x

(ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಮೇ ೨೧: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ ೪ ರಂದು ಹೊರ ಬೀಳಲಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.ಇಡೀ ದೇಶದಲ್ಲಿ ಗಮನಸೆಳೆದಿದ್ದ,ಜಿದ್ದಾಜಿದ್ದಿನ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯದ ಮಾಲೆ ಬೀಳಲಿದೆ ಎಂಬ ಲೆಕ್ಕಾಚಾರಗಳು ಚುನಾವಣೆ ಮುಗಿದ ದಿನದಿಂದಲೇ ಪ್ರಾರಂಭಗೊAಡಿವೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ವಕ್ತಾರ ಎಂ.ಲಕ್ಷ್ಮಣ್ ಗೌಡ ಅವರು ಕಣಕ್ಕಿಳಿದಿದ್ದರು. ಇದೀಗ ಎರಡು ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ವಿಶೇಷವೇನೆಂದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪೂರ್ಣಪ್ರಮಾಣದಲ್ಲಿ ಗೆಲ್ಲುವ ವಿಶ್ವಾಸವಿಲ್ಲ.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಕೈ ಹಿಡಿದಿದ್ದ ಕೊಡಗಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರಗಳು ಬುಡಮೇಲಾಗಿವೆ. ಕಳೆದ ಎರಡು ದಶಕಗಳ ಬಳಿಕ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ.

ಎರಡೂವರೆ ದಶಕಗಳ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ,ಹುರುಪು ಬಂದಿರುವುದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಂಡುಬAದಿತ್ತು. ವಿಶೇಷವೇನೆಂದರೆ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿತ್ತು. ಅದಲ್ಲದೇ ಶಾಸಕದ್ವಯರು ಕೂಡ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಕೊಡಗಿನಲ್ಲಿ ಬಹುತೇಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇದೇ ಮೊದಲ ಬಾರಿಗೆ ಫೀಲ್ಡ್ ನಲ್ಲಿ ಇಳಿದಿದ್ದು ಕಂಡುಬAದಿತ್ತು. ಸಿ.ಎಂ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅದಲ್ಲದೇ ಕ್ಷೇತ್ರದ ಶಾಸಕರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಕ್ಷೇತ್ರದಿಂದ ಮತ ಲೀಡ್ ಕೊಡುವಂತೆ ಖಡಕ್ ಸೂಚನೆ ಕೂಡ ಕೊಟ್ಟಿದ್ದರು.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಪಡೆದಿದ್ದರು. ೨೦೧೪ರಲ್ಲಿ ಕೊಡಗು ಜಿಲ್ಲೆಯಲ್ಲಿ ೪೨ ಸಾವಿರ ಮತಗಳ ಲೀಡ್ ಪಡೆದಿದ್ದರು.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ೮೫ ಸಾವಿರ ಮತಗಳ ಅಂತರದಿAದ ಕೊಡಗು ಜಿಲ್ಲೆಯಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಕೊಡಗು ಜಿಲ್ಲೆಯ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಿದ್ದರು.

ಮೈಸೂರು ಜಿಲ್ಲೆಯ ಕ್ಷೇತ್ರ ಕೈಕೊಟ್ಟರು ಕೂಡ ಕೊಡಗು ಜಿಲ್ಲೆ ಕೈ ಹಿಡಿಯುತ್ತಿದ್ದ ವಿಶ್ವಾಸದಲ್ಲಿರುತ್ತಿದ್ದ ಬಿಜೆಪಿ ಪಾಳಯಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಮತಗಳ ಮುನ್ನಡೆ ಸಾಧಿಸುವುದು ಕಷ್ಟಕರ ವಿಷಯ ಎಂಬುದು ಚುನಾವಣೆಗೂ ಮುಂಚಿತವಾಗಿ ತಿಳಿದಿತ್ತು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೊಡಗು ಜಿಲ್ಲೆಯಿಂದ ೮೫ ಸಾವಿರ ಮತಗಳ ಅಂತರದಿAದ ಮುನ್ನಡೆ ಪಡೆದಿತ್ತು.

ಆದರೆ ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿ ಪಡೆದಿದ್ದ ಮತಗಳ ಮುನ್ನಡೆ ಪಡೆಯಲು ಸಾಧ್ಯವಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ. ಕಳೆದ ಒಂದು ವರ್ಷದಿಂದ ಕೊಡಗು ಬಿಜೆಪಿ ಶಾಸಕರನ್ನು ಕಳೆದುಕೊಂಡು ಮಂಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ನಾಮದಿಂದ ಸುಲಭದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರವನ್ನೇ ಬಹುತೇಕ ಕಡೆಗಳಲ್ಲಿ ಮಾಡಿಲ್ಲ ಎಂಬ ಮಾತುಗಳು ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ದೊಡ್ಡ ಮಟ್ಟದ ಮುನ್ನಡೆ ಪಡೆಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಚಿತ್ರಣ ಈಗಾಗಲೇ ಬಿಜೆಪಿ ವರಿಷ್ಠರಿಗೆ ತಿಳಿದು ಬಂದಿದೆ.

