ನಿಸರ್ಗ ಎಂಬುದು ವಿಸ್ಮಯದ ಗೂಡು. ನಿಸರ್ಗ ಎಂದರೆ ಪ್ರಶ್ನಾತೀತ ವಿಸ್ಮಯ. ಹಸಿರು ಕಾನನದ ನಡುವೆ ಅಸಂಖ್ಯಾತ ಜೀವಜಂತುಗಳ ಕಲರವ.

ಸುತ್ತಲೂ ಹಚ್ಚ ಹಸಿರಿನ ಕಾಡು. ಗಿಡ ಬಳ್ಳಿಯ ಸೆರಗಿನಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು. ಜರ‍್ರೆಂದು ಓಡುವ ಜಿಂಕೆಗಳು, ಘರ್ಜಿಸುವ ಹುಲಿ-ಸಿಂಹಗಳು, ಸೊಂಡಿಲಾಡಿಸುತ್ತಾ ಘೀಳಿಡುವ ಆನೆ ಒಂದೆಡೆಯಾದರೆ, ಕೋಗಿಲೆಗಳ ಇಂಪು, ನವಿಲುಗಳ ನರ್ತನ ಮತ್ತೊಂದೆಡೆ. ನದಿ-ತೊರೆ, ಝರಿಗಳ ಝುಳು... ಝುಳು... ನಿನಾದ. ಎಲ್ಲವೂ ರುದ್ರ ರಮಣೀಯವೇ.

ವಿಸ್ಮಯಗಳ ತವರೂರು

ಈ ಭೂಮಿಯಲ್ಲಿ ಅದೆಷ್ಟು ಜೀವಜಂತುಗಳಿವೆಯೋ, ಲೆಕ್ಕಕ್ಕೆ ಸಿಕ್ಕವು ಒಂದಷ್ಟಾದರೆ, ಲೆಕ್ಕದ ಪರಿಧಿಗೇ ಬಾರದವು ಮತ್ತೆಷ್ಟೋ. ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವ ವೈವಿಧ್ಯಗಳಿಂದಾಗಿ. ನಿಸರ್ಗ ಎಂದರೆ ವಿಸ್ಮಯಗಳ ತವರೂರು. ಆಹಾರ ಸರಪಳಿಯಲ್ಲಿ ಯಾವುದೇ ಕೊಂಡಿ ಕಳಚಿದರೂ ಈ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಆಹಾರ ಸರಪಳಿಯ ಕೊಂಡಿ ಎಂದಿಗೂ ಮುರಿಯದಂತೆ ನೋಡಿಕೊಳ್ಳುತ್ತಿರುವ ಸೃಷ್ಟಿಶಕ್ತಿಯೆದುರು ಮನುಷ್ಯ ತಲೆಬಾಗಬೇಕು.

ಪ್ರತಿ ವರ್ಷ ಮೇ ೨೨ ರಂದು ವಿಶ್ವ ಜೀವ - ವೈವಿಧ್ಯ ದಿನ. (ವರ್ಲ್ಡ್ ಬಯೋ ಡೈವರ್ಸಿಟಿ ಡೇ)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ. ರಾಷ್ಟಿçÃಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಈ ದಿನ ಸಂಕಲ್ಪ ಮಾಡಲಾಗುತ್ತದೆ.

೨೦೨೪ ರ ಶೀರ್ಷಿಕೆ: ‘ಯೋಜನೆಯ ಭಾಗವಾಗಿರಿ’

‘ಯೋಜನೆಯ ಭಾಗವಾಗಿರಿ’ (ಬಿ ಪಾರ್ಟ್ ಆಫ್ ದಿ ಪ್ಲಾನ್) ಎಂಬ ಶೀರ್ಷಿಕೆಯಡಿ ೨೦೨೪ ರ ಸಾಲಿನ ವಿಶ್ವ ಜೀವ - ವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ. ನಾವು ನಮ್ಮಲ್ಲಿ ಪ್ರತಿಯೊಬ್ಬರೂ ಪರಿಸರ ವ್ಯವಸ್ಥೆಯ ಪರಿಹಾರದ ಒಂದು ಭಾಗವಾಗಿ ಪರಿಸರವನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂಬುದು ಈ ಶೀರ್ಷಿಕೆಯ ಮಹತ್ವವಾಗಿದೆ.

