ಮಡಿಕೇರಿ, ಮೇ ೨೦: ಪ್ರೀತಿಸಿದ ಯುವತಿಯನ್ನು ಕರೆತರಲು ಹೋದ ಸಂದರ್ಭ ಆಕೆಯ ಕುಟುಂಬಸ್ಥರು ಯುವಕನ ಮೇಲೆ ಬಿಸಿ ನೀರು ಎರಚಿ, ಹಲ್ಲೆಗೈದು ಕೊಲೆ ಬೆದರಿಕೆಯೊಡ್ಡಿರುವ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಮನೆಯವರು ಯುವಕನ ವಿರುದ್ಧ ಮನೆಯೊಳಗೆ ಅಕ್ರಮ ಪ್ರವೇಶ ಹಾಗೂ ಕೊಲೆ ಬೆದರಿಕೆಯೊಡ್ಡಿದ ಆರೋಪ ಹೊರಿಸಿ ಪ್ರತಿದೂರು ನೀಡಿದ್ದಾರೆ.

ಮಡಿಕೇರಿ ಗಣಪತಿ ಬೀದಿ ನಿವಾಸಿ ಎಂ.ಐ. ಸುಹೈಲ್ (೨೫) ಗಾಯಗೊಂಡ ಯುವಕನಾಗಿದ್ದು, ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾ. ೧೮ ರಂದು ಈ ಘಟನೆ ನಡೆದಿದೆ. ಗಾಯಗೊಂಡ ಸುಹೈಲ್‌ಗೆ ಆತ ಪ್ರೀತಿಸುತ್ತಿದ್ದ ಯುವತಿ ಕರೆ ಮಾಡಿ ‘ತನಗೆ ಒಂದು ವಾರದಿಂದ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆ. ತನ್ನನ್ನು ಕರೆದುಕೊಂಡು ಹೋಗು’ ಎಂದು ಹೇಳಿದ್ದಾಳೆ. ಈ ಹಿನ್ನೆಲೆ ಆಕೆ ವಾಸವಿದ್ದ ಮದೆನಾಡುವಿನ ಮನೆಗೆ ಮಧ್ಯರಾತ್ರಿ ೧ ಗಂಟೆಗೆ ತೆರಳಿದ ಸಂದರ್ಭ ಕುಟುಂಬಸ್ಥರು ಕಬ್ಬಿಣದ ರಾಡ್, ಕತ್ತಿಯಿಂದ ಹಲ್ಲೆ ಮಾಡಿ, ಬಿಸಿನೀರು ಎರಚಿ, ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಸುಹೈಲ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಭಯ ಕುಟುಂಬಸ್ಥರಿಗೆ ಪ್ರೀತಿಯ ವಿಚಾರ ತಿಳಿದಿತ್ತು ಎಂದು ಸುಹೈಲ್ ದೂರಿನಲ್ಲಿ ಉಲ್ಲೇಖಿಸಿದ್ದು, ಇದರನ್ವಯ ಪ್ರಕರಣ ದಾಖಲಾಗಿದೆ.

ಪ್ರತಿದೂರು : ಯುವಕ ಸುಹೈಲ್ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯ ತಂದೆ ಪ್ರತಿದೂರು ಸಲ್ಲಿಸಿದ್ದು, ಅದರನ್ವಯವೂ ಪ್ರಕರಣ ದಾಖಲಾಗಿದೆ.

ತಾ.೧೮ ರಂದು ಮಧ್ಯರಾತ್ರಿ ೧೨.೩೦ಕ್ಕೆ ಮನೆಯ ಮೇಲ್ಛಾವಣಿ ಬಳಿ ಶಬ್ದ ಕೇಳಿಸಿದ ಹಿನ್ನೆಲೆ ತೆರಳಿ ನೋಡಿದಾಗ ಒಬ್ಬ ವ್ಯಕ್ತಿ ಮನೆಯ ಮೂಲೆಯಲ್ಲಿ ಕುಳಿತಿರುವುದು ಕಂಡುಬAದಿದೆ. ಆತನನ್ನು ವಿಚಾರಿಸಿದಾಗ ಉತ್ತರ ನೀಡದೆ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನ ಪಟ್ಟಾಗ ಸ್ಟೌನಲ್ಲಿ ಕುದಿಯಲು ಇಟ್ಟಿದ್ದ ನೀರು ಆತನ ಮೇಲೆ ಚೆಲ್ಲಿದೆ. ನಂತರ ಆತ ತಪ್ಪಿಸಿಕೊಂಡಿದ್ದು, ಯುವತಿಯ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತಂದೆ ಆರೋಪಿಸಿ ದೂರು ನೀಡಿದ್ದಾರೆ.

ಇಬ್ಬರ ದೂರಿನನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.