ವೀರಾಜಪೇಟೆ, ಮೇ ೨೩: ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಪಡ, ಐಂಗಾಲ ಮತ್ತು ಮಗ್ಗುಲ ಗ್ರಾಮಗಳ ಆರಾಧ್ಯ ದೇವಿಯಾದ ಶ್ರೀ ಭದ್ರಕಾಳಿಯ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ನಡೆದು ಸಂಪನ್ನಗೊAಡಿತು. ತಾ.೧೯ ರಂದು ರಾತ್ರಿ ಮೂರು ಗ್ರಾಮಗಳ ದೇವ ಬನದಿಂದ ದೇವಿಯನ್ನು ಬರಮಾಡಿಕೊಂಡು ಕಳಿ ಹಾಕಲಾಯಿತು. ನಂತರ ವಿವಿಧ ವೇಷಭೂಷಣಗಳನ್ನು ಧರಿಸಿ, ಮನೆಮನೆಗಳಿಗೆ ತೆರಳಿ ಕಳಿ ಪ್ರದರ್ಶನ ಮಾಡಲಾಯಿತು. ತಾ.೨೦ ರಂದು ಸಂಜೆ ೫ ಗಂಟೆಯ ವೇಳೆಯಲ್ಲಿ ದೇಗುಲ ಪ್ರವೇಶ ಮಾಡಿದ ವೇಷಧಾರಿಗಳು ದೇಗುಲದ ಮೂರು ಪ್ರದಕ್ಷಿಣೆ ಬಂದು ದೇವಿಗೆ ನಮಸ್ಕರಿಸಿ ಮನೆಗಳಿಗೆ ಹಿಂದಿರುಗಿದರು. ದೇಗುಲದಲ್ಲಿ ಆರ್ಚಕರಿಂದ ದೇವಿಗೆ ವಿಶೇಷ ಪೂಜೆ, ಅರ್ಚನೆಗಳು ನಡೆದವು. ತಾ.೨೨ ರಂದು ಮಧ್ಯಾಹ್ನ ಎರಡು ಗಂಟೆಯ ನಂತರ ಮೂರು ಗ್ರಾಮಗಳಿಂದ ತಲಾ ಎರಡು ಕುದುರೆಗಳಂತೆ ಒಟ್ಟು ಆರು ಕುದುರೆಗಳನ್ನು ಒಳಗೊಂಡAತೆ ಗ್ರಾಮಸ್ಥರು ಮಗ್ಗುಲ ಗ್ರಾಮದ ಮಾಚೆಟ್ಟಿಪಾರೆ (ಮಾನಿ)ಯಲ್ಲಿ ಕುದುರೆಗಳ ಸಮಾಗಮವಾಯಿತು. ಮಾನಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದು ಕುದುರೆಗಳು ದೇಗುಲಕ್ಕೆ ಆಗಮನವಾಗಿ ದೇವಿಯ ದರ್ಶನ ಪಡೆದು ಹಿಂದಿರುಗಿದವು. ತಾ.೨೩ ರಂದು ಕುಂದಾ ಚೂಳೆ ನಡೆದು ದ್ವಿವಾರ್ಷಿಕ ಬೋಡ್ ನಮ್ಮೆ ಸಂಪನ್ನಗೊAಡಿತ್ತು.

ಬೋಡ್ ನಮ್ಮೆಯಲ್ಲಿ ವಿವಿಧ ಬಗೆಯ ವೇಷಭೂಷಣಗಳು, ಹುಲಿವೇಷ, ಕೇರಳ ರಾಜ್ಯದ ತಂಬೂರಾಟಿ ಪೆಣ್ ಸೇರಿದಂತೆ ನಾನಾ ಬಗೆಯ ವೇಷಾಧಾರಿಗಳು ಗಮನ ಸೆಳೆದರು.

ಗ್ರಾಮತಕ್ಕರು, ಗ್ರಾಮದ ಪ್ರಮುಖರು, ದೇಗುಲ ಸಮಿತಿಗಳ ಪದಾಧಿಕಾರಿಗಳು, ಮೂರು ಗ್ರಾಮಗಳ ಗ್ರಾಮಸ್ಥರು, ಅಸಂಖ್ಯಾತ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