ಕುಶಾಲನಗರ, ಮೇ ೨೧ : ಕವಿತೆ ರಚನೆಗೆ ಯಾವುದೇ ಛಂದ, ಬಂಧ, ಪ್ರಾಸ, ಧೋರಣೆ, ವಸ್ತು, ಆಶಯಗಳಂತಹ ಸಿದ್ಧ ರಚನೆಗಳ ಅಗತ್ಯತೆ ಇಲ್ಲ. ವಾಸ್ತವ ನೆಲೆಗಟ್ಟಿನಲ್ಲಿ ಭಾವನಾತ್ಮಕ ಸನ್ನಿವೇಶದಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುವ ಕವಿತೆಗಳು ಗಟ್ಟಿಯಾಗಿ ನೆಲೆಯೂರುತ್ತವೆ ಎಂದು ಗಾಳಿಬೀಡು ಜವಹರ್ ನವೋದಯ ವಿದ್ಯಾಲಯದ ಕನ್ನಡ ಅಧ್ಯಾಪಕರೂ ಆದ ಸಾಹಿತಿ ಮಾರುತಿ ದಾಸಣ್ಣನವರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ- ೫೦ ರ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ೨೦೨೩-೨೪ನೇ ಸಾಲಿನ ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಮೂರ್ನಾಡಿನ ಕವಿಯಿತ್ರಿ, ಶಿಕ್ಷಕಿ ಕೆ.ಜಿ. ರಮ್ಯ ಅವರಿಗೆ ಪ್ರದಾನ ಮಾಡಿ ಕವಿತೆ - ಕಾವ್ಯ ರಚನೆ ಕುರಿತು ಮಾತನಾಡಿದರು. ಪೂರ್ವಾಗ್ರಹದ ಕನ್ನಡಕ ಹಾಕಿಕೊಂಡೇ ಒಂದು ಕವಿತೆಯನ್ನು
(ಮೊದಲ ಪುಟದಿಂದ) ಪರೀಕ್ಷೆಗೊಳಪಡಿಸುವುದು ಅಷ್ಟೊಂದು ಸೂಕ್ತವಲ್ಲ. ಅದನ್ನು ಸುಮ್ಮನೇ ತೆರೆದ ಮನಸ್ಸಿನಲ್ಲಿ ಓದಬೇಕು ಮತ್ತು ಅನುಭವಿಸಬೇಕು ಎಂದರು.
ಕವಯಿತ್ರಿ ಕೆ.ಜಿ. ರಮ್ಯ ಅವರ ‘ದಾಹಗಳ ಮೈ ಸವರುತ್ತಾ’ ಕವನ ಸಂಕಲನದ ಕವನಗಳಲ್ಲಿ ಕವನಗಳು ಶೋಷಿತ ಮಹಿಳೆಯರ ನೋವು- ನಲಿವುಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಹೆಣ್ಣೊಬ್ಬಳೊಳಗಿನ ನೋವು ಮತ್ತು ಆಕ್ರೋಶವನ್ನು ನಿರ್ಭೀತವಾಗಿ ನಿರ್ಭಿಡೆಯಿಂದ ಕಾವ್ಯದಲ್ಲಿ ಅಭಿವ್ಯಕ್ತಿಗೊಳಿಸಲಾಗಿದೆ.
