೨೫೦೦ ವರ್ಷಗಳ ಹಿಂದೆ ಜಗತ್ತಿನ ಅಂಧಕಾರವನ್ನು ಕಳೆಯಲೆಂದೇ ವೈಶಾಖ ಶುದ್ಧ ಪೂರ್ಣಿಮೆಯ ದಿನದಂದು ಒಬ್ಬ ಮಹಾಪುರುಷನ ಜನನವಾಗುತ್ತದೆ. ಸಿದ್ಧಾರ್ಥನಾಗಿ ಜನಿಸಿದವ, ತನ್ನ ಸ್ವಪ್ರಜ್ಞೆಯಿಂದಲೇ ಬುದ್ಧನಾಗುವ ಅಮೃತ ಘಳಿಗೆ ಅವನ ಜ್ಞಾನೋದಯ, ಕೊನೆಗೆ ಅವನ ಪರಿನಿರ್ವಾಣವೂ ಕಾಕತಾಳೀಯವೆಂಬAತೆ ಪೂರ್ಣಿಮೆಯ ದಿನವೇ ಸಂಭವಿಸಿದ್ದು ಊಹೆಗೂ ನಿಲುಕದ ಸಂಗತಿ. ಆತನೇ ಏಷ್ಯಾದ ಬೆಳಕು ಎಂದೇ ಕರೆಯಲ್ಪಡುವ ಮಹಾನ್ ಸಂತ ಗೌತಮ ಬುದ್ಧ.

ಪ್ರಪಂಚದಾದ್ಯAತ ಲಕ್ಷಾಂತರ ಬೌದ್ಧರು ಈ ದಿನವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಬುದ್ಧ ಪೂರ್ಣಿಮೆಯಾಗಿ ಆಚರಿಸುತ್ತಾರೆ. ಬುದ್ಧನ ಬಾಲ್ಯ, ಯೌವನದಲ್ಲಿ ನಡೆದ ಘಟನೆಗಳು, ಅವನು ತೆಗೆದುಕೊಂಡ ಬದುಕಿನ ನಿಲುವುಗಳು, ತನ್ನಲ್ಲಿ ಒಡಮೂಡಿದ ಬದುಕಿನ ಬಗೆಗಿನ ಸಂಶಯಗಳು, ಅದರ ಪರಿಹಾರಕ್ಕಾಗಿ ತಾನೇ ಸ್ವತಃ ಪಟ್ಟ ಪರಿಶ್ರಮ, ತನ್ನದೇ ಪರಿಶ್ರಮದಲ್ಲಿ ಕೊನೆಗೂ ಕಂಡುಕೊAಡ ಉತ್ತರ, ತನ್ನಂತೆಯೇ ಇತರರೂ ತಮ್ಮ ತಮ್ಮ ಪ್ರಶ್ನೆಗಳಿಗೆ ತಾವೇ ಉತ್ತರ ಕಂಡುಕೊಳ್ಳುವAತೆ ಉಪದೇಶ ನೀಡುತ್ತಿದ್ದ ಪರಿಯೆಲ್ಲವೂ ಜಗತ್ತಿನ ಮುಂದೆ ಸ್ಫಟಿಕದಷ್ಟೇ ಪರಿಶುದ್ಧವಾಗಿ ಪ್ರತಿಬಿಂಬಿತವಾಗಿದೆ. ಬುದ್ಧನೆಂದರೆ ಒಬ್ಬ ತತ್ವಜ್ಞಾನಿ, ಒಬ್ಬ ವಿಜ್ಞಾನಿ, ಒಬ್ಬ ಶಿಕ್ಷಣತಜ್ಞ, ಒಬ್ಬ ಸಮಾಜ ಸೇವಕ, ಒಬ್ಬ ಪ್ರಗತಿಶೀಲ ಚಿಂತಕ- ಹೀಗೇ ನಾನಾ ರೀತಿಯಲ್ಲಿ ಅವನ ವಿಚಾರಗಳ ಆಧಾರದ ಮೇಲೆ ನಮ್ಮನ್ನು ಆವರಿಸಿಕೊಂಡಿದ್ದಾನೆ.