ಇದು ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಸಂರಕ್ಷಿಸುವಲ್ಲಿ ವ್ಯಕ್ತಿಗಳ ಸಾಮೂಹಿಕ ಮತ್ತು ಹಂಚಿಕೆಯ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.

ಇದು ನಮ್ಮ ಭೂಮಿಯ ಮೇಲಿನ ಜೀವ ವೈವಿಧ್ಯ ಸಮಸ್ಯೆಗಳ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಅಂದರೆ, ಜೈವಿಕ ವೈವಿಧ್ಯತೆಯು ವಿವಿಧ ರೀತಿಯ ಸಸ್ಯಗಳು, ಪ್ರಾಣಿಗಳು, ಕಾಡುಗಳು ಮತ್ತು ಮರುಭೂಮಿಗಳಂತಹ ವಿವಿಧ ಪರಿಸರ ವ್ಯವಸ್ಥೆಗಳನ್ನು ಸೂಚಿಸುತ್ತದೆ.

ಪರಿಸರದಲ್ಲಿನ ಜೈವಿಕ ಸಂಪನ್ಮೂಲಗಳನ್ನು ರಕ್ಷಿಸುವ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ದಿಸೆಯಲ್ಲಿ ಹಾಗೂ ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವಸಂಸ್ಥೆಯು ಈ ದಿನವನ್ನು ಮುಡಿಪಾಗಿಟ್ಟಿದೆ.

ಜಾಗತಿಕವಾಗಿ ಪರಿಸರ ವ್ಯವಸ್ಥೆಯಲ್ಲಿ ನಾವು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜೀವ ವೈವಿಧ್ಯ ಸಂರಕ್ಷಣೆಯು ಅತ್ಯಂತ ಪ್ರಸ್ತುತವಾಗಿದೆ.

ಜೀವ ವೈವಿಧ್ಯಕ್ಕೆ ಧಕ್ಕೆಯಾದಾಗ, ಹವಾಮಾನ ಬದಲಾವಣೆಯು ಒಂದು ಪ್ರಮುಖ ಬೆದರಿಕೆಯಾಗಿ ಉಳಿದಿದೆ. ಆದರೂ, ಮಾನವನು ಸೇರಿದಂತೆ ಸಕಲ ಜೀವಿಗಳ ಉಳಿವಿಗೆ ಜೀವ ವೈವಿಧ್ಯವು ಅತ್ಯಗತ್ಯ ಎಂಬ ವಾಸ್ತವದ ಹೊರತಾಗಿಯೂ, ಅದರ ದೊಡ್ಡ ಬೆದರಿಕೆಗೆ ಮಾನವರಾದ ನಾವೇ ಜವಾಬ್ದಾರರು ಎಂಬುದನ್ನು ನಾವು ಮನಗಾಣಬೇಕಿದೆ.

೧೯೯೩ ರಿಂದ ಪ್ರತಿ ವರ್ಷ ಮೇ ೨೨ ರಂದು ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜನ ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತ್ತಿದೆ.

ಜೀವಿ ವೈವಿಧ್ಯ

‘ಜೀವಿ ವೈವಿಧ್ಯ’ ಎಂಬುದು ನಮ್ಮ ಮತ್ತು ಎಲ್ಲಾ ಜೀವಿಗಳು ಬದುಕುಳಿಯುವ ವೇದ್ಯವಾಗಿದೆ. ಜೀವಿ ವೈವಿಧ್ಯ ಜಾಸ್ತಿ ಇದ್ದ ತಾಣವೆಲ್ಲ ನಿಸರ್ಗದ ದೃಷ್ಠಿಯಿಂದ ಶ್ರೀಮಂತ ತಾಣಗಳು. ಅವು ಜೀವಸಂಪತ್ತಿನ ಖಜಾನೆಗಳು. ಅವು ಅಷ್ಟೇ ಸೂಕ್ಷö್ಮವಾದ ತಾಣಗಳೂ ಹೌದು. ಅವುಗಳನ್ನು ಭವಿಷ್ಯದ ದೃಷ್ಠಿಯಿಂದ ಜೋಪಾನವಾಗಿ ಕಾಪಾಡಬೇಕು. ಮನುಷ್ಯ ತನ್ನ ಆಸೆಯಿಂದ ಭೂಮಿ ಮತ್ತು ಜೀವತಾಣಗಳ ಮೇಲೆ ಬಲಾಢ್ಯವಾಗಿ ದಾಳಿಯಿಟ್ಟ ಕಾರಣ ಪ್ರಪಂಚದ ಈ ಶ್ರೀಮಂತ ತಾಣಗಳು ಧ್ವಂಸ ಆಗುತ್ತಿವೆ. ಅವು ನಾಶವಾಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಜೀವ-ವೈವಿಧ್ಯದ ತಾಣ

