*ಗೋಣಿಕೊಪ್ಪ, ಮೇ ೨೩: ನಾಮಫಲಕದಲ್ಲಿ ಕನ್ನಡ ಕಡ್ಡಾಯ ನಿಯಮ ಅನುಷ್ಠಾನಗೊಳಿಸಲು ವರ್ಷದ ಕೊನೆಯವರೆಗೆ ಸಮಯಾವಕಾಶ ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೋಣಿಕೊಪ್ಪ ಸ್ಥಾನೀಯ ಸಮಿತಿ ಒತ್ತಾಯಿಸಿದೆ.

ಕಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಿತಿ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿ ಅಧ್ಯಕ್ಷ ಸುನಿಲ್ ಮಾದಪ್ಪ, ಸರ್ಕಾರ ಮೇ ತಿಂಗಳ ಅಂತ್ಯಕ್ಕೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಸೂಚನೆ ನೀಡಿದೆ. ಶೇ. ೬೦ ರಷ್ಟು ಕನ್ನಡ ಬಳಕೆಗೆ ನಿರ್ದೇಶನವಿದೆ. ಕನ್ನಡ ಬಳಕೆಗೆ ನಮ್ಮ ಪ್ರೋತ್ಸಾಹವಿದೆ. ಆದರೆ, ನಾಮಫಲಕ ಬದಲಿಸಿ ಮರು ಸ್ಥಾಪನೆಗೆ ಎಲ್ಲಾ ವರ್ತಕರಿಗೂ ಸಮಯಾವಕಾಶದ ಅವಶ್ಯಕತೆ ಇದೆ. ಬೇರೆ ಬೇರೆ ರೀತಿಯ ಫಲಕಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಶೇ. ೬೦ ರಷ್ಟು ಬದಲಾವಣೆ ಹಿನ್ನೆಲೆ ಫಲಕವನ್ನು ಬದಲಾಯಿಸಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅವಕಾಶ ನೀಡಬೇಕು. ವರ್ತಕರು ಕೂಡ ಕನ್ನಡ ಬಳಕೆ ನಿಯಮವನ್ನು ಪಾಲಿಸಲು ಬದ್ಧರಾಗಿದ್ದೇವೆ ಎಂದರು.

ನಿಯಮ ಪಾಲಿಸದ ವರ್ತಕರಿಗೆ ಹೆಚ್ಚು ದಂಡ, ಲೈಸೆನ್ಸ್ ರದ್ದುಪಡಿಸುವ ಕ್ರಮವನ್ನು ವರ್ಷಾಂತ್ಯದ ನಂತರ ಪಾಲಿಸಲು ಕ್ರಮಕೈಗೊಳ್ಳಲಿ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಹೆಬ್ಬಾಲೆ ಬೋಡ್ ನಮ್ಮೆಯಲ್ಲಿ ವೇಷಧಾರಿಗಳು ಮನೆ ಮನೆಗಳಿಗೆ ತೆರಳುವ ಆಚರಣೆ ಬದಲಾಗುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ದಿನ ಮುಂಚೆ ಹಣಕ್ಕಾಗಿ ಪಟ್ಟಣಕ್ಕೆ ಆಗಮಿಸುವ ವೇಷಧಾರಿಗಳು ಹಣಕ್ಕಾಗಿ ಒತ್ತಾಯಿಸುವುದು. ಮಹಿಳೆಯರಿಗೆ ಕಿರಿಕಿರಿ ನೀಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಹಬ್ಬಕ್ಕೆ ಮುಂಚೆ ಪೊಲೀಸ್ ಇಲಾಖೆ ಸಭೆ ಕೂಡ ನಡೆದಿಲ್ಲ. ಹಬ್ಬದ ಆಚರಣೆಗೆ ಬದ್ಧವಾಗಿರುವಂತೆ ಕ್ರಮ ಕೈಗೊಳ್ಳಬೇಕಿದೆ. ಹೀಗೆ ಮುಂದುವರಿದರೆ ಮುಂದೊAದು ದಿನ ಗೋಣಿಕೊಪ್ಪ ಪಟ್ಟಣಗಳಲ್ಲಿ ಅಂಗಡಿ-ಮುAಗಟ್ಟು ಮುಚ್ಚುವ ಅನಿವಾರ್ಯತೆ ಎದುರಾಗಬಹುದು ಎಂದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುನಿಲ್ ಮಾದಪ್ಪ, ಖಜಾಂಚಿಯಾಗಿ ಆಯ್ಕೆಯಾಗಿರುವ ಪೊನ್ನಿಮಾಡ ಸುರೇಶ್, ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ, ರೋಟರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸುಮಿ ಸುಬ್ಬಯ್ಯ ಅವರುಗಳನ್ನು ಅಭಿನಂದಿಸಲಾಯಿತು.

ಸಮಿತಿ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಕಾರ್ಯದರ್ಶಿ ಗಣೇಶ್ ರೈ, ಖಜಾಂಚಿ ಪಿ.ಜಿ. ಮನೋಹರ್, ನಿರ್ದೇಶಕರಾದ ಗಿರೀಶ್ ಗಣಪತಿ, ಅರುಣ್ ಪೂಣಚ್ಚ, ಹೆಚ್.ವಿ. ಕೃಷ್ಣಪ್ಪ, ರಾಜಶೇಖರ್, ಸುಮಿ ಸುಬ್ಬಯ್ಯ, ಎಂ.ಸಿ. ಅನಿತಾ ಇದ್ದರು.