ಜಗತ್ತಿನ ಸಾರ್ವಕಾಲಿಕ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೆöÊನ್ ಜಗತ್ತಿನ ಅಷ್ಟೂ ಧರ್ಮಗಳನ್ನು ಕೂಲಂಕಷವಾಗಿ ಅವಲೋಕಿಸಿದ ಮೇಲೆ ಬೌದ್ಧ ಧರ್ಮವನ್ನು ಜಗತ್ತಿನ ಧರ್ಮವೆಂದು ಕರೆಯುತ್ತಾರೆ. ಪರಿವರ್ತನೆಯೇ ಜಗತ್ತಿನ ನಿಯಮ ಎಂದು ಸಾರಿದ ಬುದ್ಧನ ತತ್ತ್ವಗಳೆಲ್ಲವೂ ವೈಜ್ಞಾನಿಕವಾಗಿಯೂ ಸಾಂದರ್ಭಿಕವಾಗಿಯೂ ಸಾಬೀತಾದ ಹಿನ್ನೆಲೆಯಲ್ಲಿ ಐನ್‌ಸ್ಟೆöÊನ್‌ನ ಪ್ರತಿಪಾದನೆಯಿದು.

ಬುದ್ಧನೇ ಹೇಳುವಂತೆ ಬುದ್ಧ ಎನ್ನುವುದು ಒಂದು ಸ್ಥಿತಿ. ಆ ಸ್ಥಿತಿಯನ್ನು ತಲುಪಲು ಪ್ರತಿಯೊಬ್ಬ ಜನಸಾಮಾನ್ಯನೂ ಪ್ರಯತ್ನಿಸಿದ್ದೇ ಆದಲ್ಲಿ ಜಗತ್ತಿನಲ್ಲಿ ನಾವುಗಳು ಸಾಮಾನ್ಯವಾಗಿ ನೋಡುತ್ತಿರುವ, ಅನುಭವಿಸುತ್ತಿರುವ ದುಃಖ, ಸಮಸ್ಯೆಗಳು ಮತ್ತು ತಲ್ಲಣಗಳಿಗೆ ಪರಿಹಾರ ಹುಡುಕಿಕೊಳ್ಳಬಲ್ಲೆವು. ಅವನಲ್ಲಿ ಸಮಸ್ಯೆಯ ಪರಿಹಾರಕ್ಕೆಂದು ಬರುತ್ತಿದ್ದ ಫಲಾಪೇಕ್ಷಿಗಳೆಲ್ಲರಿಗೂ ಜೀವನ

ಸರ್ವ ಮಾನ್ಯತೆಗೆ ಒಳಗಾದ ದೈವೀ ಪುರುಷ ಬುದ್ಧ

ಸತ್ಯದ ಅರಿವಾಗುವಂತಹ ಪರೀಕ್ಷೆಗಳನ್ನು ಒಡ್ಡಿ ಬದುಕಿನ ವಾಸ್ತವತೆಯನ್ನು ಬೋಧಿಸುತ್ತಿದ್ದ ಬುದ್ಧ ಅಂದಿನ ಕಾಲಘಟ್ಟಕ್ಕೆ ಒಬ್ಬ ತತ್ವಜ್ಞಾನಿಯಾಗಿ ಪ್ರತಿನಿಧಿಸುತ್ತಾನೆ. ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಮಗುವನ್ನು ಕಳೆದುಕೊಂಡ ತಾಯಿಯನ್ನು ಮನೆ ಮನೆಗೆ ಕಳುಹಿಸಿ ಆ ಮೂಲಕ ಅವಳಿಗೆ ಸಾವಿನ ಅನಿವಾರ್ಯತೆಯನ್ನು ತಿಳಿಸಿದ್ದು ಬುದ್ಧನ ದೂರದರ್ಶಿತ್ವಕ್ಕೆ ಹಿಡಿದ ಕೈಗನ್ನಡಿ.

