ವೀರಾಜಪೇಟೆ, ಮೇ ೨೩: ತಿತಿಮತಿ ದೇವರಪುರ ದಲ್ಲಿ ನಡೆಯುತ್ತಿರುವ ಭದ್ರಕಾಳಿ ದೇವರ ಬೇಡು ಹಬ್ಬದ ಪ್ರಯುಕ್ತ ವೇಷ ಧಾರಿಯಾಗಿ ನರ್ತಿಸಿದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ವೀರಾಜಪೇಟೆ ಯಲ್ಲಿ ನಡೆದಿದೆ.

ಸಂತೆ ದಿನವಾದ ಬುಧವಾರ ತನ್ನ ಕುಟುಂಬದ ಸದಸ್ಯರ ಜೊತೆಯಲ್ಲಿ ಕುಣಿದು ಕುಪ್ಪಳಿಸಿ ಬೇಡುಹಬ್ಬದ ಹಣದಲ್ಲಿ ಮತ್ತಷ್ಟು ಮದ್ಯ ಸೇವಿಸಿದ ರಮೇಶ ಎಂಬಾತ ಬುಧವಾರ ಸಂಜೆ ವೇಳೆಗೆ ಮಳೆ ಬಂದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಮಲಗಿದ್ದ. ಗುರುವಾರ ಬೆಳಿಗ್ಗೆ ಸಾರ್ವಜನಿಕರು ಇದನ್ನು ಗಮನಿಸಿ ವೀರಾಜಪೇಟೆ ನಗರ ಠಾಣೆಗೆ ಮಾಹಿತಿ ನೀಡಿದ್ದರು.

ನಗರ ಪೊಲೀಸರು ಈ ವ್ಯಕ್ತಿಯನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆÀದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷೆ ನಡೆಸಿ ನಿನ್ನೆ ರಾತ್ರಿಯೇ ಈ ವ್ಯಕ್ತಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ ಮೇರೆಗೆ ಪೊಲೀಸರು ಈತನ ಗುರುತು ಪತ್ತೆಗೆ ಹುಡುಕಾಟ ನಡೆಸಿದ್ದರು.

ಖಾಸಗಿ ಬಸ್ ನಿಲ್ದಾಣದ ಕೆಲವು ಅಂಗಡಿಯ ಸಿ.ಸಿ ಕ್ಯಾಮರಾ ದೃಶ್ಯದಲ್ಲಿ ಈ ವ್ಯಕ್ತಿ ನೃತ್ಯ ಮಾಡುತ್ತಿರುವುದು ಕಂಡು ಬಂದಿತ್ತು.

ಮೃತ ಪಟ್ಟ ವ್ಯಕ್ತಿ ರಮೇಶ ವಿರಾಜಪೇಟೆ ಹೊರವಲಯದ ಕೋಡಿರ ಪ್ರವೀಣ್ ಅವರ ತೋಟದ ಕಾರ್ಮಿಕ ಹಾಗೂ ಅವರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದ ರಮೇಶನಿಗೆ ಮೂವರು ಮಕ್ಕಳು ಇದ್ದು, ರಮೇಶನಿಗೆ ಬಿ.ಪಿ. ಜಾಸ್ತಿ ಇತ್ತು ಎಂದು ಅವರ ಪುತ್ರಿ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ರಮೇಶ ಅವರ ಪತ್ನಿ ಭವಾನಿ ಪೊಲೀಸ್ ಠಾಣೆಗೆ ಪುಕಾರು ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.