ಪೊನ್ನಂಪೇಟೆ, ಮೇ ೨೧: ಕೆಸರಿನೋಕುಳಿಯ ಹಬ್ಬವೆಂದು ಪ್ರಸಿದ್ದಿ ಪಡೆದಿರುವ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ ) ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿAದ ನಡೆಯಿತು.

ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಮತ್ತು ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸುವ ಸಮಯದಲ್ಲಿ ಹತ್ತಿರದಲ್ಲಿರುವ ದೇವರ ಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರು ಎರಚಿಕೊಂಡು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಂಭ್ರಮಿಸಿದರು.

ಊರಿನವರು ಪರಸ್ಪರ ಕೆಸರು ಎರಚಿಕೊಂಡರು, ಹಬ್ಬವನ್ನು ಸಂಭ್ರಮಿಸಲು ಬಂದ ಅತಿಥಿಗಳಿಗೆ ಕೆಸರು ಎರಚಬಾರದು ಎಂಬ ನಿಯಮವನ್ನು ಅಳವಡಿಸಿಕೊಂಡಿದ್ದು, ಹಬ್ಬಕ್ಕೆ ಬಂದ ನೆಂಟರಿಗೆ ಮುಕ್ತವಾಗಿ ಊರಿನವರೊಂದಿಗೆ ಬೆರೆಯಲು ಅವಕಾಶ ಕಲ್ಪಿಸಿ, ಅತಿಥಿಗಳು ಎಂದು ಗುರುತಿಸಲು ಅವರಿಗೆ ಬೆತ್ತದ ಕೋಲುಗಳನ್ನು ನೀಡಲಾಗಿತ್ತು. ಬೆತ್ತದ ಕೋಲು ಹಿಡಿದವರಿಗೆ ಕೆಸರು ಹಾಕುವಂತಿಲ್ಲ. ಊರಿನವರು ಕೆಸರನ್ನು ಅತಿಥಿಗಳ ಮೇಲೆ ಹಾಕಿದರೆ ಅವರಿಗೆ ದಂಡ ಬೀಳುತ್ತದೆ ಎಂಬ ಕಟ್ಟುಪಾಡುಗಳು ಈ ಹಬ್ಬದಲ್ಲಿ ಇರುವುದರಿಂದ, ಪರ ಊರಿಂದ ಬಂದವರು ನಮ್ಮ ಮೈ ಮೇಲೆ ಕೆಸರು ಬೀಳುತ್ತದೆ ಎಂಬ ಯಾವುದೇ ಆತಂಕವಿಲ್ಲದೆ ಊರಿನವರೊಂದಿಗೆ ಕೆಸರಿನ ಓಕುಳಿಯ ಹಬ್ಬವನ್ನು ಸಂಭ್ರಮಿಸಿದರು.

ಮೊದಲಿಗೆ ಚಮ್ಮಟ್ಟಿರ, ಮೂಕಳೇರ ಬಲ್ಯಮನೆಯಿಂದ ತಲಾ ಒಂದೊAದು ಕುದುರೆ ಹಾಗೂ ದೇವರ ಮೊಗ ಶೃಂಗಾರಗೊAಡು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ದೇವಸ್ಥಾನಕ್ಕೆ ತೆರಳುವ ಮೂಲಕ ಹಬ್ಬಕ್ಕೆ ಭಕ್ತಿಯ ಮೆರುಗು ನೀಡಿತು. ತಾ. ೧೧ಕ್ಕೆ ದೇವಕಟ್ಟ್ ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳು ಆಚರಣೆಯಲ್ಲಿದ್ದು ಸರಿಯಾಗಿ ಏಳು ದಿನಕ್ಕೆ ದೇವ ಕಟ್ಟನ್ನು ಸಡಿಲಿಸಿ, ಎರಡು ದಿನಗಳು ಅಚರಿಸುವ ಹಬ್ಬಕ್ಕೆ ಚಾಲನೆ ದೊರೆಯಿತು.

ಮೊದಲ ದಿನ ಮಧ್ಯಾಹ್ನ ಊರು ತಕ್ಕರಾದ ಚಮ್ಮಟ್ಟಿರ ಕುಟುಂಬದ ಬಲ್ಯಮನೆಯಿಂದ ಪೊಲವಂದೆರೆ ಹೊರಟು, ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲದಲ್ಲಿ ವಿವಿಧ ಆಚರಣೆಗಳು ನಡೆದವು. ಊರಿನ ನಿಗದಿತ ಸ್ಥಳಗಳಿಗೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದ ಬಳಿಕ ಮೂಕಳೇರ ಬಲ್ಯಮನೆಗೆ ಹೋಗುವ ರಸ್ತೆಯಲ್ಲಿರುವ ಪೊಲವಪ್ಪ ಕೋಟದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು. ಉಪವಾಸ ವೃತದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಪೊಲವಪ್ಪ ದೇವಸ್ಥಾನಕ್ಕೆ ಆಗಮಿಸಿ, ವಿವಿಧ ಆಚರಣೆಯನ್ನು ನಡೆಸಿ, ಮಣ್ಣಿನಿಂದ ಮಾಡಲಾದ ನಾಯಿಯನ್ನು ಹರಕೆ ನೀಡಲಾಯಿತು.

ಪೊನ್ನಂಪೇಟೆ, ಗೋಣಿಕೊಪ್ಪ ಮುಖ್ಯ ರಸ್ತೆಯ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅವುಲ್ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದ ವಿವಿಧ ವ್ರತಗಳನ್ನು ಪಾಲಿಸುವ ಇಬ್ಬರು ಕೊಡವ ಪೂಜಾರಿಗಳು ಊರಿನ ನಿಗದಿತ ಸ್ಥಳದಲ್ಲಿ ದೇವರ ಕೆರೆಯಲ್ಲಿ ಸ್ನಾನ ಮಾಡಿ ಅಲ್ಲಿಯೇ ಬೆಂಕಿಯನ್ನು ಹಾಕಿ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದ ಮಾಡಿ, ಒನಕೆಯಿಂದ ಕುಟ್ಟಿ ಅವಲಕ್ಕಿ ಮಾಡುತ್ತಾರೆ. ಇದಕ್ಕೆ ಒಂದಷ್ಟು ಬೆಲ್ಲ ಹಾಗೂ ಬಾಳೆಹಣ್ಣು ಸೇರಿಸಿ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತಂದು ದೇವರಿಗೆ ನೈವೇದ್ಯ ಅರ್ಪಿಸಿ, ಈ ವಿಶಿಷ್ಟ ರೀತಿಯ ಅವುಲ್ ಪ್ರಸಾದವನ್ನು ಭಕ್ತಾದಿಗಳಿಗೆ ನೀಡಲಾಯಿತು. ಎರಡನೇಯ ದಿನದ ಕೆಸರು ಎರಚಾಟದ ನಂತರ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸುವುದರೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಈ ಎಲ್ಲಾ ಆಚರಣೆಗಳಿಗೂ ದೇವಸ್ಥಾನಗಳಲ್ಲಿ ಚಮ್ಮಟ್ಟಿರ ಹಾಗೂ ಮೂಕಳೇರ ಕುಟುಂಬದ ಸದಸ್ಯರೇ ಪೂಜಾರಿಗಳಾಗಿ ಕಾರ್ಯನಿರ್ವಹಿಸುವುದು ಈ ಹಬ್ಬದ ವಿಶೇಷತೆಯಾಗಿದೆ. ದೇವಾಲಯದ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ಮೂಕಳೇರ ರಮೇಶ್, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು, ಊರಿನ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. - ಚನ್ನನಾಯಕ