ಅತಿಥಿ ಸತ್ಕಾರಕ್ಕಾಗಿ ಕರೆದ ವೇಶ್ಯೆಯ ಆಹ್ವಾನವನ್ನು ಮನ್ನಿಸಿ ಜನರ ವಿರೋಧದ ನಡುವೆಯೂ ತನ್ನ ಶಿಷ್ಯನ ಮೇಲೆ ನಂಬಿಕೆಯಿಟ್ಟು ಅವನನ್ನು ಕಳುಹಿಸಿ ಕೊಡುತ್ತಾನೆ. ಕೆಲವೇ ದಿನಗಳಲ್ಲಿ ಶಿಷ್ಯ ಊರಿನವರ ಕೆಂಗಣ್ಣಿಗೆ ಬಿದ್ದರೂ ತನ್ನ ಸನ್ನಢತೆಯಿಂದಲೇ ಅವಳನ್ನೂ ಕೂಡ ಸ್ವಇಚ್ಛೆಯಿಂದಲೇ ಸನ್ಯಾಸತ್ವ ಸ್ವೀಕರಿಸುವಂತೆ ಮಾಡುತ್ತಾನೆ. ತನ್ನೊಂದಿಗೆ ಬುದ್ಧನಲ್ಲಿಗೆ ಕರೆದುಕೊಂಡು ಬಂದ ಆ ಶಿಷ್ಯನ ದೃಢತೆಯ ವ್ಯಕ್ತಿತ್ವವೆಂದರೆ ಅದು ಕೆಸರಿನಲ್ಲಿಯೂ ಮುಕ್ತವಾಗಿ ಅರಳುವ ತಾವರೆಯಂತೆ.

ಬುದ್ಧ ತಾನು ಹೇಗೆ ಬದುಕಿದನೋ ಅದೇ ರೀತಿಯಲ್ಲಿಯೇ ತನ್ನ ಶಿಷ್ಯವೃಂದಕ್ಕೆ ನೀಡಿದ ಉಪದೇಶವೂ ಆಗಿತ್ತು. ಇದೇ ದಿಕ್ಕಿನಲ್ಲಿ ನಡೆ, ಇದೇ ರೀತಿಯಲ್ಲಿ ನುಡಿ, ಇದೇ ಹಾದಿಯಲ್ಲಿ ಬದುಕು, ಎಲ್ಲವನ್ನೂ ಪರೀಕ್ಷಿಸು, ಸರಿಯಾಗಿದ್ದರೆ ಒಪ್ಪಿಕೊ, ಇಲ್ಲವೆಂದರೆ ಬಿಟ್ಟು ಬಿಡು. ಮನಸ್ಸೇ ಎಲ್ಲದರ ಮೂಲ ಹಾಗಾಗಿ ಅದನ್ನು ಪ್ರಜ್ಞಾಪೂರ್ವಕವಾಗಿ ಮುನ್ನಡೆಸು ಎಂದು ಸಾರುತ್ತಾ ತನ್ನ ಸ್ವಪ್ರಜ್ಞೆಯಿಂದ ಕಂಡುಕೊAಡ ಜೀವನಸತ್ಯಗಳನ್ನೇ ಇತರರಿಗೂ ಕಂಡುಕೊಳ್ಳುವAತೆ ಕರೆ ನೀಡಿದ. ವಿಷದ ಹೂವಿನಲ್ಲಿಯೂ ಒಂದು ಹನಿ ಜೇನು ಇದ್ದೇ ಇರುವುದು. ಅದನ್ನು ಹುಡುಕಿ ತೆಗೆಯುವ ಜೇನು ಹುಳುವಿನಂತೆ ನಾವುಗಳೂ ಬದುಕಿನಲ್ಲಿ ಅಡಗಿರುವ ಸಾರವನ್ನು ಹುಡುಕಿ ತೆಗೆಯುವ ಕಾರ್ಯವಾಗಬೇಕು. ಬುದ್ಧ ಹೇಳಿದ ಯಾವುದೇ ವಿಚಾರಗಳಿರಲಿ ಅವೆಲ್ಲವೂ ನಮ್ಮ ಬದುಕಿನೊಳಗೆ ಒಂದಲ್ಲ ಒಂದು ವಿಧದಲ್ಲಿ ಅನುಭವಕ್ಕೆ ಬರುವಂತಹದ್ದೇ. ಧರ್ಮ ಎಂಬ ಪದದ ಅರ್ಥವನ್ನು ತಮಗೆ ಬೇಕಾದಂತೆ ವ್ಯಾಖ್ಯಾನ ನೀಡಬಲ್ಲವರಿಗೆ ಅತ್ಯಂತ ಸರಳವಾಗಿ ಬುದ್ಧ ತಿಳಿಸಿಕೊಟ್ಟದ್ದು ಸರ್ವ ಸಮ್ಮತಿಗೆ ಬದ್ಧವಾಗಿದೆ. ನಮ್ಮ ಉಸಿರಾಟ ಕ್ರಿಯೆ ಎಷ್ಟು ಸಹಜವಾಗಿ ನಡೆಯುತ್ತಿದೆ ಎಂದರೆ ಒಂದು ಜೀವಿ ಬದುಕಲು ಬೇಕಾದಷ್ಟು ಉಸಿರನ್ನು ಮಾತ್ರ ಒಳಗೆಳೆದುಕೊಳ್ಳುವುದು, ಅದೇ ತನ್ನಿಂದ ಹೊರತಳ್ಳುವ ಉಸಿರಿನಿಂದ ಯಾವ ದುಗುಡವೂ ಆ ಜೀವಿಗಾಗದು. ಅದರ ಬಗೆ ಯೋಚನೆಯನ್ನು ನಾವು ಮಾಡಲಾರೆವು. ಒಳ ಹೊರಗಿನ ಕೊಡು ಕೊಳ್ಳುವಿಕೆಯ ಈ ಉಸಿರಾಟ ಪ್ರಕ್ರಿಯೆಯಲ್ಲಿ ಹೇಗೆ ಪ್ರತಿಯೊಂದು ಜೀವಗಳು ಬದುಕುತ್ತಿವೆಯೋ ಹಾಗೆಯೇ ನೈಸರ್ಗಿಕ ಮತ್ತು ಸಾಮಾಜಿಕ ವಸ್ತು ವಿಷಯಗಳಲ್ಲಿಯೂ ಇದೇ ತತ್ವಪಾಲನೆಯಾದಲ್ಲಿ ಧರ್ಮ ಪಾಲನೆಯಾದಂತೆಯೇ.

