ಕರಿಕೆ, ಮೇ ೨೩: ಇಲ್ಲಿಗೆ ಸಮೀಪದ ಆಲತ್ತಿಕಡವು ಬಳಿಯ ಕರ್ನಾಟಕ ಹಾಗೂ ಕೇರಳದ ಮೀಸಲು ಅರಣ್ಯ ಪ್ರದೇಶದ ಒತ್ತಿನ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಕರಿಕೆಯ ನುರಿತ ಬೇಟೆಗಾರರ ತಂಡವನ್ನು ಪರವಾನಿಗೆ ರಹಿತ ಎರಡು ನಾಡ ಬಂದೂಕು ಸಹಿತ ಬಂಧಿಸುವಲ್ಲಿ ಕೇರಳದ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕರಿಕೆ ಎಳ್ಳುಕೊಚ್ಚಿ ಮರಾಠಿ ಮೂಲೆ ನಿವಾಸಿ ನಿಶಾಂತ್, ಆಲತ್ತಿಕಡವುನ ನಾರಾಯಣ, ಮಹೇಶ್ ಬಂಧಿತರು. ತಂಡದೊAದಿಗೆ ಉಳಿದ ಮೂವರು ಕಾರ್ಯಾಚರಣೆ ಸಂದರ್ಭದಲ್ಲಿ ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಿರಂತರವಾಗಿ ಕಾಟಿ ಹಾಗೂ ಕಡವೆ ಬೇಟೆ ಮಾಡಿ ಕೇರಳಕ್ಕೆ ಮಾಂಸ ಸಾಗಾಟ ನಡೆಸುವ ತಂಡ ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಕೊಡಗಿನ ಅರಣ್ಯ ಅಧಿಕಾರಿಗಳು ಪ್ರತ್ಯೇಕ ತಂಡ ರಚಿಸಿ ಈ ದಂಧೆಯನ್ನು ಬಯಲಿಗೆಳೆಯಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.