ಈ ವಿಸ್ಮಯಗಳ ತವರೂರಾದ ಧರಿತ್ರಿಯಲ್ಲಿ ಅಗಣಿತವಾದ ಜೀವ-ಸಂಕುಲಗಳು ಜನ್ಮವೆತ್ತಿವೆ. ಇದೇ ನಮ್ಮ ಜೀವ-ವೈವಿಧ್ಯದ ತಾಣ. ಈ ಪ್ರಕೃತಿಯ ಸಂಪನ್ಮೂಲಗಳು, ಸಸ್ಯ, ಪ್ರಾಣಿ ಹಾಗೂ ಜೀವಿ ಸಂಕುಲಗಳ ಸೊಬಗನ್ನು ನೆನಪಿಸಿ, ಸಂರಕ್ಷಣೆಗೆ ಪಣತೊಡುವ ದಿನವೇ ಜೀವ ವೈವಿಧ್ಯ ದಿನವಾಗಿದೆ.

ಮಾನವನ ಚಟುವಟಿಕೆಗಳಿಂದ ಉಂಟಾಗುತ್ತಿರುವ ಜೀವ ವೈವಿಧ್ಯತೆಯ ನಷ್ಟವನ್ನು ತಗ್ಗಿಸಬೇಕಿದೆ. ಆದ್ದರಿಂದ, ಜೀವ ವೈವಿಧ್ಯ ದಿನವು ಪರಿಸರ ಸಮಸ್ಯೆಯನ್ನು ನಿಭಾಯಿಸಲು ಮತ್ತು ಜೀವ ವೈವಿಧ್ಯದ ನಷ್ಟವನ್ನು ಪುನರ್‌ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಅAದರೆ ಪ್ರಕೃತಿಯಲ್ಲಿ ನಮ್ಮ ಸಮಸ್ಯೆಗೆ ಪರಿಹಾರಗಳಿವೆ. ಜೀವಿಗಳ ಸಂರಕ್ಷಣೆ, ಮನುಷ್ಯನ ಆರೋಗ್ಯ, ಜಲ ಸುರಕ್ಷತೆ, ಹವಾಮಾನ ವೈಪರೀತ್ಯ, ಆಹಾರ ಸುರಕ್ಷತೆ, ವಿಪತ್ತು ನಿರ್ವಹಣೆ, ಆರ್ಥಿಕ ಬೆಳವಣಿಗೆ - ಹೀಗೆ ಏನೇ ಇದ್ದರೂ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಪ್ರಕೃತಿಯಲ್ಲೇ ಇದೆ.

ಜೀವ ವೈವಿಧ್ಯ ಸಂರಕ್ಷಣೆ

ಜೀವ ವೈವಿಧ್ಯವನ್ನು ಸಂರಕ್ಷಿಸುವುದು ಎಂದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಕಾಪಾಡುವುದು. ಅದಕ್ಕೆಂದೇ ನಾವು ನಮ್ಮ ಜೀವ - ವೈವಿಧ್ಯ, ಅರಣ್ಯ, ವನ್ಯಜೀವಿಗಳು ಮತ್ತು ಸಮುದ್ರವನ್ನು ರಕ್ಷಿಸಬೇಕಿದೆ. ಯಾವುದೇ ಜೀವ ಸಂಕುಲ ಅಳಿವಿನಂಚಿಗೆ ಹೋಗುವುದನ್ನು ತಡೆಗಟ್ಟುವುದು ನಮ್ಮ ಗುರುತರ ಜವಾಬ್ದಾರಿಯಾಗಿದೆ.