ಅತಿಯಾದ ಆಸೆ, ಸಂಗ್ರಹಕ್ಕೆ ಎಡೆಗೊಡುವ ಮನಸ್ಸಿನಿಂದಲೇ ಇಷ್ಟೆಲ್ಲಾ ಸಮಸ್ಯೆಗಳು. ನಮ್ಮ ಮನಸ್ಸು ಗಿಡಮರ-ನದಿಗಳಂತೆ. ಸುತ್ತಮುತ್ತಲಿ ನಲ್ಲಿರುವುದೆಲ್ಲಾ ನಮ್ಮೊಳಗೇ ಇದೆ. ನಾವು ಸುತ್ತಲಿರುವುದನ್ನು ನಾಶಪಡಿಸಿದರೆ ನಮ್ಮ ನಾಶವೂ ಅದರಿಂದಲೇ ಖಚಿತ. ಯಾರನ್ನಾದರೂ ವಂಚಿಸುತ್ತಿದ್ದೇವೆ ಎಂದಾದಲ್ಲಿ ಅದರ ಮೊದಲ ಪೆಟ್ಟು ನಮ್ಮ ಮೇಲೆಯೇ ಆಗಿರುತ್ತದೆ. ಪರಿಸರ ಸಂಬAಧಿ ಸಮಸ್ಯೆಗಳನ್ನು ಇಂದು ಎದುರಿಸುತ್ತಿರುವ ನಾವುಗಳು ಬುದ್ಧನ ಮಾತುಗಳ ಮೂಲಕ ಉತ್ತರ ಹುಡುಕಬೇಕಾಗಿದೆ. ಬುದ್ಧನ ಮಾತುಗಳು ಸಾರ್ವಕಾಲಿಕ ಸತ್ಯವಾದವುಗಳು ಎನ್ನುವುದಕ್ಕೆ ಇವೆಲ್ಲವೂ ಸಾಕ್ಷಿಗಳೇ. ಅವನು ನಡೆಸಿರುವ ಜೀವನ ಪ್ರಯೋಗಗಳೇ ನಮ್ಮ ಮುಂದಿರುವ ಉದಾಹರಣೆಗಳು.