ಕೊಡಗಿನ ರಾಜಕೀಯ ಸ್ಪಷ್ಟವಾದ ಚಿತ್ರಣವನ್ನು ಅರಿತ ಬಿಜೆಪಿ ವರಿಷ್ಠರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ದೊಡ್ಡಮಟ್ಟದ ಚುನಾವಣಾ ಪ್ರಚಾರ,ಸಮಾವೇಶಗಳು ನಡೆಸಲು ಮುಂದಾಗದೆ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಸಮಯವನ್ನು ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಮೀಸಲಿಟ್ಟಿದ್ದರು.

ಕೊಡಗಿನಲ್ಲಿ ಉತ್ತರ ಪ್ರದೇಶ ಸಿ.ಎಂ ಯೋಗಿ ಆದಿತ್ಯನಾಥ್ ಕಾರ್ಯಕ್ರಮವು ಕೂಡ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯುಂಟಾಗಿತ್ತು. ಕೊಡಗಿನಲ್ಲಿ ಬಿಜೆಪಿಗೆ, ಜೆಡಿಎಸ್ ನೊಂದಿಗಿನ ಮೈತ್ರಿ ಲಾಭವೂ ಕೂಡ ಆದಂತಿಲ್ಲ ಕೊಡಗಿನಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿರುವ ಜೆಡಿಎಸ್ ಶಕ್ತಿ ಕೊಡಗಿನಲ್ಲಿ ಬಿಜೆಪಿಗೆ ಸಿಕ್ಕಂತಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೂತ್‌ನಲ್ಲಿ ಕೂರಲು ಕೂಡ ಏಜೆಂಟರು ಸಿಗದೆ ಇದ್ದ ಪರಿಸ್ಥಿತಿ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಬಾರಿಯ ಲೋಕ ಅಖಾಡದಲ್ಲಿ ಪ್ರತೀ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶಲ್ಯ ಹಾಕಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ದೃಶ್ಯಗಳು ಕಂಡಬAದಿತ್ತು.

೮೫ ಸಾವಿರದಿಂದ ೨೦ ಸಾವಿರಕ್ಕೆ ಕುಸಿಯುವ ಸಾಧ್ಯತೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಿಂದ ಬಿಜೆಪಿ ೮೫ ಸಾವಿರ ಮತಗಳ ಅಂತರದಿAದ ಮುನ್ನಡೆ ಪಡೆದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿ ಪಡೆದಷ್ಟು ಮತಗಳ ಮುನ್ನಡೆ ಪಡೆಯಲು ಸಾಧ್ಯವಿಲ್ಲ ಎಂಬ ಸ್ಪಷ್ಟವಾದ ಮಾಹಿತಿ ಬಿಜೆಪಿ ಪಾಳಯದಲ್ಲಿದೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ಪಕ್ಷಕ್ಕೆ ತಾವು ಕೂಡ ಕೊಡಗು ಜಿಲ್ಲೆಯಲ್ಲಿ ಮುನ್ನಡೆ ಪಡೆಯುವ ವಿಶ್ವಾಸವಿಲ್ಲ.

ಕಾಂಗ್ರೆಸ್ ವಲಯದಲ್ಲಿ ಬಿಜೆಪಿಯ ಲೀಡ್ ಕಡಿಮೆ ಮಾಡಿದ್ದೇವೆ ಎಂಬ ವಿಶ್ವಾಸದ ಮಾತುಗಳು ಕೇಳಿಬರುತ್ತಿವೆ. ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಕೇವಲ ೧೦ ರಿಂದ ೨೦ ಸಾವಿರ ಮತಗಳ ಮುನ್ನಡೆ ಪಡೆಯಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಕಾಂಗ್ರೆಸ್ ಲೆಕ್ಕಾಚಾರದಂತೆ ಯದುವೀರ್ ಒಡೆಯರ್ ಕೊಡಗಿನಲ್ಲಿ ಕೇವಲ ೧೦ ರಿಂದ ೨೦ ಸಾವಿರ ಮತಗಳ ಮುನ್ನಡೆ ಪಡೆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಗೆಲುವು ಕಷ್ಟಕರವಾಗಲಿದೆ.

ಯದುವೀರ್ ಒಡೆಯರ್ ಕೊಡಗಿನಿಂದ ೩೫ ಸಾವಿರಕ್ಕಿಂತ ಅಧಿಕ ಮತಗಳ ಮುನ್ನಡೆ ಸಾಧಿಸಿದರೆ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಪ್ರತೀ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿಯುತ್ತಿದ್ದ ಕಾವೇರಿ ತವರಿನಲ್ಲಿ ಈ ಬಾರಿಯ ಲೋಕ ಸಮರದಲ್ಲಿ ಬಿಜೆಪಿಗೆ ಆತಂಕ ಎದುರಾಗಿದೆ. ಯಾರ ಲೆಕ್ಕ ಪಕ್ಕಾ? ಯಾರ ಲೆಕ್ಕ ಉಲ್ಟಾ! ಎಂಬುದಕ್ಕೆ ಜೂನ್ ೪ರವರೆಗೆ ಕಾಯಬೇಕಾಗಿದೆ.