ಮಡಿಕೇರಿ, ಮೇ ೨೨: ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ಆಶ್ರಯವಾಗಬೇಕಿದ್ದ ಪುನರ್ವಸತಿ ಕೇಂದ್ರವು ಇಂದು ಸಮಸ್ಯೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಮಾದಾಪುರ ಬಳಿಯ ಜಂಬೂರು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಬಡಾವಣೆಯಲ್ಲಿನ ೩೮೩ ಮನೆಗಳ ಶೌಚಾಲಯದ ನೀರು ಚರಂಡಿಯಲ್ಲಿ ನಿಂತ ಸ್ಥಿತಿಯಲ್ಲಿಯೇ ಇದ್ದು, ದುರ್ವಾಸನೆ ತಾಳಲಾರದೆ ಅಲ್ಲಿನ ನಿವಾಸಿಗಳು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಲ್ಲಿನ ನಿವಾಸಿಗಳು ಸಾಂಕೇತಿಕವಾಗಿ ಮೂಗನ್ನು ಮುಚ್ಚಿ ಪ್ರತಿಭಟಿಸಿದ್ದು, ಸ್ಥಳೀಯ ಪಂಚಾಯಿತಿಗೆ ಮನವಿ ಸಲ್ಲಿಸಿ ಯಾವುದೇ ಪ್ರಯೋಜನವಾಗದ ಕಾರಣ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಪತ್ರದ ಮುಖಾಂತರ ಸಮಸ್ಯೆ ಬಗೆಹರಿಯುವಿಕೆಗೆ ಕೋರಿದ್ದಾರೆ.

ಶೌಚಾಲಯದ ತ್ಯಾಜ್ಯವು ಯು.ಜಿ.ಡಿ. ಪೈಪುಗಳ ಮೂಲಕ ಸರಾಗವಾಗಿ ಹರಿಯಬೇಕಿದ್ದು, ಪೈಪುಗಳು ಒಡೆದು ಹೋಗಿರುವ ಕಾರಣ ಮಲ, ಮೂತ್ರ ತ್ಯಾಜ್ಯವು ಚರಂಡಿಯಲ್ಲಿಯೇ ಹಲವು ದಿನಗಳ ಕಾಲ ನಿಂತ ಪರಿಣಾಮ ದುರ್ವಾಸನೆ ಹಬ್ಬಿದ್ದು, ಬಡಾವಣೆಯ ಮನೆಗಳ ಬಾಗಿಲು ತೆರೆಯಲೂ ಕಷ್ಟ ಸಾಧ್ಯವಾಗಿದೆ. ಅಲ್ಲದೆ ಬಡಾವಣೆಯ ಹಿಂಬದಿ ಕಸ ವಿಲೇವಾರಿಗೆ ಗುಂಡಿ ತೋಡಲಾಗಿದ್ದು, ಮಾದಾಪುರ ಪಟ್ಟಣದಲ್ಲಿನ ಕಸವನ್ನೂ ಪಂಚಾಯಿತಿಯ ಟ್ರಾö್ಯಕ್ಟರ್ ಮೂಲಕ ಇಲ್ಲೇ ವಿಲೇವಾರಿ ಮಾಡಲಾಗುತ್ತಿದ್ದು, ಗುಂಡಿ ತುಂಬಿರುವ ಪರಿಣಾಮ ಹೊರಭಾಗದಲ್ಲಿಯೇ ಕಸವನ್ನು ಎಸೆಯಲಾಗುತ್ತಿರುವುದಾಗಿ ಸ್ಥಳೀಯ ನಿವಾಸಿಗಳಾದ ಸತ್ಯನಾರಾಯಣ ಅವರು ‘ಶಕ್ತಿ’ಯೊಂದಿಗೆ ದೂರಿಕೊಂಡಿದ್ದಾರೆ.

ಪಂಚಾಯಿತಿಯಿAದ ಯಾವುದೇ ಸ್ಪಂದನ ದೊರಕದೆ ಇರುವ ಕಾರಣ ಬಡಾವಣೆಯ ಬಹುತೇಕ ಎಲ್ಲರೂ ಸಹಿ ಮಾಡಿರುವ ಮನವಿ ಪತ್ರವನ್ನು ಇಂದು ಜಿಲ್ಲಾಧಿಕಾರಿಗೆ ನೀಡಲಾಗಿದ್ದು, ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಕೋರಿದ್ದಾರೆ.