ಪ್ರಾಪಂಚಿಕ ಜೀವನದ ಅನುಭವವೇ ಇಲ್ಲದೆ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗ ಆಕಸ್ಮಿಕವಾಗಿ ಶ್ರೀಸಾಮಾನ್ಯನ ಬದುಕನ್ನು ಹತ್ತಿರದಿಂದ ಗಮನಿಸುವಂತಹ ಸಂದರ್ಭ ಎದುರಾಗುತ್ತದೆ. ತಾನು ಇಲ್ಲಿವರೆಗೂ ನಡೆಸಿದ ಅರ್ಥವಿಲ್ಲದ ಬದುಕಿನ ಬಗೆಗೆ ಜಿಗುಪ್ಸೆಗೊಳಗಾದ ಸಿದ್ದಾರ್ಥ ಇನ್ನುಳಿದ ಬದುಕಿಗೆ ಸಾರ್ಥಕತೆ ನೀಡಲು ಹೊರಟಿದ್ದು ಏಕಾಂಗಿಯಾಗಿ. ತನ್ನ ಸ್ವಪ್ರಜ್ಞೆಯಿಂದ, ನಿರಂತರವಾದ ಸತತ ಪರಿಶ್ರಮದಿಂದ ಪಡೆದುಕೊಂಡ ಜೀವನ ಸತ್ಯಗಳು ಇಂದಿಗೂ ಪ್ರಸ್ತುತವೇ ಎಂದಾದಲ್ಲಿ ಬುದ್ಧ ತಲುಪಿದ ಸ್ಥಿತಿಯನ್ನು ಯಾರು ಬೇಕಾದರೂ ಹೊಂದಬಹುದು ಎನ್ನುವುದು ಸತ್ಯ. ಯಾವ ಪವಾಡಗಳೂ ನಡೆಯದೆ ತನ್ನದೇ ಪರಿಶ್ರಮದಿಂದ ಅರಿವಿನ ಹೊಳಪನ್ನು ಪಡೆಯುತ್ತಲೇ ಸಾಗಿದ ಬದುಕು ಅವನದು. ನಮ್ಮೊಳಗೇ ಇರುವ ಅಂತಃಶಕ್ತಿಯನ್ನು ಸದೃಢವಾಗಿರಿಸಿಕೊಂಡು ಬದುಕನ್ನು ಆದಷ್ಟು ಸರಳೀಕರಣಗೊಳಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ.

