರಾಜಕೀಯ ವ್ಯಕ್ತಿಗಳ ಬೆಂಬಲ ಇಲ್ಲ, ರಾಜಕೀಯ ಪಕ್ಷಗಳ ಪ್ರಭಾವದಿಂದಲೂ ನಾನು ಸ್ಪರ್ಧಿಸುತ್ತಿಲ್ಲ. ನಂಗೆ ಸೋತರೆ ಬೇಸರವಾಗುವುದಿಲ್ಲ, ಸೋಲುತ್ತೇನೆ ಎಂದು ನಾಮಪತ್ರ ಸಲ್ಲಿಸಿದಾಗಲೇ ಗೊತ್ತಾಗಿರುತ್ತದೆ. ಹೀಗಿದ್ದರೂ ಅದೊಂದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪ್ರಚಾರ ಮಾಡದೇ ನನಗೆ ೬,೨೭೩ ಮತಗಳು ದೊರಕಿದ್ದವು. ಇಷ್ಟು ಮತಗಳು ನನಗೆ ದೊರಕಿದ್ದೇ ನನಗೇ ಅಚ್ಚರಿ ಉಂಟು ಮಾಡಿತ್ತು. !

ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಪಿ.ವಿ. ನರಸಿಂಹರಾವ್, ಪ್ರಣವ್ ಮುಖರ್ಜಿ, ಪ್ರತಿಭಾ ಪಾಟೀಲ್, ಕೆ.ಆರ್. ನಾರಾಯಣನ್, ಎಪಿಜೆ ಅಬ್ದುಲ್ ಕಲಾಂ, ರಾಹುಲ್ ಗಾಂಧಿ, ಮನೇಕಾಗಾಂಧಿ, ಎಂ. ಕರುಣಾನಿಧಿ, ಎ.ಕೆ. ಆಂಟೋನಿ, ಎಸ್.ಎಂ. ಕೃಷ್ಣ, ಜಯಲಲಿತಾ, ಜಗದೀಶ್ ಶೆಟ್ಟರ್ ಮಾತ್ರವಲ್ಲ ನರೇಂದ್ರ ಮೋದಿ ಎದುರೂ ಚುನಾವಣೆಯಲ್ಲಿ ಡಾ. ಪದ್ಮರಾಜನ್ ಸ್ಪರ್ಧಿಸಿದ್ದಾರೆ.

ಪ್ರತೀ ಬಾರಿಯೂ ಚುನಾವಣೆ ಘೋಷಣೆಯಾದಾಗಲೂ ಡಾ. ಪದ್ಮರಾಜನ್ ಯೋಚಿಸುವುದು ಈ ಬಾರಿ ನಾನು ಯಾರ ವಿರುದ್ದ ಸ್ಪರ್ಧಿಸಲಿ?

ಕೊನೆಯದ್ದಾಗಿ, ಚುನಾವಣೆಯಲ್ಲಿ ಗೆಲ್ಲಲು ಏನು ಮಾಡಬೇಕೆಂಬ ಪ್ರಶ್ನೆಗೆ ಪದ್ಮರಾಜನ್ ಉತ್ತರ - ಹಣ ಇದ್ದರೆ ಅದೇ ಅರ್ಹತೆ, ನನಗೆ ಹಣ ನೀಡಿ ಗೆಲ್ಲುವುದು ಬೇಕಾಗಿಲ್ಲ, ಹೀಗಾಗಿಯೇ ಸೋಲಿನಲ್ಲಿಯೇ ಮಾನಸಿಕವಾಗಿ ಗೆಲುವಿನ ಸಂಭ್ರಮ ಪಡುತ್ತಿದ್ದೇನೆ.!

ಈ ಬಾರಿ ಧರ್ಮಪುರಿ ಮತ್ತು ಕೇರಳದ ತ್ರಿಶೂರ್ ನಿಂದ ಸ್ಪರ್ಧಿಸಿದ್ದಾರೆ ಮತ್ತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಓ ದೇವರೇ... ಈ ಚುನಾವಣೆ ಯಲ್ಲಿಯೂ ನನ್ನನ್ನು ಸೋಲುವಂತೆ ಮಾಡಪ್ಪಾ !!!

- ಅನಿಲ್ ಎಚ್.ಟಿ.