ವೀರಾಜಪೇಟೆ, ಮೇ ೨೩: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನನ್ನು ಕಾಡಾನೆ ಬೆನ್ನಟ್ಟಿದ ಘಟನೆ ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದ ಪುದುಕೋಟೆ ಸಮೀಪ ಗುರುವಾರ ಬೆಳಗ್ಗೆ ೭.೨೦ರ ಸಮಯದಲ್ಲಿ ನಡೆದಿದೆ.

ಚೆಂಬೆಬೆಳ್ಳೂರು ಗ್ರಾಮದ ಪುದುಕೋಟೆ ಭದ್ರಕಾಳಿ ದೇವಾಲಯ ಸಮೀಪದ ನಿವಾಸಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಕೆ.ಟಿ. ಚಂಗಪ್ಪ ಎಂಬ ವಿದ್ಯಾರ್ಥಿ ಕಾಲೇಜಿಗೆ ತೆರಳಲು ಬಸ್‌ಗಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಎದುರಾದ ಕಾಡಾನೆ ಆತನನ್ನು ಬೆನ್ನಟ್ಟಿದೆ. ಚಂಗಪ್ಪ ಓಡಿ ಕಾಡಾನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದು, ಓಡುವ ಸಂದರ್ಭ ಕಾಂಕ್ರಿಟ್ ರಸ್ತೆಗೆ ಬಿದ್ದು ಗಾಯಗಳಾಗಿ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಘಟನೆಯ ವಿವರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಆತನನ್ನು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಮರಿ ಆನೆಗಳೊಂದಿಗೆ ಮೂರಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಾ ಜನರಿಗೆ ಭೀತಿ ಹುಟ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎಸಿಎಫ್ ನೆಹರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಘಟನೆ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.