ಅಂದರೆ ನಾವು ನಿಸರ್ಗವನ್ನು ಆರೋಗ್ಯಕರವಾಗಿಟ್ಟುಕೊಂಡರೆ, ಅದು ನಮ್ಮ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲಿದೆ. ಅಂದರೆ, ಜೀವ ವೈವಿಧ್ಯವನ್ನು ನಾಶಪಡಿಸಿ ನಡೆಸುವ ಅಭಿವೃದ್ಧಿ ಎಂದರೆ ಅದು ಅಭಿವೃದ್ಧಿಯೇ ಅಲ್ಲ. ಆದ್ದÀರಿಂದ ದೀರ್ಘಕಾಲಿಕವಾಗಿ ನಾಶವೇ ಖಚಿತ. ಇದರಿಂದ ನಾವು ತಿಳಿದುಕೊಳ್ಳಬೇಕಾದುದು ಏನೆಂದರೆ, ಪ್ರಕೃತಿಯ ಜೀವ ವೈವಿಧ್ಯದ ಮೇಲೆ ಮನುಷ್ಯ ನಡೆಸುವ ಆಕ್ರಮಣ, ಮನುಷ್ಯಕುಲವನ್ನೇ ನಾಶ ಮಾಡುತ್ತದೆ ಎಂಬುದನ್ನು ನಾವು ಮನಗಾಣಬಹುದಾಗಿದೆ.

ಜೀವ ಸರಪಳಿ

ನಾವು ‘ಇನ್ನಾದರೂ ನಮ್ಮ ಜೀವ ವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಉಳಿಸಲು ಪಣ ತೊಡದಿದ್ದಲ್ಲಿ ಮಾನವ ಜೀವಿ ಕೂಡ ಸರ್ವ ನಾಶವಾಗುವ ದಿನಗಳು ದೂರವಿಲ್ಲ’ ಎಂಬ ಎಚ್ಚರಿಕೆಯ ಗಂಟೆಯನ್ನು ವಿಶ್ವಸಂಸ್ಥೆ ನಮಗೆ ನೀಡಿದೆ. ಈ ಭೂಮಿಯಲ್ಲಿ ಒಂದು ಸಣ್ಣ ಗಿಡಮೂಲಿಕೆಯಿಂದ ಹಿಡಿದು ಸಣ್ಣ ಕ್ರಿಮಿಕೀಟಗಳು, ಸೂಕ್ಷಾö್ಮಣು ಜೀವಿಗಳು ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊAದು ಹೆಣೆದುಕೊಂಡಿವೆ. ಇವೆಲ್ಲಾ ಆಹಾರ ಸರಪಳಿಯ ಕೊಂಡಿಯಾಗಿವೆ. ಹುಲ್ಲಿನಿಂದ ಹಿಡಿದು ಮಾನವನವರೆಗೂ, ಕೀಟದಿಂದ ಹದ್ದಿನವರೆಗೂ ಆಹಾರ ಸರಪಳಿ ಹರಡಿಕೊಂಡಿದೆ. ಇವುಗಳಲ್ಲಿ ಒಂದು ಕೊಂಡಿ ಕಳಚಿ ನಾಶವಾದರೂ ಇಡೀ ಜೀವ ಸರಪಳಿಯೇ ನಾಶವಾಗುತ್ತದೆ.

ಜೀವ ವೈವಿಧ್ಯವನ್ನು ಕಾಪಾಡುವ, ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ನಾವು ಬದ್ಧರಾಗಬೇಕಿದೆ. ಜೀವ ವೈವಿಧ್ಯತೆಯ ವಿನಾಶವನ್ನು ಕಡಿಮೆ ಮಾಡಿ ಉತ್ತೇಜಿಸಲು ಕಳೆದ ದಶಕವನ್ನು ಜೀವ ವೈವಿಧ್ಯತೆ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.

ಜೀವಜಗತ್ತು

‘ಭುವಿಯ ಭಂಡಾರ’: ಭೂಮಿಯ ಜೀವ ಜಗತ್ತು ಅಗಣಿತ ಜೀವ ಭಂಡಾರ. ‘ಭುವಿಯ ಭಂಡಾರ’ - ಇದು ಜೀವ- ವೈವಿಧ್ಯಗಳನ್ನು ಪರಿಚಯಿಸುವ ತಾಣ. ಭಾರತ ದೇಶದಲ್ಲಿ ಜೀವಿ ವೈವಿಧ್ಯತೆಯು ಶ್ರೀಮಂತಿಕೆಯಿAದ ಕೂಡಿದೆ. ದೇಶದ ಪಶ್ಚಿಮಘಟ್ಟ ಪ್ರದೇಶವು ಜೀವಿ ವೈವಿಧ್ಯತೆಯ ಸೂಕ್ಷö್ಮತಾಣ ಎಂದೆನಿಸಿದೆ.