ಈಗಿನ ನಮ್ಮ ಬದುಕು ಹೇಗಿದೆಯೆಂದರೆ ಎಲ್ಲವೂ ಇದ್ದು ಏನೂ ಇಲ್ಲದವರಂತೆ, ಏನೋ ಕಳೆದುಕೊಂಡವರAತೆ ಪ್ರತಿಯೊಂದರಲ್ಲಿಯೂ ಹುಡುಕಾಟ, ಏನೋ ಪಡೆಯಲು ಹರಸಾಹಸ. ಸಿಗದಿದ್ದಾಗ ಪಾತಾಳಕ್ಕಿಳಿದಷ್ಟು ದುಃಖಿತರಾಗುತ್ತೇವೆ. ಆತ್ಮಹತ್ಯೆಗೂ ಶರಣಾದವರಿದ್ದಾರೆ. ನಮ್ಮನ್ನೇ ನಾವು ವೀಕ್ಷಕ ಸ್ಥಾನದಲ್ಲಿರಿಸಿಕೊಂಡು ಇತರರ ಬದುಕನ್ನೊಮ್ಮೆ ಅವಲೋಕಿಸಿ ನೋಡುವಾಗ ಹಲವು ಕೊರತೆಗಳು ಕಾಣಸಿಗುತ್ತವೆ. ಆ ಎಲ್ಲಾ ಕೊರತೆಗಳನ್ನು ನೀಗಿಸಿಕೊಳ್ಳುವ ಹಾದಿ ಯಾವುದು? ಆ ಹಾದಿಯಲ್ಲಿ ಸಾಗಬೇಕಾದರೆ ನಮ್ಮ ಮಾನಸಿಕ ಸ್ಥಿಮಿತತೆ ಹೇಗಿರಬೇಕು? ಇವು ನಮ್ಮ ಶಿಕ್ಷಣ ವ್ಯವಸ್ಥೆ ಒದಗಿಸಲೇಬೇಕಾದ ನೈತಿಕ ಮೌಲ್ಯಗಳಾಗಿವೆ. ತಾನು ತನ್ನ ಪರಿವಾರ ಅರಮನೆಯಲ್ಲಿ ಸುಖಿಗಳಾಗಿ ಕಳೆದಿದ್ದೇವೆ. ಆದರೆ ಸಾಮಾನ್ಯರ ಬದುಕು ಇನ್ನಿಲ್ಲದಷ್ಟು ಅಸ್ತವ್ಯಸ್ತಗೊಂಡಿದೆಯೆAದಾದ ಮೇಲೆ ಅವರಿಗಿಲ್ಲದ ಸುಖ ತನಗೂ ಬೇಡ ಎಂಬ ಸಿದ್ದಾರ್ಥನ ನಿರ್ಧಾರ ಇಂದು ಅದೆಷ್ಟೋ ಜೀವನ ಸತ್ಯವನ್ನು ಬುದ್ಧನಿಂದಾಗಿ ತಿಳಿಯುವಂತಾಗಿದೆ. "ಬಹುಜನ ಹಿತಾಯ ಬಹುಜನ ಸುಖಾಯ" ಸೂತ್ರದಲ್ಲಿದೆ ಮಾನವ ಕಲ್ಯಾಣ. ಇದೊಂದನ್ನೇ ತನ್ನ ಜೀವನದ ಮೂಲ ಗುರಿಯನ್ನಾಗಿಸಿಕೊಂಡ ಬುದ್ಧ ಇಂದು ಸರ್ವ ಮಾನ್ಯತೆಗೆ ಒಳಗಾದ ದೈವೀಪುರುಷ. ಅವನಲ್ಲಿದ್ದ ಮೌಲ್ಯಗಳ ಒಂದAಶವಾದರೂ ಪ್ರಜಾಪಾಲಕರಾದ ನಮ್ಮ ರಾಜಕೀಯ ಧುರೀಣರಿಂದ ಪಾಲನೆಯಾದಲ್ಲಿ ನಾಡು ಸಕಲ ಸಂಪನ್ನವಾಗುವುದರಲ್ಲಿ ಸಂಶಯವಿರಲಾರದು. ಶ್ರೀಸಾಮಾನ್ಯನಿಂದ ಹಿಡಿದು ರಾಜನಾದವನವರೆಗೂ ಅವರವರ ಕರ್ತವ್ಯ, ಜವಾಬ್ದಾರಿಯನ್ನು ಅರಿತು ನಡೆಯುವ ಮಾರ್ಗವನ್ನು ಸೂಚಿಸಿದ ಕೈವಲ್ಯ ಜ್ಞಾನಿಯೆನಿಸಿದ ಬುದ್ಧನ ವಿಚಾರಧಾರೆಗಳಿಂದು ಭಾರತ ಮಾತ್ರವಲ್ಲದೆ ಪಾಶ್ಚಾತ್ಯ ರಾಷ್ಟçಗಳಿಂದಲೂ ಮಾನ್ಯತೆಗೊಳಗಾಗಿದೆ ಎಂದಾದಲ್ಲಿ ಅವುಗಳಲ್ಲಿರುವ ಸತ್ವವನ್ನು ಮುಕ್ತವಾಗಿ ಸ್ವೀಕರಿಸೋಣ, ಬದುಕಿನಲ್ಲಿ ಅಳವಡಿಸಿಕೊಳ್ಳೋಣ.

- ಪ್ರತಿಮಾ ಹರೀಶ್ ರೈ,

ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.