ನೋವುಂಡ ಎದೆ ದನಿಗಳನ್ನೂ, ಬದುಕು ಬದಲಾಗುವ ಸಾಧ್ಯತೆಗಳನ್ನೂ ಪ್ರಕೃತಿಯ ಅನಂತತೆಯನ್ನೂ ಉಸಿರ ಕವಿತೆಗಳು ಕಲಿಸಿ ಕೊಟ್ಟಿವೆ ಎಂದು ದಾಸಣ್ಣನವರ್ ಕವನಗಳ ಕುರಿತು ವಿಶ್ಲೇಷಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಗೌರಮ್ಮ ದತ್ತಿ ಪ್ರಶಸ್ತಿ ಆರಂಭದ ಹಂತದಲ್ಲಿ ಜಿಲ್ಲೆಯಲ್ಲಿದ್ದ ಮಹಿಳಾ ಬರಹಗಾರರ ಕೊರತೆ ಇದೀಗ ನೀಗಿದ್ದು, ಇಂದು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಸಾಹಿತಿಗಳು ಬೆಳೆದಿರುವುದು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಈ ತನಕ ಕೊಡಗಿನ ಗೌರಮ್ಮ ದತ್ತಿ ಪುರಸ್ಕೃತರು ರಚಿಸಿರುವ ಎಲ್ಲಾ ಕೃತಿಗಳನ್ನು ಸಂಗ್ರಹಿಸಿ ೨೫ನೇ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಗೌರಮ್ಮ ಸಮಗ್ರ ಗ್ರಂಥವನ್ನು ಹೊರ ತರುವ ಉದ್ದೇಶ ಹೊಂದಲಾಗಿದೆ. ಈ ಸಮಗ್ರ ಗ್ರಂಥವನ್ನು ಜಿಲ್ಲೆಯ ಶಾಲಾ- ಕಾಲೇಜಿನ ಗ್ರಂಥಾಲಯಕ್ಕೆ ನೀಡುವ ಮೂಲಕ ವಿದ್ಯಾರ್ಥಿಗಳ ಕಥಾ ಸಾಹಿತ್ಯ ರಚನೆಗೆ ಪ್ರೇರೇಪಣೆ ನೀಡಲಾಗುವುದು ಎಂದರು.
ಮುಖ್ಯ ಭಾಷಣ ಮಾಡಿದ ಸಾಹಿತಿ, ಸುನಿತಾ ಲೋಕೇಶ್, ಮಹಿಳಾ ಸಾಹಿತ್ಯದ ಬೆಳವಣಿಗೆ ಹಾಗೂ ಕೊಡಗಿನ ಕಥೆಗಾರ್ತಿ ಗೌರಮ್ಮ ಅವರ ಕಥೆಗಳ ಕುರಿತು ವಿವರಣೆ ನೀಡುತ್ತಾ, ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಬರಹಗಾರರ ಸಂಖ್ಯೆ ವೃದ್ಧಿಸುತ್ತಿರುವುದು ಶ್ಲಾಘನೀಯ ವಾದುದು ಎಂದರು. ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಥಾ ಸ್ಪರ್ಧೆಯ ವಿಜೇತರಿಗೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಸುನಿಲ್ಕುಮಾರ್ ಬಹುಮಾನ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಂ. ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ.ಸಾ.ಪ. ಸಮಿತಿ ನಿರ್ದೇಶಕ ಮೆ.ನಾ. ವೆಂಕಟನಾಯಕ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷೆ ಕಡ್ಲೇರ ತುಳಸಿ, ಕುಶಾಲನಗರ ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್, ಕೋಶಾಧಿಕಾರಿ ಕೆ.ವಿ. ಉಮೇಶ್, ಹೆಬ್ಬಾಲೆ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎನ್. ಮೂರ್ತಿ, ಕವಿಯಿತ್ರಿ ಕುಟುಂಬ ಸದಸ್ಯರು ಸೇರಿದಂತೆ ಮಹಿಳಾ ಸಾಹಿತಿಗಳು, ಬರಹಗಾರರು, ಕ.ಸಾ.ಪ. ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಎಸ್.ಆರ್. ಚರಣರಾಜ್ ಸ್ವಾಗತಿಸಿದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್ ವಂದಿಸಿದರು. ಡಾ. ಎಸ್. ಸುನಿಲ್ ಕುಮಾರ್ ನಿರ್ವಹಿಸಿದರು. ಕವಯಿತ್ರಿ ರಮ್ಯ ಅವರ ಕವನಗಳನ್ನು ಸೌಮ್ಯಶೆಟ್ಟಿ ಮತ್ತು ಮಂಜುಳಾ ಚಿತ್ತಾಪುರ್ ವಾಚಿಸಿದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ದೇಶದ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಮತ್ತು ಇತರರ ಸ್ಮರಣಾರ್ಥ ಸಭೆಯಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.