ಅದರಲ್ಲೂ ಕರ್ನಾಟಕವು ಜೀವ-ವೈವಿಧ್ಯತೆಗಳ ಬೀಡು. ನಮ್ಮ ನಾಡಿನ ಜೀವ ವೈವಿಧ್ಯತೆ, ಗಿರಿಕಂದರಗಳು, ನಿತ್ಯ ಹರಿದ್ವರ್ಣಗಳ ಕಾಡು, ವನ್ಯಜೀವಿಗಳ ಸೊಬಗು ಹಾಗೂ ಸೌಂದರ್ಯ ವರ್ಣಾತೀತವಾದುದು. ನಮ್ಮ ಕನ್ನಡ ನಾಡು ಜೀವಿ ವೈವಿಧ್ಯಗಳು ಮತ್ತು ಪ್ರಾಣಿ-ಸಂಕುಲಕ್ಕೆ ಜೀವನೆಲೆಯನ್ನು ಒದಗಿಸಿದೆ.

ಮನುಷ್ಯ ನಿಸರ್ಗದ ಒಂದು ಭಾಗ. ಇತರ ಜೀವಿಗಳಿಗೆ ನಿಸರ್ಗದ ಮೇಲೆ ಎಷ್ಟು ಹಕ್ಕು ಇದೆಯೋ ಮಾನವನಿಗೂ ಅಷ್ಟೇ ಹಕ್ಕು ಇದೆ. ಆದರೆ ಮಾನವ ನಿಸರ್ಗವನ್ನು ತನ್ನ ಆಸ್ತಿ ಮಾಡಿಕೊಳ್ಳಲು ಹೊರಟು ಭೂಮಿಯ ಹಲವು ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಈ ವೈವಿಧ್ಯ ನಾಶ ಆಹಾರ ಸರಪಳಿಯನ್ನು ಅವಲಂಬಿಸಿದೆ.

ಒಂದು ದಿನ ಇದು ತನಗೇ ಕುತ್ತು ತರುತ್ತದೆ ಎಂಬುದನ್ನು ಮಾನವ ಅರಿತಂತಿಲ್ಲ. ಜೀವ- ವೈವಿಧ್ಯ ನಾಶದಿಂದ ಪರಿಸರದ ಮೇಲೆ ಹಾಗೂ ಮಾನವನ ಜೀವನ ಹಾಗೂ ಪ್ರಾಣಿ-ವನ್ಯ ಜೀವನದ ಮೇಲೆ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬ ಬಗ್ಗೆ ನಾವು ತುರ್ತು ಗಮನಹರಿಸದಿದ್ದಲ್ಲಿ ಭವಿಷ್ಯದಲ್ಲಿ ಗಂಡಾAತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಪ್ರಕೃತಿಯಲ್ಲಿ ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಅರಣ್ಯ, ನದಿ, ಕೆರೆ, ಸಮುದ್ರ, ಅಂತರ್ಜಲ, ಪರ್ವತ ಶ್ರೇಣಿ, ವಾಯುಮಂಡಲ ಎಲ್ಲವೂ ನಾನಾ ಕಾರಣಗಳಿಂದಾಗಿ ದುಃಸ್ಥಿತಿಗೆ ಬರುತ್ತಿವೆ. ಇಡೀ ಭೂಮಂಡಲದ ಜೀವಗೋಲ ಅಪಾಯಕ್ಕೆ ಸಿಲುಕುತ್ತಿದೆ. ಅನೇಕ ವಿಧದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಇಡೀ ಜೀವಿ- ಸಂಕುಲವೇ ನಾಶವಾಗುವ ಅಪಾಯ ತಪ್ಪಿದ್ದಲ್ಲ ಎಂಬ ಅಂಶವನ್ನು ನಾವು ಮನಗಾಣಬೇಕಿದೆ. ನೆಲ, ಜಲ, ವಾಯು ಮಾಲಿನ್ಯದಿಂದ ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ.

ನಾವು ಭವಿಷ್ಯತ್ತಿನ ದೃಷ್ಠಿಯಲ್ಲಿ ಹಾಗೂ ಉತ್ತಮ ಜೀವ ವೈವಿಧ್ಯ ಸಂರಕ್ಷಣೆಗಾಗಿ ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ವೈವಿಧ್ಯ ಸಂರಕ್ಷಣೆಗೆ ಪಣತೊಡಬೇಕಿದೆ.

- ಟಿ.ಜಿ. ಪ್ರೇಮಕುಮಾರ್, ಮುಖ್ಯ ಶಿಕ್ಷಕರು,

ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು. ಮೊ. ೯೪೪೮೫ ೮೮೩೫೨